ಚಿತ್ರರಂಗವನ್ನಗಲಿದ ಖ್ಯಾತ ನಿರ್ದೇಶಕ: ಮತ್ತೆ ಶೋಕಸಾಗರದಲ್ಲಿ ಕನ್ನಡ ಚಿತ್ರರಂಗ
ಎಂತಹ ಕಾಲವನ್ನು ಕಾಣುತ್ತಿದ್ದೇವೆ. ಕನ್ನಡ ಚಿತ್ರರಂಗ ಕಳೆದ ಎರಡು ಮೂರು ವರ್ಷಗಳಿಂದ ದಿಗ್ಗಜರನ್ನೇ ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ. ಕೋವಿಡ್ ಕಾರಣದಿಂದ ಕೆಲವರಾದರೆ, ಇನ್ನು ಕೆಲವರು ಅನಿರೀಕ್ಷಿತ-ಅಸಹಜವೋ ಎನ್ನುವಂತೆ ರಾಜ್ಯಕ್ಕೆ ರಾಜ್ಯವೇ ಶೋಕಿಸುವಂತೆ ಅಗಲಿದ್ದಂತೂ ಸುಳ್ಳಲ್ಲ.
ಆ ನೋವುಗಳು ಆರದಂತೆಯೇ ಕನ್ನಡ ಚಿತ್ರರಂಗ ಮತ್ತೊಬ್ಬ ಸ್ಟಾರ್ ನಿರ್ದೇಶಕನನ್ನು ಕಳೆದುಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ನಿರ್ದೇಶಕ, ನಟ, ನಿರ್ಮಾಪಕ ಮತ್ತು ಡಬ್ಬಿಂಗ್ ಕಲಾವಿದರಾಗಿಯೂ ಸೇವೆ ಸಲ್ಲಿಸಿದ ಕಟ್ಟೆ ರಾಮಚಂದ್ರ, ತನ್ನ ಪತ್ನಿವಿಯೋಗದ 5 ದಿನಗಳ ನಂತರ, ಇಹಲೋಕ ತ್ಯಜಿಸಿದ್ದಾರೆ.
75 ವರ್ಷ ವಯಸ್ಸಾಗಿದ್ದ ಅವರು ವಯೋಸಹಜ ಕಾಯಿಲೆಯಿಂದ ವಿಶ್ರಾಂತಿ ಪಡೆಯುತ್ತಿದ್ದರು.
ಡಾ.ವಿಷ್ಣುವರ್ಧನ್ ನಟನೆಯ. ವೈಶಾಖದ ದಿನಗಳು ಹಿಟ್ ಚಿತ್ರವನ್ನು ನಿರ್ದೇಶಿಸಿದ್ದ ರಾಮಚಂದ್ರ ಅವರು, ಮಹಾಲಕ್ಷ್ಮಿ, ಅರಿವು ಮುಂತಾದ ಚಿತ್ರಗಳನ್ನು, ಸಮರ್ಥವಾಗಿ ನಿರ್ದೇಶಿಸಿದ್ದರು.
ಕೇವಲ ನಿರ್ದೇಶಕರಾಗಿ ಅಷ್ಟೇ ಅಲ್ಲದೆ, ನಿರ್ಮಾಪಕರಾಗಿಯೂ ಕಟ್ಟೆ ರಾಮಚಂದ್ರ ಅವರ ಕೊಡುಗೆ ಅಮೋಘ. ಪನಿಯಮ್ಮ ಚಿತ್ರದಲ್ಲಿ ನಿರ್ಮಾಣ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದ ರಾಮಚಂದ್ರ ಅವರು ಅಲೆಗಳು, ಮನೆ ಮನೆ ಕಥೆ ಧಾರಾವಾಹಿಗಳಿಗೆ ನಿರ್ಮಾಪಕರಾಗಿದ್ದರು.
ಪರಭಾಷೆಗಳಲ್ಲೂ ಕಮಾಲ್ ಮಾಡುತ್ತಿರುವ ʼಕಥೆಯೊಂದು ಶುರುವಾಗಿದೆʼ ಖ್ಯಾತಿಯ ಕನ್ನಡ ನಿರ್ದೇಶಕ ಸೆನ್ನಾ ಹೆಗ್ಡೆ
ನಟರಾಗಿ ಬಣ್ಣ ಹಚ್ಚಿದ್ದ ಇವರು, ಗನ್, ಬಿಂಬ, ಕಾಡಿನ ಬೆಂಕಿ, ಬ್ಯಾಂಕರ್ ಮಾರ್ಗಯ್ಯ, ಅಂತರಾಳ, ಪ್ರೇಮ ಮತ್ಸರ, ಗ್ರಹಣ, ನಮ್ಮಮ್ಮ ತಾಯಿ ಅಣ್ಣಮ್ಮ, ಒಂದು ಪ್ರೇಮದ ಕಥೆ, ತಬ್ಬಲಿಯು ನೀನಾದೆ ಮಗನೆ ಮುಂತಾದ ಚಿತ್ರಗಳಲ್ಲಿ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದರು.
ಮಾರ್ಚ್ 3 ರಿಂದ ಆರಂಭವಾಗಲಿದೆ 13 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ
ಕಟ್ಟೆ ರಾಮಚಂದ್ರ ಒಬ್ಬ ಸವ್ಯಸಾಚಿ ಕಲಾವಿದ ಎನ್ನುವುದಕ್ಕೆ ಅವರ ಸರ್ವಾಂಗೀಣ ಪ್ರತಿಭೆಗಳೇ ಸಾಕ್ಷಿ. ಹುಲಿಯ ಚಿತ್ರಕ್ಕೆ ವಸ್ತ್ರಾಲಂಕಾರ ಕಲಾವಿದರಾಗಿದ್ದ ಇವರು ಒಬ್ಬ ಅತ್ಯುತ್ತಮ ಕಂಠದಾನ ಕಲಾವಿದರಾಗಿದ್ದರು. ಗೀಜಗನ ಗೂಡು, ಚೋಮನ ದುಡಿ, ಘಟಶ್ರಾದ್ಧ ಮುಂತಾದ ಚಿತ್ರಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ದುಡಿದಿದ್ದ ಇವರು, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿದ್ದರು ಎನ್ನುವುದು ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯ ವಿಚಾರ.
ಇಂತಹ ಪರಿಪೂರ್ಣ ಕಲಾವಿದನ ಅಗಲುವಿಕೆಯು ಕನ್ನಡ ಚಿತ್ರರಂಗವನ್ನು ನೋವಿನ ಸಾಗರದಲ್ಲಿ ಮುಳುಗಿಸಿದ್ದು, ಖ್ಯಾತ ನಟರು, ನಿರ್ದೇಶಕರು, ನಿರ್ಮಾಪಕರು ಈ ಹಿರಿಯ ಕಲಾವಿದರ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.
ಇಂತಹ ಹಿರಿಯ ದಿಗ್ಗಜ ಕಲಾವಿದರ ನೆನಪು ಕನ್ನಡ ಚಿತ್ರರಂಗದಲ್ಲಿ ಚಿರವಾಗಿರಲಿ, ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸೋಣ.