ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು
ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು
ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹುಟ್ಟು ಹಬ್ಬದ ಶುಭಶಾಯಗಳು.
ರಾಜ್‌ಕುಮಾರ್
ಜನನ : ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು
24-04-1929
ಗಾಜನೂರು,ತಮಿಳುನಾಡು,
ಮದ್ರಾಸ್ ಪ್ರೆಸಿಡೆನ್ಸಿ,ಭಾರತ.ಮರಣ : 12 ಏಪ್ರಿಲ್ 2006 (ತೀರಿದಾಗ ವಯಸ್ಸು 76)
ಬೆಂಗಳೂರು, ಕರ್ನಾಟಕ, ಭಾರತ.ಸ್ಮಾರಕಗಳು : ಕಂಠೀರವ ಸ್ಟೂಡಿಯೋಸ್
ಇತರೆ ಹೆಸರುಗಳು :
ಡಾ.ರಾಜ್‌ಕುಮಾರ್, ಅಣ್ಣಾವ್ರು, ಗಾನ ಗಂಧರ್ವ, ಬಂಗಾರದ ಮನುಷ್ಯ
ವೃತ್ತಿ : ನಟ, ಗಾಯಕ
ಸಕ್ರಿಯ ವರುಷಗಳು : 1954–2005
ಶೀರ್ಷಿಕೆ : ಡಾಕ್ಟರೇಟ್ ಪದವಿ
ಮೈಸೂರು ವಿಶ್ವವಿದ್ಯಾಲಯದಿಂದಚಳುವಳಿ : ಗೋಕಾಕ್ ಚಳವಳಿ
ಬಾಳಸಂಗಾತಿ : ಪಾರ್ವತಮ್ಮ ರಾಜ್‌ಕುಮಾರ್
ಮಕ್ಕಳು :
ಶಿವರಾಜ್‍ಕುಮಾರ್
ಪುನೀತ್ ರಾಜ್‍ಕುಮಾರ್
ರಾಘವೇಂದ್ರ ರಾಜ್‍ಕುಮಾರ್
ಪೂರ್ಣಿಮ
ಲಕ್ಷ್ಮಿಜಾಲತಾಣ : Raj-Kumar.com
ಡಾ ರಾಜ್ ರವರ ಬಗ್ಗೆ ಒಂದು ಕಿರು ಪರಿಚಯ
ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ:ಏಪ್ರಿಲ್ 24, 1929 – ಮರಣ: ಏಪ್ರಿಲ್ 12, 2006)
ಕರ್ನಾಟಕಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. 2000 ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, 108 ದಿನಗಳ ನಂತರ ಬಿಡುಗಡೆಯಾಗಿದ್ದರು. 2006 ಏಪ್ರಿಲ್ 12ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ.ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಎಂದರೆ 1930-1950 ಕಾಲದಲ್ಲಿ ಕನ್ನಡ ರಂಗಭೂಮಿಯ ದೊಡ್ಡ ಹೆಸರು.
ರೌದ್ರ ಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ ನಿಂತಿತು.ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತು ರಾಜ್‌ಗೆ ಅವರಿಂದಲೇ ತರಬೇತಿಯಾಯಿತು.
ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸುತ್ತಿದ್ದರು. ಡಾ.ರಾಜ್‌ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ. ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ : “ಇಂತಹ ಸಾಧನೆ ನಿನ್ನಿಂದ ಸಾಧ್ಯ” ಎಂದು ಪುಟ್ಟಸ್ವಾಮಯ್ಯನವರು ಮಗನ ಭವಿಷ್ಯವನ್ನು ಅಂದೇ ನುಡಿದಿದ್ದರು. ಅದು ನಿಜವಾಯಿತು.”ನನ್ನ ತಂದೆ ರಂಗದ ಮೇಲೆ ಹುರಿ ಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು” ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲುಪ್ರಿಯ. “ನಾನೂ ಅದೇ ರೀತಿ ಮಾಡಬೇಕೆಂದು ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯ ಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ; ಆದರೆ ಬರಲಿಲ್ಲ” ಎಂದು ಹೇಳಿದ್ದಾರೆ.ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ “ಕೃಷ್ಣಲೀಲಾ” ಎಂಬ ನಾಟಕದಲ್ಲಿ ಸಣ್ಣ ಪಾತ್ರ ದೊರಕಿತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯ ನವರು ಗುಬ್ಬಿ ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ “ಅಂಬರೀಷ” ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು.ಅನಂತರ “ಕುರುಕ್ಷೇತ್ರ” ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ ಮಗ ಅರ್ಜುನನ ಪಾತ್ರ.
ರಾಜ್‌ಕುಮಾರ್‌ಗೆ ಇದು ರಂಗ ತಾಲೀಮು. 1951ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ “ಭೂ ಕೈಲಾಸ” ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿ ಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
ಕೇವಲ ನಟನೆಯಲ್ಲದೆ, ಅತ್ಯುತ್ತಮ ಗಾಯಕರೂ ಆಗಿದ್ದ ರಾಜ್ ಕನ್ನಡ ಗಾನಲೋಕಕ್ಕೂ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ.
1974ರಲ್ಲಿ ಬಿಡುಗಡೆಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ,ಊರೇ ಹೋರಾಡಲಿ (ಎಮ್ಮೆ ಹಾಡೆಂದೇ ಪ್ರಸಿಧ್ಧಿ) ಎಂಬ ಹಾಡಿನಿಂದ ಅವರು ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು. ಇದಕ್ಕೂ ಮುಂಚೆ 1956ರಲ್ಲೇ ಓಹಿಲೇಶ್ವರ ಚಿತ್ರದಲ್ಲಿ “ಶರಣು ಶಂಭೋ” ಎಂಬು ಗೀತೆಯೊಂದನ್ನು ಹಾಗೂ ಮಹಿಷಾಸುರ ಮರ್ಧಿನಿಚಿತ್ರದಲ್ಲಿ ಎಸ್.ಜಾನಕಿಯವರೊಡನೆ “ತುಂಬಿತು ಮನವ ತಂದಿತು ಸುಖವ” ಎಂಬ ಯುಗಳ ಗೀತೆಯನ್ನು ಹಾಡಿದ್ದರು.
ಈ ಮೂರು ಚಿತ್ರಗಳು ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನವನ್ನು ಹೊಂದಿದ್ದವು. ಜಿ.ಕೆ.ವೆಂಕಟೇಶ್ ಹಾಗೂ ಉಪೇಂದ್ರಕುಮಾರ್ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
1962ರಲ್ಲಿ, ದೇವಸುಂದರಿ ಚಿತ್ರದಲ್ಲಿ ಹಾಸ್ಯರತ್ನನರಸಿಂಹರಾಜು ಅವರ ಪಾತ್ರಕ್ಕೆ ಯುಗಳ ಗೀತೆಯೊಂದನ್ನೂ ಹಾಡಿದ್ದಾರೆ.
ಡಾ.ರಾಜ್ ಅವರು ಬೇರೊಬ್ಬರ ಅಭಿನಯಕ್ಕೆ ಹಿನ್ನೆಲೆ ಗಾಯನ ಮಾಡಿದ ಮೊದಲ ಚಿತ್ರಗೀತೆಯಿದು.
1964ರಲ್ಲಿ, ನವಕೋಟಿನಾರಾಯಣ (ಭಕ್ತ ಪುರಂದರದಾಸ) ಚಲನಚಿತ್ರದಲ್ಲಿ ಕೆಲವು ಕೀರ್ತನೆ ಗಳನ್ನು ಹಾಡಿದ್ದಾರೆ.
ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು.
2003ರಲ್ಲಿ ಬಿಡುಗಡೆಯಾದ ಅಭಿ ಚಿತ್ರದ “ವಿಧಿ ಬರಹ ಎಂಥ ಘೋರ” ಹಾಗು ಅದೇ ವರ್ಷದ ಚಿಗುರಿದ ಕನಸುಚಿತ್ರದ “ಬಂಧುವೇ ಓ ಬಂಧುವೇ” ಇವರು ಹಾಡಿದ ಇತ್ತೀಚಿನ ಚಿತ್ರಗೀತೆಗಳಾಗಿರುತ್ತವೆ.
ಚಿತ್ರಗೀತೆಗಳಷ್ಟೇ ಅಲ್ಲದೆ ಹಲವಾರು ಭಕ್ತಿಗೀತೆಗಳನ್ನು ಹಾಡಿರುವರು. ಕನ್ನಡವೇ ಸತ್ಯ, ಅನುರಾಗ, ಮಂಕುತಿಮ್ಮನ ಕಗ್ಗ – ರಾಜ್ ಕಂಠದಲ್ಲಿ ಮೂಡಿ ಬಂದ ಭಾವಗೀತೆ ಸಂಕಲನಗಳು.
ಹುಟ್ಟಿದ್ರೆ ಕನ್ನಡನಾಡ್ನಲ್ ಹುಟ್ಟಬೇಕು, ಮೆಟ್ಟಿದರೆ, ಕನ್ನಡ ಮಣ್ಣನ್ ಮೆಟ್ಟಬೇಕು ಗೀತೆಯನ್ನು ಸಾಮಾನ್ಯವಾಗಿ ಹೋದೆಡೆಯಲ್ಲೆಲ್ಲಾ ಹಾಡುತ್ತಿದ್ದರು. ತಮ್ಮ ‘ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ’, ವನ್ನು ದೆಹಲಿಯಲ್ಲಿ ಪಡೆದ ಬಳಿಕ, ಮುಂಬೈ ಗೆ ಭೇಟಿಕೊಟ್ಟಾಗ, ‘ಕರ್ನಾಟಕ ಸಂಘ’ ದ ರಂಗಮಂಚದ ಮೇಲೆ, ಮೇಲಿನ ಗೀತೆಯನ್ನು ಅವರ ಮಕ್ಕಳ ಸಮೇತ ಕುಣಿದು-ಕುಪ್ಪಳಿಸಿ ಹಾಡಿದ ಸಡಗರ ಇನ್ನೂ ಮುಂಬೈ ನಗರದ, ಕನ್ನಡ ರಸಿಕರ ಮನದಲ್ಲಿ ಹಸಿರಾಗಿ ಉಳಿದಿದೆ.
ರಾಷ್ಟ್ರಕವಿ ಕುವೆಂಪು ರಚಿಸಿದ ‘ಕನ್ನಡವೇ ಸತ್ಯ’ ಹಾಡನ್ನು ಡಾ.ರಾಜಕುಮಾರ್ ಭಾವಗೀತೆಯ ಮೇರು ಕಲಾವಿದ ಡಾ. ಸಿ.ಅಶ್ವತ್ಥ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಇದು ಮೈಸೂರು ಅನಂತಸ್ವಾಮಿಯವರ ಆವೃತ್ತಿಗಿಂತಲೂ ಭಾರೀ ಜನಪ್ರಿಯತೆ ಗಳಿಸಿತು.
ಗೋಕಾಕ್ ಚಳುವಳಿಯಲ್ಲಿ ಡಾ.ರಾಜ್
ಗೋಕಾಕ್ ವರದಿಯು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು ಹಾಗು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕನ್ನಡ ಭಾಷೆಗೆ ಕೊಡುವುದರ ಬಗ್ಗೆ ಸಿದ್ಧವಾಗಿತ್ತು. ಆದರೆ, ಈ ವರದಿಯು ಜಾರಿಗೆ ಬಂದಿರಲಿಲ್ಲ.
1981ರಲ್ಲಿ, ಪಾಟೀಲ ಪುಟ್ಟಪ್ಪ,ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಚಳುವಳಿಯನ್ನು ಪ್ರಾರಂಭ ಮಾಡಿದರು. ಇದೇ ಚಳುವಳಿಯು ಗೋಕಾಕ್ ಚಳುವಳಿ ಎಂದೇ ಹೆಸರಾಯಿತು.
ಚಳುವಳಿಯು ಪ್ರಾರಂಭಗೊಂಡು ಹಲವಾರು ದಿನಗಳು ಕಳೆದರೂ, ಜನಸಾಮಾನ್ಯರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡುಬರಲಿಲ್ಲ. ಈ ಸಮಯದಲ್ಲಿ, ಡಾ. ರಾಜ್ ಅವರನ್ನು ಚಳುವಳಿಗೆ ಆಹ್ವಾನಿಸಿ, ಚಳುವಳಿಯ ಬಲವರ್ಧನೆ ಮಾಡಬೇಕೆಂದು ಕೋರಲಾಯಿತು.
ಡಾ. ರಾಜ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ, ಗೋಕಾಕ್ ಚಳುವಳಿಗೆ ಸಂಪೂರ್ಣ ಸಹಕಾರ ನೀಡಲು ಪ್ರಕಟಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿತು. ಹಲವಾರು ಸಭೆಗಳು, ಭಾಷಣಗಳು ಕರ್ನಾಟಕದ ಪ್ರಮುಖ ನಗರಗಳಲ್ಲಿ ಜರುಗಿದವು. ಕರ್ನಾಟಕದ ಜನತೆ ಚಳುವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಭಾಗವಹಿಸಿದರು.
ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು, ಕನ್ನಡ ಭಾಷೆಗೆ ಸಿಗಬೇಕಾದ ಹಕ್ಕುಗಳು,ಸೌಲಭ್ಯಗಳನ್ನು ಆಗಿನ ಕರ್ನಾಟಕ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಡಾ.ರಾಜ್ ಅವರ ಭಾಷಣಗಳು ಹಾಗು ಚಳುವಳಿಯ ನೇತೃತ್ವ ಸಹಾಯಕಾರಿಯಾದವು. ಗುಂಡೂರಾವ್ ನೇತೃತ್ವದ ಆಗಿನ ಕರ್ನಾಟಕ ಸರ್ಕಾರವು ಚಳುವಳಿಯ ತೀವ್ರತೆಗೆ ಸ್ಪಂದಿಸಿ, ಗೋಕಾಕ್ ವರದಿಯನ್ನು ಜಾರಿಗೊಳಿಸಿತು.
ಪಿ.ಹೆಚ್.ಡಿ ವಸ್ತುವಾಗಿ ಡಾ.ರಾಜ್ ಸಾಂಸ್ಕೃತಿಕ ಕೊಡುಗೆಗಳು
ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಜಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಿ.ಗುರುಮೂರ್ತಿ ಹಾರೋಹಳ್ಳಿ ಅವರು “ಕನ್ನಡ ರಂಗಭೂಮಿ ಮತ್ತು ಸಿನೆಮಾಕ್ಕೆ ಡಾ.ರಾಜ್ ಕೊಡುಗೆ”ಕುರಿತ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ, ಮೈಸೂರುವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಂಶೋಧನೆಯ ಸಮಯದಲ್ಲಿ, ಡಾ.ರಾಜ್ ಅವರನ್ನು ಹಲವಾರು ಬಾರಿ ಸಂದರ್ಶಿಸಿದ್ದಾರೆ.
1997ರಲ್ಲಿ ಪ್ರಾರಂಭಿಸಿದ ಸಂಶೋಧನೆಯನ್ನು ನಾಲ್ಕುವರ್ಷಗಳ ಕಾಲ ಡಾ.ಮಳಲಿ ವಸಂತಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಗುರುಮೂರ್ತಿ 2001ರಲ್ಲಿ ಪಿ.ಹೆಚ್.ಡಿ ಪದವಿ ಪಡೆದರು.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, ಯಶವಂತಪುರ ಮೇಲ್ಸೇತುವೆಯಿಂದ ಪ್ರಸನ್ನ ಚಿತ್ರಮಂದಿರದವರೆಗೆ ರಾಜಾಜಿನಗರದ ಮೂಲಕ ಹಾದು ಹೋಗುವ ಮುಖ್ಯರಸ್ತೆಗೆ ಡಾ. ರಾಜ್‌ಕುಮಾರ್ ರಸ್ತೆ ಎಂದು ಹೆಸರಿಸಲಾಗಿದೆ.
ಪ್ರಶಸ್ತಿ/ ಪುರಸ್ಕಾರಗಳು/ಬಿರುದುಗಳು
ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‌ಕುಮಾರ್
ಪದ್ಮಭೂಷಣ
(ಭಾರತ ಸರ್ಕಾರದಿಂದ)
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1995ರಲ್ಲಿ ಭಾರತಸರ್ಕಾರದಿಂದ)
ಕರ್ನಾಟಕ ರತ್ನ
(ಕರ್ನಾಟಕ ಸರ್ಕಾರ)
ರಾಷ್ಟ್ರಪ್ರಶಸ್ತಿ
(ಜೀವನ ಚೈತ್ರ ಚಿತ್ರದಲ್ಲಿನ ‘ನಾದಮಯ ಈ ಲೋಕವೆಲ್ಲಾ’ ಹಾಡಿನ ಗಾಯನಕ್ಕೆ)
ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ (ಹತ್ತು ಬಾರಿ)ಅತ್ಯುತ್ತಮ ನಟ ರಾಜ್ಯಪ್ರಶಸ್ತಿ (ಒಂಬತ್ತು ಬಾರಿ)ನಟಸಾರ್ವಭೌಮ (100ನೆಯ ಚಿತ್ರದ ಸಂದರ್ಭದಲ್ಲಿ)ಗಾನಗಂಧರ್ವ (ಅಭಿಮಾನಿ ಸಂಘಗಳಿಂದ)ವರನಟ (ಪತ್ರಕರ್ತರು, ಅಭಿಮಾನಿಗಳು)
ಗೌರವ ಡಾಕ್ಟರೇಟ್(ಮೈಸೂರು ವಿಶ್ವವಿದ್ಯಾಲಯ)
ಅಣ್ಣಾವ್ರು (ಅಭಿಮಾನಿಗಳಿಂದ)
ರಸಿಕರ ರಾಜ (ಅಭಿಮಾನಿಗಳಿಂದ)
ಕೆಂಟಕಿ ಕರ್ನಲ್ (ಅಮೆರಿಕದ ಕೆಂಟಕಿ ರಾಜ್ಯದ ಗವರ್ನರ್ 1985ರಲ್ಲಿ ಬೆಂಗಳೂರಲ್ಲಿ ನೀಡಿದರು)
ಕನ್ನಡದ ಕಣ್ಮಣಿ (ಅಭಿಮಾನಿಗಳಿಂದ)
ಮೇರು ನಟ (ಅಭಿಮಾನಿಗಳಿಂದ)
ನಾಡೋಜ ಪ್ರಶಸ್ತಿ (ಕರ್ನಾಟಕ ಸರ್ಕಾರ)
ಗುಬ್ಬಿ ವೀರಣ್ಣ ಪ್ರಶಸ್ತಿ
(ಕರ್ನಾಟಕ ಸರ್ಕಾರ)
ಕಲಾ ಕೌಸ್ತುಭ
(ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗೆ, ಕರ್ನಾಟಕ ಸರ್ಕಾರದಿಂದ)
ಮತ್ತೊಮ್ಮೆ ಡಾ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಎಲ್ಲರಿಗೂ ಶುಭ ಶುಭಾಶಯಗಳು.