ಸೆಪ್ಟೆಂಬರ್ ೧೦ ಚಿತ್ರದ ಟೀಸರ್ ಬಿಡುಗಡೆ
ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಸಾಯಿಪ್ರಕಾಶ್
ಮೊದಲಬಾರಿಗೆ ಸೋಷಿಯಲ್ ಮೆಸೇಜ್ ಇರುವ ಚಿತ್ರವೊಂದನ್ನು
ನಿರ್ದೇಶನ ಮಾಡಿದ್ದಾರೆ. ಸೆಪ್ಟೆಂಬರ್ ೧೦ನ್ನು ವಿಶ್ವ ಆತ್ಮಹತ್ಯೆ ನಿವಾರಣಾ ದಿನವೆಂದು ಘೋಷಿಸಲಾಗಿದೆ. ಅದೇ ಹೆಸರಿನ ಚಿತ್ರವನ್ನು ಸಾಯಿಪ್ರಕಾಶ್ ಮಾಡಿದ್ದಾರೆ. ಕ್ಷುಲ್ಲುಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ತಡೆಗಟ್ಟುವಂಥ ಅನೇಕ
ವಿಚಾರಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ತೆಲಂಗಾಣದ ಕ್ಯಾಪ್ಟನ್ ಜಿ.ಜಿ.ರಾವ್ ಅವರು ಇತ್ತೀಚೆಗೆ ಹೆಚ್ಚಾಗುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿ ಒಂದು ಪುಸ್ತಕವನ್ನು
ಬರೆದಿದ್ದರು. ಅದೇ ಪುಸ್ತಕ ಆಧಾರವಾಗಿಟ್ಟುಕೊಂಡು ಸಾಯಿಪ್ರಕಾಶ್ ಅವರು ಸೆಪ್ಟೆಂಬರ್ ೧೦ ಚಿತ್ರ ನಿರ್ದೇಶನ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳೋರ ಮನಸ್ಥಿತಿ ಹೇಗಿರುತ್ತೆ, ಎಲ್ಲದಕ್ಕೂ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ಸಂದರ್ಭವನ್ನು ಧೈರ್ಯದಿಂದ ಎದುರಿಸಿದರೆ ಖಂಡಿತ ಗೆಲುವು ಸಿಗುತ್ತದೆ ಎಂದು ಹೇಳುವ ಚಿತ್ರ ಇದಾಗಿದೆ. ಈ ಚಿತ್ರದ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಟಿ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು.
ನಿರ್ದೇಶಕ ಸಾಯಿಪ್ರಕಾಶ್, ತಮ್ಮ ಶ್ರೀದೇವಿ ಫಿಲಂಸ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ನಿರ್ಮಾಪಕರೂ ಆಗಿದ್ದಾರೆ. ಏಳು ಪ್ರಕರಣಗಳನ್ನಿಟ್ಟುಕೊಂಡು, ವಿಭಿನ್ನ ಸ್ಥಿತಿಗಳಲ್ಲಿ
ಆತ್ಮಹತ್ಯೆಮಾಡಿಕೊಳ್ಳುವುದನ್ನು ಹೇಗೆ ತಪ್ಪಿಸಬಹುದು ಎಂದು ಹೇಳಿದ್ದಾರೆ. ಕ್ಷುಲ್ಲುಕ ಕಾರಣಗಳಿಗೆಲ್ಲಾ ಆತ್ಮಹತ್ಯೆ
ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುವವರ ಮನಸ್ಥಿತಿ
ಹೇಗಿರುತ್ತೆ, ಅವರು ಅಂಥಾ ಕಠಿಣ ನಿರ್ಧಾರ ಕೈಗೊಳ್ಳಲು
ಕಾರಣಗಳು, ಹಿನ್ನೆಲೆ ಏನು ಎಂಬದರ ಕುರಿತಂತೆ ಸಾಕಷ್ಟು ಅಧ್ಯಯನ ಮಾಡಿ ನಿರ್ದೇಶಕರು ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ.
ಹಿರಿಯ ನಟ ಶಶಿಕುಮಾರ್ ಅವರು ಚಿತ್ರದಲ್ಲಿ ಒಬ್ಬ ಸೈಕ್ರಿಯಾಟಿಸ್ಟ್ ಪಾತ್ರ ನಿರ್ವಹಿಸುವ ಮೂಲಕ ಚಿತ್ರರಂಗಕ್ಕೆರೀ ಎಂಟ್ರಿಯಾಗಿದ್ದಾರೆ.
ಅವರ ಪಾತ್ರದ ಮೂಲಕ ಉತ್ತಮ ಸಂದೇಶ ಹೇಳಿಸಲಾಗಿದೆ.
ಈವರೆಗೆ ಸಾಕಷ್ಟು ಸೆಂಟಿಮೆಂಟ್, ಕಮರ್ಷಿಯಲ್, ಕಾಮಿಡಿ
ಚಿತ್ರಗಳನ್ನು ಮಾಡಿದ್ದು, ಈಸಲ ಜಾಗೃತಿ ಮೂಡಿಸುವ ಚಿತ್ರ
ನಿರ್ಮಿಸಿದ್ದೇನೆ. ಸಾಲದ ಹೊರೆಯಿಂದ ರೈತರು, ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು, ಹಿರಿಯರ ವಿರೋಧ ಎದುರಿಸಲಾರದ
ಪ್ರೇಮಿಗಳು, ಕುಟುಂಬದ ಹೊರೆ ತಾಳಲಾಗದವರು, ಸಾಲದ ಬಾಧೆಯಿಂದ ಬೇಸತ್ತವರು, ಇಂಥವರೆಲ್ಲ ದುಡುಕಿನಿಂದ ಆತ್ಮಹತ್ಯೆ
ನಿರ್ಧಾರ ಕೈಗೊಳ್ಳುವುದು ತಪ್ಪು ಎಂದು ಹೇಳಲು
ಪ್ರಯತ್ನಿಸಿದ್ದೇನೆ. ನಮ್ಮ ಚಿತ್ರ ನೋಡಿ ನೂರರಲ್ಲಿ ಒಬ್ಬರಾದರೂ
ತಮ್ಮ ನಿರ್ಧಾರ ಬದಲಿಸಿಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದು
ಸಾಯಿಪ್ರಕಾಶ್ ಅವರು ಹೇಳಿದರು. ಛಾಯಾಗ್ರಾಹಕ ಜೆಜಿ ಕೃಷ್ಣ
ಮಾತನಾಡುತ್ತ ನಾನು ಸಾಯಿಪ್ರಕಾಶ್ ಅವರ ಜೊತೆ ೨೫ರಿಂದ ೩೦
ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಈ ಚಿತ್ರ ಸಮಾಜಕ್ಕೆ ಒಳ್ಳೇ
ಮೆಸೇಜ್ ಕೊಡೋ ಚಿತ್ರವಾಗುತ್ತೆ ಎಂದು ಹೇಳಿದರು. ರಶಿತಾ
ಮಲ್ನಾಡ್ ಮಾತನಾಡಿ ಓರ್ವ ವಿವಾಹಿತ ಮಹಿಳೆಯಾಗಿ ನಾನು
ಕಾಣಿಸಿಕೊಂಡಿದ್ದು, ಹೈಕ್ಲಾಸ್ ಜೀವನ ಮಾಡಬೇಕನ್ನುವುದು
ನನ್ನಾಸೆ, ಅದನ್ನು ಈಡೇರಿಸಲಾಗಡೆ ನನ್ನ ಪತಿ ಆತ್ಮಹತ್ಯೆ ನಿರ್ಧಾರ
ಕೈಗೊಳ್ಳುತ್ತಾನೆ ಎಂದು ಹೇಳಿದರು. ಉಳಿದಂತೆ ನಟ ಶಿವಕುಮಾರ್,
ಶ್ರೀರಕ್ಷಾ, ತನುಜಾ, ಜಯಸಿಂಹ, ಮುರಳೀಧರ್, ಅನಿತಾರಾಣಿ, ಮೀಸೆ
ಅಂಜಿನಪ್ಪ ಹಾಗೂ ಇತರ ಕಲಾವಿದರು ತಂತಮ್ಮ ಪಾತ್ರಗಳ ಬಗ್ಗೆ
ವಿವರಿಸಿದರು.
ಈ ಚಿತ್ರದಲ್ಲಿ ಹಿರಿಯನಟ ರಮೇಶ್‌ಭಟ್ ವಕೀಲನ ಪಾತ್ರ ನಿರ್ವಹಿಸಿದರೆ,
ಬಿ.ಜಿ.ರವೀಂದ್ರನಾಥ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಿಹಿಕಹಿ
ಚಂದ್ರು ಮುಸ್ಲಿಂ ಮುಖಂಡರಾಗಿ, ಚರ್ಚ್ ಫಾದರ್ ಆಗಿ ಶಿವಕುಮಾರ್
ಹಾಗೂ ಸ್ಥಿತಿವಂತ ರೈತನ ಪಾತ್ರದಲ್ಲಿ ಗಣೇಶರಾವ್ ಕೇಸರ್‌ಕರ್
ಅವರು ನಟಿಸಿದ್ದಾರೆ. ಇನ್ನು ಯುವ ಪ್ರೇಮಿಗಳಾಗಿ ಜಯಸಿಂಹ
ಹಾಗೂ ಆರಾಧ್ಯ ನಟಿಸಿದ್ದಾರೆ.