OTT ಸಿನಿಮಾಗಳ ಖರೀದಿ ಹೇಗೆ?
“OTT” ಯಲ್ಲಿ ಸಿನಿಮಾ ಖರೀದಿ ಮಾಡಲು ಮೂರು ವಿಧಾನಗಳಿವೆ. ಮೊದಲ ವಿಧಾನದಡಿ ಸ್ಟಾರ್ ನಟ ಮತ್ತು ನಟಿಯರ ಸಿನಿಮಾಗಳನ್ನು ಔಟ್‌ರೇಟ್ ಲೆಕ್ಕಾಚಾರದಲ್ಲಿ ಒಂದೇ ಬಾರಿಗೆ ಹಣ ಪಾವತಿಸಿ ಖರೀದಿಸಲಾಗುತ್ತದೆ. ಸ್ಟಾರ್ ನಟ, ನಟಿಯರ ಸಿನಿಮಾಗಳಿಗಷ್ಟೇ ಈ ವಿಧಾನ ಮೀಸಲು. ಹೊಸಬರ ಚಿತ್ರಗಳನ್ನು ಈ ಮಾದರಿಯಲ್ಲಿ ಖರೀದಿಸುವುದು ವಿರಳ.
ಎರಡನೇ ವಿಧಾನದಲ್ಲಿ ಕಂತುಗಳ ರೂಪದಲ್ಲಿ ಸಿನಿಮಾ ಖರೀದಿಸಲಾಗುತ್ತದೆ. ಉದಾಹರಣೆಗೆ 1 ಕೋಟಿಯ ಮೊತ್ತಕ್ಕೆ ಸಿನಿಮಾವೊಂದನ್ನು ಖರೀದಿಸಿದರೆ ಹತ್ತು ಕಂತುಗಳಲ್ಲಿ ಸಂಬಂಧಪಟ್ಟ ನಿರ್ಮಾಪಕರಿಗೆ ಹಣ ನೀಡಲಾಗುತ್ತದೆ. ಒಟಿಟಿ ವೇದಿಕೆಯು ಎಷ್ಟು ಕಂತುಗಳನ್ನಾದರೂ ನಿಗದಿಪಡಿಸಬಹುದು. ಕನ್ನಡದ ‘ನಾತಿಚರಾಮಿ’ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಖರೀದಿಸಿದ್ದು ಇದೇ ವಿಧಾನದಲ್ಲಿಯೇ. ಈ ಎರಡೂ ವಿಧಾನದಡಿ ವೇದಿಕೆಗಳು ಖರೀದಿಸಿದ ಸಿನಿಮಾಗಳಿಂದ ಎಷ್ಟು ಬೇಕಾದರೂ ದುಡಿದುಕೊಳ್ಳಬಹುದು. ಆ ಲಾಭದಲ್ಲಿ ನಿರ್ಮಾಪಕರಿಗೆ ಪಾಲು ಸಿಗುವುದಿಲ್ಲ.
ಮೂರನೇ ವಿಧಾನವೇ ‘ಪೇಪರ್ ವೀವ್’. ಈ ವಿಧಾನದಡಿ ನಿಮಿಷಗಳದ್ದೆ ಪ್ರಧಾನ ಪಾತ್ರ. ಸಿನಿಮಾವೊಂದನ್ನು ಆಯಾ ಒಟಿಟಿ ವೇದಿಕೆಯ ಚಂದಾದಾರರು ನೋಡುವ ನಿಮಿಷಗಳ ಆಧಾರದಡಿ ಲೆಕ್ಕಹಾಕಿ ನಿರ್ಮಾಪಕರಿಗೆ ಹಣ ಸಂದಾಯ ಮಾಡಲಾಗುತ್ತದೆ. ಸ್ಟ್ರೀಮಿಂಗ್ ನಿಮಿಷಗಳನ್ನು ಗಂಟೆಯ ಲೆಕ್ಕಾಚಾರಕ್ಕೆ ಸೀಮಿತಗೊಳಿಸಲಾಗುತ್ತದೆ. ಅಂದರೆ ಆ ಸಿನಿಮಾವನ್ನು ಚಂದಾದಾರರು ಎಷ್ಟು ಗಂಟೆ ವೀಕ್ಷಿಸಿದ್ದಾರೆ ಎಂದು ಲೆಕ್ಕ ಹಾಕಿ ಹಣ ನೀಡಲಾಗುತ್ತದೆ.
ಈ ಹಿಂದೆ 1 ಗಂಟೆಗೆ 7 ರೂಪಾಯಿ ನೀಡಲಾಗುತ್ತಿತ್ತಂತೆ. ಈಗ ಇದು 2 ರಿಂದ 3ಕ್ಕೆ ಇಳಿದಿದೆ. ಕನ್ನಡದ ‘ಅಮ್ಮಚ್ಚಿಯೆಂಬ ನೆನಪು’, ‘ಅಳಿದು ಉಳಿದವರು’, ‘ಬೀರ್‌ಬಲ್’ ಸಿನಿಮಾಗಳನ್ನು ಒಟಿಟಿ ವೇದಿಕೆಗಳು ಖರೀದಿಸಿರುವುದು ಈ ಲೆಕ್ಕಾಚಾರದಲ್ಲಿಯೇ. ಹಾಗಾಗಿ ಸಿನಿಮಾಗಳ ಸ್ಟ್ರೀಮಿಂಗ್ ಇಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಸದ್ಯಕ್ಕೆ ಕನ್ನಡ ಸಿನಿಮಾಗಳ ಖರೀದಿಗೆ ಇದೇ ವಿಧಾನವನ್ನೇ ಈ ವೇದಿಕೆಗಳು ಅನುಸರಿಸುತ್ತಿವೆ (‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಮಾತ್ರ ಔಟ್‌ರೇಟ್ ಲೆಕ್ಕಾಚಾರದಲ್ಲಿ ಖರೀದಿಯಾಗಿವೆಯಂತೆ). ಇದರಿಂದ ನಿರ್ಮಾಪಕರಿಗೆ ಲಾಭವಾಗುವುದು ಕಡಿಮೆ. ಮತ್ತೊಂದೆಡೆ ಈ ವೇದಿಕೆಯಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಅಂದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಸೋರಿಕೆಯಾಗುವುದು ಮಾಮೂಲು.