ಮಜಾ ಟಾಕೀಸ್ ಬರಹಗಾರನ ಮಾತು
ಮಜಾ ಟಾಕೀಸ್ ಕರ್ನಾಟಕದಲ್ಲಿ ಒಂದು ಜನಪ್ರಿಯ ಕಾಮೆಡಿ ಶೋ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಮಜಾ ಟಾಕೀಸ್ ನ ಕಲಾವಿದರ ಬಾಯಿಂದ ಬರುವ ಪಂಚ್ ಡೈಲಾಗ್ ಗಳು ಪ್ರೇಕ್ಷಕರಲ್ಲಿ ಕಚಗುಳಿ ಇಟ್ಟು ನಗೆಯ ಟಾನಿಕ್ ನಂತೆ ಕಿಕ್ ಹತ್ತಿಸಿರುವ ಬಹುಪಾಲು ಶ್ರೇಯಾ ಈ ಶೋನ ಬರಹಗಾರನಿಗೆ ಸಲ್ಲುತ್ತದೆ. ಮಜಾ ಟಾಕೀಸ್ ನ ಬರವಣಿಗೆಯ ಹಿಂದಿರುವ ತಲೆ ‘ರಾಕೇಶ್ ಸಿ ಎ’ ಉರುಫ್ ‘ಹಳೆ ಬೇವರ್ಸಿ’ ಅವರದು ಬಹುಮುಖ ಪ್ರತಿಭೆ. ಅಂದಹಾಗೆ ಮಜಾ ಟಾಕೀಸ್ ಹೊರತುಪಡಿಸಿ ಪ್ರಚಲಿತ ವಿದ್ಯಮಾನಗಳಿಗೆ ತಮ್ಮದೇ ಪದಗಳನ್ನು ಪೋಣಿಸುವ ಮೂಲಕ ವ್ಯಂಗ್ಯ ಭರಿತ ಹಾಸ್ಯದ ಲೇಪನವನ್ನು ಕೊಟ್ಟು ವಿಭಿನ್ನವಾದ ಧಾಟಿಯಲ್ಲಿ ಹಾಡಿನ ಮೂಲಕ ಪ್ರಸ್ತುತಪಡಿಸುವ ಇವರ ಕಲೆಗಾರಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಶಹಬ್ಬಾಸ್ ಗಿರಿ ಸಿಗುತ್ತಿದೆ. ಅವರು ನೀಡಿದ ವಿಶೇಷ ಸಂದರ್ಶನದ ವಿವರ ನಿಮ್ಮ ಮುಂದೆ.
ಹಳೆ ಬೇವರ್ಸಿ ಹೆಸರು ಯಾಕೆ ಇಟ್ಟುಕೊಂಡಿ
ದ್ದೀರಿ?
ನಾನು ಹಾಕುವ ಯಾವುದೇ ವೀಡಿಯೊ ಗೆ ಬರುವ ಪ್ರತಿಕ್ರಿಯೆಗಳಲ್ಲಿ ಕೆಲವು ಸಕಾರಾತ್ಮಕವಾಗಿದ್ದರೆ ಇನ್ನುಳಿದವು ನಕಾರಾತ್ಮಕವಾಗಿ ಇರುತ್ತವೆ, ಎಲ್ಲರನ್ನೂ ಮೆಚ್ಚಿಸಲಿಕ್ಕೆ ಆಗುವುದಿಲ್ಲವಲ್ಲ, ಹಾಗೆ ಕೆಲವೊಮ್ಮೆ ಬೈಗುಳಗಳನ್ನು ಇನ್ನೊಬ್ಬರಿಂದ ಕೇಳಿಸಿಕೊಳ್ಳುವ ಬದಲು ನನಗೆ ನಾನೇ ಬೈದುಕೊಂಡರೆ ಒಳ್ಳೇದು ಅಂತನ್ನಿಸಿ ಇಟ್ಟುಕೊಂಡ ಹೆಸರು ಇದು. ಹಳೆ ಬೇವರ್ಸಿಯೇ ಯಾಕೆ ಅಂತ ಕೇಳಿದರೆ ನನ್ನ ಪ್ರಕಾರ ಇದೊಂದು ಶ್ರೇಷ್ಟ ಬೈಗುಳ, ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಅಣ್ಣಾವ್ರಿಗೆ ಮಂಜುಳ ಅವರು ಹಳೆ ಬೇವರ್ಸಿ ಅಂತ ಬೈದಿದ್ದು ಗೊತ್ತಲ್ಲ ಹಾಗಾಗಿ ಇದಕ್ಕಿಂತ ಒಳ್ಳೆ ಬೈಗುಳ ಇರಲಾರದು ಎಂದುಕೊಂಡು ನಾನೇ ಇಟ್ಟುಕೊಂಡ ಹೆಸರು ಇದು.
ಸಾಹಿತ್ಯ ಮತ್ತು ಬರವಣಿಗೆ ಕುರಿತು ಒಲವು ಶುರುವಾಗಿದ್ದು ಹೇಗೆ? ನಿಮ್ಮ ಫೇಸ್ಬುಕ್ ವಿಡಿಯೋಯೋಗಳ ಪರಿಕಲ್ಪನೆ ಹುಟ್ಟೋದು ಹೇಗೆ!?
ನನ್ನ ಸಾಹಿತ್ಯದ ಒಲವು ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ಬಂದದ್ದಲ್ಲ. ನಮ್ಮ ಮನೆಗಳಲ್ಲಿ ಆಡು ಭಾಷೆಯಲ್ಲಿ ಮಾತಾಡಿಯೇ ಅಭ್ಯಾಸ, ಚಿಕ್ಕಂದಿನಲ್ಲಿ ಚಂದನ ವಾಹಿನಿ ಯಲ್ಲಿ ಬರುವ ವಾರ್ತಾ ವಾಚಕರು ಬಳಸುವ ಗ್ರಾಂಥಿಕ ಕನ್ನಡ ನನ್ನನ್ನು ಸೆಳೆಯುತ್ತಿತ್ತು. ಕನ್ನಡ ಭಾಷೆಯನ್ನು ಇಷ್ಟು ಶುದ್ಧವಾಗಿ ಈ ರೀತಿಯೂ ಮಾತನಾಡಬಹದಲ್ಲವೇ ಎಂದು ಎನಿಸುತ್ತಿತ್ತು. ಶಾಲಾ ದಿನಗಳಲ್ಲಿ ಸ್ನೇಹಿತರ ಎದುರು ಟಿವಿಯಲ್ಲಿ ಪ್ರಸಾರವಾಗುವಂತೆ ವಾರ್ತೆಗಳನ್ನು ಅದೇ ಧಾಟಿಯಲ್ಲಿ ಓದುತ್ತಿದ್ದೆ, ಅದರಲ್ಲಿ ಹಾಸ್ಯದ ಲೇಪನ ಇರುವಂತೆ ನೋಡಿಕೊಳ್ಳುತ್ತಿದ್ದೆ. ಅದನ್ನು ಕೇಳಿ ಅವರೆಲ್ಲ ಖುಷಿಪಟ್ಟು ಹುರಿದುಂಬಿಸುತ್ತಿದ್ದರು. ಅದು ಬಿಟ್ಟರೆ ಸಾಹಿತ್ಯದ ಬಗ್ಗೆ ದೊಡ್ಡದಾಗಿ ಅರಿವಿರಲಿಲ್ಲ. ಮೊದಲಿನಿಂದಲೂ ಸಿನಿಮಾ ಹುಚ್ಚು ಹೆಚ್ಚೇ ಇತ್ತು, ಕಾಲೇಜು ದಿನಗಳಲ್ಲಿ ಸಿನಿಮಾ ನೋಡಿದ ನಂತರ ಸ್ನೇಹಿತರ ಜೊತೆಗೆ ಆ ದೃಶ್ಯ ಹಾಗಿರಬೇಕಿತ್ತು, ಈ ದೃಶ್ಯ ಹಾಗಿರಬೇಕಿತ್ತು ಎಂದು ವಿಮರ್ಶೆ ಮಾಡುತ್ತಿದ್ದುದು ಉಂಟು. ಕಾಲೇಜು ಮುಗಿಯುವ ಕಡೇ ದಿನಗಳಲ್ಲಿ ಸಿನಿಮಾದ ಮೇಲಿನ ವಿಪರೀತ ಪ್ರೀತಿ ನನ್ನನ್ನು ಬರವಣಿಗೆಗೆ ಪ್ರೇರೇಪಿಸಿತು ಎಂದು ಹೇಳಬಹುದು. ನನ್ನಷ್ಟಕ್ಕೆ ನಾನೇ ದೃಶ್ಯಗಳನ್ನು ಬರೆದುಕೊಳ್ಳೋದು
ಚಿತ್ರಕಥೆ ಬರೆಯೋದು ಅದನ್ನೆಲ್ಲ ಮಾಡುತ್ತಿದ್ದೆ. ಅದೇ ಪ್ರವೃತ್ತಿ ಈಗ ಲಾಕ್ ಡೌನ್ ತನಕವೂ ಎಳೆದುಕೊಂಡು ಬಂದಿದೆ ಅಷ್ಟೇ. ಈಗಿನ ಕಾಲದಲ್ಲಿ ಕೇವಲ ಹತ್ತು ಹದಿನೈದು ಸೆಕೆಂಡ್ ಇರುವ ಟಿಕ್ ಟಾಕ್ ವಿಡಿಯೋ ಜನರಿಗೆ ಕಿಕ್ ಕೊಡಬಲ್ಲದು ಅದರಲ್ಲಿ ಸ್ವಲ್ಪ ಲಾಗ್ ಆದರೂ ಮುಂದಿನ ವಿಡಿಯೋ ಗೆ ಗಮನ ಹರಿಸುತ್ತಾರೆ, ಹಾಗಿರುವಾಗ ಕಡಿಮೆ ಸಮಯದಲ್ಲಿ ಪಂಚ್ ಕೊಡುತ್ತಾ ಪ್ರಚಲಿತ ವಿದ್ಯಮಾನವನ್ನು ಗಮನದಲ್ಲಿಟ್ಟುಕೊಂಡು ವಿಡಂಬನಾತ್ಮಕವಾಗಿ ವಿಷಯಗಳನ್ನು ಮಂಡಿಸುವ ಪ್ರಯತ್ನ ಯಾಕೆ ಮಾಡಬಾರದು ಅನ್ನಿಸಿ ನನ್ನದೇ ಶೈಲಿಯ ತಮಾಷೆ ತುಂಬಿದ ವಿಡಿಯೋಗಳನ್ನು ಹಾಕಲು ಶುರು ಮಾಡಿದೆ. ಅದು ಜನರಲ್ಲಿ ನಗೆ ಉಕ್ಕಿಸುವುದರ ಜೊತೆಗೆ ನನ್ನ ಮುಂದಿನ ವಿಡಿಯೋ ಗೆ ಕಾಯುವಂತೆ ಮಾಡಿದೆ.
ಬಣ್ಣದ ಬದುಕಿಗೆ ಹೇಗೆ ಎಂಟ್ರಿ ಕೊಟ್ಟಿರಿ?
ಮೊದಲೇ ಹೇಳಿದಂತೆ ಕಾಲೇಜು ದಿನಗಳಲ್ಲೇ ಸಿನಿಮಾ ಬಗೆಗಿನ ಒಲವು ವಿಪರೀತ ಹೆಚ್ಚಾಗಿತ್ತು. ಮೊದಲಿನಿಂದಲೂ ಓದು, ಕಲಿಕೆ ಇದ್ಯಾವುದೂ ಅಷ್ಟಾಗಿ ರುಚಿಸದ ನನಗೆ ಸಿನಿಮಾ ಪ್ರೀತಿ ಎಂಜನಿಯರಿಂಗ್ ನ ಕೊನೆ ವರ್ಷದಲ್ಲೇ ಓದಿಗೆ ಗುಡ್ ಬೈ ಹೇಳಿಸಿತು. ಓದು ನಿಲ್ಲಿಸಿದ ನಂತರ ಎರಡರಿಂದ ಮೂರು ವರ್ಷ ಮನೆಯಲ್ಲೇ ಕಳೆದೆ. ಸಿನಿಮಾ ಚಿತ್ರಕಥೆ, ದೃಶ್ಯ ಸಂಯೋಜನೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲದಿದ್ದರೂ ನನ್ನಗನ್ನಿಸಿದ ಹಾಗೆ ದೃಶ್ಯಗಳನ್ನು ಬರೆಯೋದು, ಕಥೆ ಬರೆಯೋದು, ಟಿವಿಯಲ್ಲಿ ಬರುತ್ತಿದ್ದ ಜಾಹೀರಾತುಗಳನ್ನು ನೋಡಿ ಇದನ್ನು ಇನ್ನೂ ಬೇರೆ ರೀತಿಯಲ್ಲಿ ಮಾಡಬಹುದಲ್ಲ ಎಂದೆನಿಸಿ ಅದಕ್ಕೆ ಪರ್ಯಾಯ ಚಿತ್ರಕಥೆ ಬರೆಯೋದು ಹೀಗೆಲ್ಲ ಮಾಡಿಕೊಂಡಿದ್ದೆ. ಒಂದು ಸಲ ಮಾಸ್ಟರ್ ಆನಂದ್ ಅವರ ರೋಬೋ ಫ್ಯಾಮಿಲಿ ಧಾರಾವಾಹಿ ಶುರುವಾಗುವುದರಲ್ಲಿತ್ತು, ನಾನು ಅವರ
ಸಹೋದರ ಅರುಣ್ ಎಂಬುವವರಿಗೆ ಫೇಸ್ಬುಕ್ ಮೆಸ್ಸೆಂಜರ್ ನಲ್ಲಿ ಸಂಪರ್ಕಿಸಿ ನನ್ನ ಬರವಣಿಗೆ ಬಗ್ಗೆ ಹೇಳಿಕೊಂಡೆ, ಅವರು ವಿಳಾಸ ಒಂದನ್ನು ಕಳಿಸಿ, ಇಲ್ಲಿಗೆ ಸಂಪರ್ಕಿಸಿ ನಿಮ್ಮಲ್ಲಿ ವಿಷಯ ಇದ್ದರೆ ಕೆಲಸ ಸಿಗುತ್ತದೆ ಎಂದರು. ನೇರವಾಗಿ ರೋಬೋ ಫ್ಯಾಮಿಲಿ ಶೂಟಿಂಗ್ ಸೆಟ್ ಗೆ ಹೋಗಿ ಮಾಸ್ಟರ್ ಆನಂದ್ ಅವರನ್ನು ಭೇಟಿಯಾದೆ. ಒಂದೆರಡು ಎಪಿಸೋಡ್ ಗೆ ಚಿತ್ರಕಥೆ ಮಾಡಿಕೊಂಡು ಬನ್ನಿ ಎಂದರು, ನನಗೋ ಯಾವುದಾದರೂ ಒಂದು ವಿಧದಲ್ಲಿ ಸಿನಿಮಾ, ಶೂಟಿಂಗ್ ಇದರ ಭಾಗವಾಗಬೇಕೆಂಬ ಹೆಬ್ಬಯಕೆ. ಎರಡು ಎಪಿಸೋಡ್ ಬರೆದು ಕೊಟ್ಟೆ, ಮೂರನೇ ದಿನ ಇನ್ನೂ ಬರೆಯಬಹುದೇ ಎಂದು ಕೇಳಿದರು ಹಾಗೆ ಶುರುವಾಗಿ ಸುಮಾರು 650 ಎಪಿಸೋಡ್ ಗಳ ತನಕ ಬರೆದೆ.
ಮಜಾ ಟಾಕೀಸ್ ಗೆ ಬರೆಯುವ ಅವಕಾಶ ಹೇಗೆ ಸಿಕ್ಕಿತು!?
ರೋಬೋ ಫ್ಯಾಮಿಲಿ ನಂತರ ಧಾರಾವಾಹಿ ಗೆ ಬರೆಯಲು ಶುರು ಮಾಡಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಟ ದಿಲೀಪ್ ರಾಜ್ ನಿರ್ಮಾಣ ಮಾಡಿದ ‘ಜಸ್ಟ್ ಮಾತ್ ಮಾತಲ್ಲಿ’ ಎಂಬ ಧಾರಾವಾಹಿಗೆ ಬರೆದೆ ಅದರ ನಂತರ ಮಜಾ ಟಾಕೀಸ್ ಮೊದಲ ಸೀಸನ್ ನ ಮಧ್ಯದಲ್ಲಿ ಕಲರ್ಸ್ ಕನ್ನಡ ಕಡೆಯಿಂದ ಕರೆ ಬಂತು. ಹಾಗೆ ಶುರುವಾದ ಪಯಣ ಮೂರನೇ ಸೀಸನ್ ತನಕ ಮುಂದುವರೆದುಕೊಂಡು ಬಂದಿದೆ. ಅಂತೆಯೇ ಸೃಜನ್ ಲೋಕೇಶ್ ಅವರೊಂದಿಗಿನ ಒಡನಾಟ ಅವರ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾಗೆ ಬರಹಗಾರನನ್ನಾಗಿ ಮಾಡಿತು.
ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ!
ಲಾಕ್ ಡೌನ್ ಜಾರಿಯಾಗುವ ಕೇವಲ ಎರಡು ದಿನಗಳ ಹಿಂದಷ್ಟೇ ಚಿರಂಜೀವಿ ಸರ್ಜಾ ಅವರು ಅಭಿನಯಿಸಿದ್ದ ‘ಶಿವಾರ್ಜುನ’ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದೆ. ಲಾಕ್ ಡೌನ್ ಆದ ಕಾರಣ ಚಿತ್ರ ಥೇಟರ್ ನಿಂದ ಹೊರ ಬಂತು. ಕೋರೋನ ಕಾಟ ಎಲ್ಲ ಮುಗಿದು ಚಿತ್ರಮಂದಿರಗಳು ತೆರೆದಾಗ ಮರುಬಿ ಡುಗಡೆ ಮಾಡುವ ಚಿಂತನೆಯನ್ನು ನಿರ್ಮಾಪಕರು ನಡೆಸಿದ್ದಾರೆ. ಅದು ಬಿಟ್ಟರೆ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದ ನಿರ್ದೇಶಕ ತೇಜಸ್ವಿ ಅವರ ಒಂದು ಕಥೆಯನ್ನು ಉಪೇಂದ್ರ ಅವರು ಓಕೆ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಆ ಚಿತ್ರಕ್ಕೆ ನನ್ನ ಸಂಭಾಷಣೆ ಇರಲಿದೆ.
ಬರವಣಿಗೆಯಲ್ಲಿ ಸೈ ಎನಿಸಿಕೊಂಡಿರುವ ರಾಕೇಶ್ ಸಿ ಎ ಅವರು ಹಾಡುಗಾರಿಕೆಯಲ್ಲೂ ನಿಪುಣರು. ಚಿತ್ರರಂಗದ ಗೆಲುವಿಗೆ ಸಿನಿಮಾ ಗೆಲುವು ಎಷ್ಟು ಮುಖ್ಯವೋ ಆ ಸಿನಿಮಾ ಗೆಲುವಿಗೆ ಅದರ ಹಿಂದಿರುವ ಬರಹಗಾರನ ಕೃಷಿ ಕೂಡಾ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ರಾಕೇಶ್ ಸಿ ಎ ಅವರಂಥ ಪ್ರತಿಭಾವಂತ ಬರಹಗಾರನನ್ನು ಗುರುತಿಸಿ, ಪ್ರೋತ್ಸಾಹಿಸಿ ಕೆಲಸ ತೆಗೆಯುವ ಹೊಣೆಗಾರಿಕೆ ಕನ್ನಡ ಚಿತ್ರರಂಗದ ಮೇಲಿದೆ.
ಸಂದರ್ಶನ : ಸುಜಯ್ ಬೆದ್ರ