ಥಿಯೇಟರ್‌ಗೆ ಒಲಿಯದ ಸರ್ಕಾರ, ಕೋವಿಡ್ ನಿಯಮ ಸಡಿಲಿಕೆಯಿಲ್ಲ: ವ್ಯಾಪಕ ವಿರೋಧ
ಸತತ ಎರಡು ವರ್ಷಗಳಿಂದ ಚಿತ್ರರಂಗ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಕೋವಿಡ್ ಮಹಾಮಾರಿಯ ಕಾಟದಿಂದ ಒಂದು ಕಡೆ ಅಮೂಲ್ಯ ರತ್ನಗಳಂತಿದ್ದ ಕಲಾವಿದರನ್ನು ಕಳೆದುಕೊಂಡರೆ, ಇನ್ನೊಂದು ಕಡೆ ಚಿತ್ರರಂಗವನ್ನೇ ನಂಬಿ ಬದುಕುತ್ತಿದ್ದ ಅದೆಷ್ಟೋ ಕಲಾವಿದರು, ಸಿಬ್ಬಂದಿಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದಲ್ಲದೆ, ಲಾಕ್‌ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, ಮಾಲ್ ಬಂದ್, ಥಿಯೇಟರ್ ಬಂದ್ ಈ ಎಲ್ಲ ಪದಗಳು ಸಿನಿಪ್ರಿಯರ ಹಾಗೂ ಸಿನಿಕಲಾವಿದರ ಕಿವಿಯಲ್ಲಿ ರಕ್ತ ಬರುವಂತೆ ಮಾಡಿವೆ. ರಂಗವನ್ನೇ ಆಸರೆ ಮಾಡಿಕೊಂಡ ಕಲಾವಿದರಿಂದ ಹಿಡಿದು ಥಿಯೇಟರ್‌ನಲ್ಲಿ ಲೈಟ್ ಬಿಡುವ ಸಿಬ್ಬಂದಿಗಳ ತನಕ ಬದುಕಿಗೆ ಬೇರೆ ಗತಿಯಿಲ್ಲದೆ ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಎದುರಾಗಿದ್ದಂತೂ ಸತ್ಯ. ಕಾಯಿಲೆಯ ಪರಿಣಾಮವೂ ಹಾಗೆಯೇ ಇದೆ ಬಿಡಿ.
ಆದರೆ, ಈಗ ನೋವು ಅದಲ್ಲ. ಈಗಾಗಲೇ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಹಾವಳಿಯಿಂದ ಅರ್ಧಕ್ಕರ್ಧ ಚಿತ್ರಮಂದಿರಗಳು ಪುನಃ ಬಾಗಿಲು ತೆರೆದರೂ ಮುಚ್ಚುವ ಪರಿಸ್ಥಿತಿ ಬರಬಹುದೇನೋ ಎನ್ನುವ ಭೀತಿಯಲ್ಲಿವೆ. ಈ ಸಂದರ್ಭದಲ್ಲಿ ಸರ್ಕಾರದ ಹೊಸ ಮಾರ್ಗಸೂಚಿ ಅಥವಾ ಸಡಿಲಿಕೆ ಸಿನಿಪ್ರಿಯರನ್ನು ಹಾಗೂ ಕನ್ನಡ ಚಿತ್ರರಂಗವನ್ನು ಕೆರಳುವಂತೆ ಮಾಡಿದೆ.
ನಿನ್ನೆಯಷ್ಟೇ ಕರ್ನಾಟಕ ಸರ್ಕಾರವು ಕೋವಿಡ್ ಮಾರ್ಗಸೂಚಿಗಳಲ್ಲಿ ಬಹುತೇಕ ಎಲ್ಲ ಸಡಿಲಿಕೆಗಳನ್ನು ನೀಡಿದ್ದು, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, ಬಸ್‌ಗಳಲ್ಲಿ 50:50, ಹೋಟೆಲ್, ರೆಸ್ಟೋರೆಂಟ್, ಪಬ್ ಈ ಎಲ್ಲದಕ್ಕೂ ಸಂಪೂರ್ಣ ವಿನಾಯಿತಿ ನೀಡಿದ್ದು, ಕರ್ನಾಟಕದ ಜನತೆ ಖುಷಿಪಟ್ಟರೂ, ಚಿತ್ರರಂಗಕ್ಕೆ ಯಾವುದೇ ಸಡಿಲಿಕೆಗಳನ್ನು ನೀಡದಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಜಿಮ್, ಈಜುಕೊಳಗಳಿಗೆ 50:50 ನಿಯಮದ ಜೊತೆಗೆ ಥಿಯೇಟರ್ ಗೂ 50:50 ಅವಕಾಶ ನೀಡಿರುವುದೇ ಸಿನಿಪ್ರಿಯರ ಈ ಕೋಪಕ್ಕೆ ಕಾರಣ. ಬಹುತೇಕ ಜನಸಂದಣಿ ಸೇರುವ ಎಲ್ಲ ವ್ಯವಸ್ಥೆಗಳಿಗೂ ವಿನಾಯಿತಿ ನೀಡಿ, ಚಿತ್ರರಂಗಕ್ಕೆ ಅರ್ಧ ಅವಕಾಶ ನೀಡಿರುವುದನ್ನು ಜನತೆ ಪ್ರಶ್ನಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟರು, ನಿರ್ಮಾಪಕರು, ನಿರ್ದೇಶಕರು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿದ್ದು, ಈ ಕುರಿತು ಸರ್ಕಾರದ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಕೋವಿಡ್ ಮೂಲ ನಿಯಮಗಳನ್ನು ಅನುಸರಿಸಲು ಸಿದ್ಧರಿದ್ದೇವೆ, ಆದರೆ ಈ ರೀತಿ ಅನ್ಯಾಯ ಸರಿಯಲ್ಲ ಎಂದು ಕೆಲವರು ಪ್ರಶ್ನಿಸಿದರೆ, ಸಿನೆಮಾ ಕಲಾವಿದರ ನೋವು ಸರ್ಕಾರಕ್ಕೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಇನ್ನು ಕೆಲವರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಏನೇ ಆಗಲಿ, ಸರ್ಕಾರದ ಕೋವಿಡ್ ಮಾರ್ಗಗಸೂಚಿಗಳನ್ನುಅನುಸರಿಸಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯವಾದರೂ, ಸ್ಪಷ್ಟ ಮಾರ್ಗಸೂಚಿಗಳೊಂದಿಗೆ ಹಾಗೂ ಉಲ್ಲಂಘಿಸಿದಲ್ಲಿ ಕಠಿಣ ಕ್ರಮಗಳೊಂದಿಗೆ ಸರ್ಕಾರ ಥಿಯೇಟರ್‌ಗಳಿಗೂ ಸಂಪೂರ್ಣ ವಿನಾಯಿತಿ ನೀಡಲಿ ಎನ್ನುವ ಕೂಗಿಗೆ ಸ್ಪಂದನೆ ಸಿಗಲಿ ಎಂದು ಆಶಿಸೋಣ.