ಪರಭಾಷೆಗಳಲ್ಲೂ ಕಮಾಲ್ ಮಾಡುತ್ತಿರುವ ʼಕಥೆಯೊಂದು ಶುರುವಾಗಿದೆʼ ಖ್ಯಾತಿಯ ಕನ್ನಡ ನಿರ್ದೇಶಕ ಸೆನ್ನಾ ಹೆಗ್ಡೆ
ಕನ್ನಡದ ನಿರ್ದೇಶಕರೆಲ್ಲರೂ ಬಹಳ ಟ್ಯಾಲೆಂಟೆಡ್ ಅನ್ನೋದು ಸಿನೆಮಾ ಇಂಡಸ್ಟ್ರಿಯಲ್ಲಿ ಮೊದಲಿನಿಂದಲೂ ಕೇಳಿಬರುತ್ತಿರುವ ವಾಸ್ತವ ಸತ್ಯ. ಎಲ್ಲಾ ಆಯಾಮಗಳಲ್ಲೂ ಕನ್ನಡದ ನಿರ್ದೇಶಕರು ಚಿತ್ರವನ್ನು ಆಳುತ್ತಾರೆ. ಅಂತಹವರ ಸಾಲಿಗೆ ಸೆನ್ನಾ ಹೆಗ್ಡೆ ಒಂದು ಪಟ್ಟು ಹೆಚ್ಚು ಟ್ಯಾಲೆಂಟ್‌ನಿಂದಲೇ ಸೇರ್ಪಡೆಗೊಂಡಿದ್ದಾರೆ.
ಕನ್ನಡದಲ್ಲಿ ದಿಗಂತ್ ಮಂಚಾಲೆ ಹಾಗೂ ಪೂಜಾ ದೇವರಿಯಾ ಅವರ ಕೆಮಿಸ್ಟ್ರಿಯೊಂದಿಗೆ ಕಥೆಯೊಂದು ಶುರುವಾಗಿದೆ ಎನ್ನುವ ಕಥಾಪ್ರಧಾನ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸಿದ್ದ ಸೆನ್ನಾ ಹೆಗ್ಡೆ, ಕನ್ನಡ ಇಂಡಸ್ಟ್ರಿಯನ್ನು ಸಿಂಪಲ್ಲಾಗಿ ಸೆಳೆದುಬಿಟ್ಟಿದ್ದರು. ಕಥೆಯೊಂದು ಶುರುವಾಗಿದೆಯೊಂದಿಗೆ ನಿರ್ದೇಶಕನಾಗುವ ಕನಸಿಗೆ ರೆಕ್ಕೆ ಕಟ್ಟಿಕೊಂಡ ಸೆನ್ನಾ, ತನ್ನ ಎರಡನೇ ಚಿತ್ರವನ್ನು ಮಳಯಾಳಂನಲ್ಲಿ ‘ತಿಂಕಲಜಾ ನಿಶ್ಚಯಂ’ ಎನ್ನುವ ಟೈಟಲ್‌ನೊಂದಿಗೆ, ಹೊಸ ಮುಖಗಳನ್ನೇ ಪರಿಚಯಿಸಿ ನಿರ್ದೇಶಿಸಿದ್ದು, ಈಗ ಇಡೀ ಭಾರತೀಯ ಚಿತ್ರರಂಗವನ್ನೇ ಸೆಳೆಯುತ್ತಿದ್ದಾರೆ.
ಮಳಯಾಳಂ ಚಿತ್ರರಂಗ ಹೇಳಿಕೇಳಿ ಕಥಾಪ್ರಧಾನ ಚಿತ್ರಗಳನ್ನೇ ನಿರೀಕ್ಷಿಸುತ್ತದೆ. ಆ ಚಿತ್ರರಂಗದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸಿ ಅದರಲ್ಲಿ ಯಶಸ್ಸು ಪಡೆಯುವುದೆಂದರೆ ಎಂತಹ ನಿರ್ದೇಶಕನಿಗೂ ಕಷ್ಟದ ಕೆಲಸವೇ ಹೌದು.
ಆದರೆ, ತನ್ನ ನಿರ್ದೇಶನದ ಮೊದಲನೇ ಚಿತ್ರದಲ್ಲೇ ಕೇವಲ ಜನತೆಯ ಮನಸ್ಸನ್ನು ಗೆದ್ದಿರುವುದಲ್ಲದೇ, ದಿಗ್ಗಜ ನಿರ್ದೇಶಕರು, ನಟರು, ನಿರ್ಮಾಪಕರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ ಎಂದರೆ, ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯೇ ಎನ್ನಬಹುದು.
ಜನಪ್ರಿಯ ನಟರಾದ ಶ್ರೀನಿವಾಸನ್, ವಿನೀತ್ ಶ್ರೀನಿವಾಸನ್, ರೀಮಾ ಕಲ್ಲಿಂಗಲ್, ಕುಂಜಕ್ಕೋ ಬಾಬನ್ ಹಾಗೂ ಆಶಿಕ್ ಅಬು ಮುಂತಾದವರು ಟ್ವಿಟರ್, ವೈಯಕ್ತಿಕ ಸಂದೇಶಗಳ ಮೂಲಕ ನಿರ್ದೇಶಕರಿಗೆ ಪ್ರಶಂಸೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ವಿಶೇಷವಾಗಿ ಮಳಯಾಳಂನ ದಿಗ್ಗಜ ನಿರ್ದೇಶಕ, ಪ್ರೇಮಂ ಚಿತ್ರದ ನಿರ್ದೇಶಕ ಅಲ್ಫಾನ್ಸೋ ಪುತ್ರನ್, ಚಿತ್ರವನ್ನು ಮನಸಾರೆ ಮೆಚ್ಚಿಕೊಂಡಿದ್ದು, “ಕ್ಯೂಟ್ ಫಿಲ್ಮ್, ಚಿತ್ರತಂಡಕ್ಕೆ ಶುಭವಾಗಲಿ” ಎಂದು ಹಾಡಿ ಹೊಗಳಿದ್ದಾರೆ.
ಇನ್ನು ಈ ಚಿತ್ರವು ಕೇರಳದ 51 ನೇ ರಾಜ್ಯ ಚಲನಚಿತ್ರೋತ್ಸವದಲ್ಲಿ ಉತ್ತಮ ಚಿತ್ರಕಥೆ ವಿಭಾಗದಲ್ಲಿ ಪ್ರಥಮ ಹಾಗೂ ಉತ್ತಮ ಚಿತ್ರ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಚಿತ್ರದ ಔನ್ನತ್ಯವನ್ನು ಎತ್ತಿ ತೋರಿಸುತ್ತದೆ.
ಪ್ರೇಕ್ಷಕರು ಮೆಚ್ಚಿದ ‘ಒಂಭತ್ತನೇ ದಿಕ್ಕು’…
ಮಂಗಳೂರು ಮೂಲದ ಈ ಯುವ ನಿರ್ದೇಶಕ, ಕಾಂಞಗಾಡ್‌ನಲ್ಲಿ ಸದ್ಯಕ್ಕೆ ವಾಸ್ತವ ಹೂಡಿದ್ದು, ಈಗಾಗಲೇ ತನ್ನ ನಿರ್ದೇಶನದ ಮೂರನೇ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಷರೀಫ್‌ಉದ್ದೀನ್ ನಾಯಕ ನಟನಾಗಿ ನಟಿಸಿರುವ 1744 WA ಎಂಬ ವಿಶೇಷ ಟೈಟಲ್ ಉಳ್ಳ ಚಿತ್ರ ಫೆಬ್ರವರಿ ಮೊದಲ ವಾರದಲ್ಲಿ ತೆರೆಕಾಣುವ ಸಂಭವವಿದೆ.
ಅದಲ್ಲದೆ, ಮಳಯಾಳಂನ ಸ್ಟಾರ್ ನಟ ಕುಂಜಕ್ಕೋ ಬಾಬನ್ ಅವರೊಂದಿಗೆ ಇನ್ನೊಂದು ಚಿತ್ರವನ್ನೂ ನಿರ್ದೇಶಿಸುತ್ತಿದ್ದು, ಅದರ ವಿವರಗಳನ್ನು ಇನ್ನಷ್ಟೇ ನಿರೀಕ್ಷಿಸಬೇಕಿದೆ.
ಒಟ್ಟಾರೆ, ಕನ್ನಡದಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸಿ ಯಶಸ್ಸನ್ನು ಕಂಡು, ಈಗ ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲೂ ಕಮಾಲ್ ಮಾಡುತ್ತಿರುವ ಯುವ ನಿರ್ದೇಶಕನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸೋಣ.