ರಿಮೇಕ್ ಚಿತ್ರಗಳನ್ನು ಮಾಡುವಷ್ಟು ಬರಿದಾಯಿತೆ ಬಾಲ ಅವರ ಬತ್ತಳಿಕೆ..
ಕೆ. ಬಾಲಚಂದರ್ ಅವರ ಸಮಕಾಲಿನ ನಿರ್ದೇಶಕರ ನಂತರ ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನಿರ್ದೇಶಕರೆಂದರೆ ಮಣಿರತ್ನಂ, ಶಂಕರ್ ಮತ್ತು ಬಾಲ ಅವರು. ಒಂದೇ ಕತೆಯನ್ನು ಏಕಕಾಲಕ್ಕೆ ಎರಡು ಭಾಷೆಯಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರಿಂದ ಚಿತ್ರಿಸುವ ಹೊಸ ದಾರಿಯನ್ನು ಮಣಿರತ್ನಂ ಕಂಡುಕೊಂಡರೆ, ಶಂಕರ್ ಮತ್ತು ಬಾಲ ತಮ್ಮ ವೃತ್ತಿಜೀವನದ ಎರಡು ದಶಕಗಳ ಕಾಲ ರಿಮೇಕ್ ಚಿತ್ರಗಳಿಗೆ ಕೈ ಹಾಕಿದವರಲ್ಲ. ತಮ್ಮ ಸ್ವಂತಿಕೆಯ ಚಿತ್ರಗಳಿಗೆ ಹೆಸರಾದವರು. ಆದರೆ ೨೦೧೨ರಲ್ಲಿ ಹಿಂದಿಯ ತ್ರೀ ಈಡಿಯಟ್ಸ್ ಚಿತ್ರವನ್ನು ತಮಿಳಿಗೆ ‘ನನ್ ಬನ್’ ಹೆಸರಲ್ಲಿ ರಿಮೇಕ್ ಮಾಡಿ ಶಂಕರ್ ತಮ್ಮ ಸ್ವಂತಿಕೆಯನ್ನು ತಾವೇ ಮುರಿದರು. ಸದಭಿರುಚಿಯ ಚಿತ್ರಗಳಿಗೆ ಮಣಿರತ್ನಂ, ಸಾಮಾಜಿಕ ಸಂದೇಶವುಳ್ಳ ಕಮರ್ಶಿಯಲ್ ಚಿತ್ರಗಳಿಗೆ ಶಂಕರ್ ಹೆಸರಾದರೂ ಪ್ರೇಕ್ಷಕರ ನಾಡಿಮಿಡಿತಕ್ಕನುಗುಣವಾಗಿ ರಾಜಿ ಮಾಡಿಕೊಂಡು ಕತೆ ಹೆಣೆದಿರುವಂತೆ ಇವರ ಕೆಲವು ಚಿತ್ರಗಳನ್ನು ನೋಡಿದಾಗ ಒಮ್ಮೊಮ್ಮೆ ಅನಿಸುತ್ತದೆ. ಆದರೆ ಇವರೀರ್ವರಿಗಿಂತಲೂ ವಿಭಿನ್ನವಾಗಿ ತಮಿಳಿನ ಪ್ರಾದೇಶಿಕತೆ ಸೊಗಡು ಎದ್ದು ಕಾಣುವಂತ ಚಿತ್ರಗಳನ್ನು ಮಾಡಿದವರು ಬಾಲ. ಯಾವ ಭಾಷೆಗೆ ಇವರ ಚಿತ್ರಗಳನ್ನು ರಿಮೇಕ್ ಮಾಡಿದರೂ ಮೂಲಚಿತ್ರದಂತೆ ನೇಟಿವಿಟಿಯನ್ನು ತರಲು ಸಾಧ್ಯವೇ ಇಲ್ಲ ಎನಿಸುವಂತಹ ಮಾಸ್ಟರ್ ಪೀಸ್ ಚಿತ್ರಗಳು ಇವರವು.’ಸೇತು’ ಚಿತ್ರದಲ್ಲಿ ನಾಯಕಿ ಆತ್ಮಹತ್ಯೆ ಮಾಡಿಕೊಂಡು ನಾಯಕ ಕೊನೆಗೆ ಹುಚ್ಚನಾಗುವುದು, ‘ಪಿತಾಮಗನ್’ ಚಿತ್ರದಲ್ಲಿ ಇಬ್ಬರು ನಾಯಕರಲ್ಲೊಬ್ಬ ಖಳರಿಂದ ಹತನಾಗುವುದು, ‘ನಾನ್ ಕಡವುಳ್’ ಚಿತ್ರದಲ್ಲಿ ಅಂಧೆಯನ್ನು ಕಾಪಾಡುವ ಅಘೋರಿಯೇ ಕೊನೆಗೆ ಆಕೆಯ ಕತ್ತು ಸೀಳಿ ಮುಕ್ತಿ ಕರುಣಿಸುವುದು, ‘ಪರದೇಸಿ’ ಚಿತ್ರದಲ್ಲಿ ಜೀತಕ್ಕೊಳಗಾದ ನಾಯಕ ಸಾಲದಂತೆ ಕೊನೆಗೆ ಅವನ ಹೆಂಡತಿ ಮಗುವೂ ಆ ಜೀತದ ಪಾಪಕೂಪಕ್ಕೆ ಬಂದುಬೀಳುವುದು…ಇತ್ಯಾದಿ ಚಿತ್ರದ ಕೊನೆಯ ದೃಶ್ಯದವರೆಗೂ ಪ್ರೇಕ್ಷಕ ಊಹೆಯನ್ನೂ ಮಾಡಿಕೊಂಡಿರದಂತೆ ಕತೆ ಹೇಳುವುದರಲ್ಲಿ ನಿಸ್ಸೀಮರು ಬಾಲ. ‘ನಾನು ಸಿನಿಮಾ ಮಾಡುವುದೇ ಹೀಗೆ. ಬೇಕಾದ್ರೆ ನೋಡಿ; ಸಾಕಾದ್ರೆ ಎದ್ದೋಗಿ..’ ಎನ್ನುವ ಧಾಟಿ ಬಾಲ ಅವರದ್ದು. ಕೇವಲ ಯಶಸ್ಸಿಗಾಗಿ ನಿರ್ಮಾಪಕ ಪ್ರೇಕ್ಷಕರನ್ನು ಓಲೈಸದ ಅವರ ಈ ಧಾಟಿಯೇ ನನಗೆ ತುಂಬಾ ಮೆಚ್ಚುಗೆಯಾಗುವಂತದ್ದು. ಆದರೆ ತಮ್ಮ ಧಾಟಿಯಿಂದ ವ್ಯತಿರಿಕ್ತವಾಗಿ ಈಗ ರಿಮೇಕ್ ಸಿನಿಮಾ ಮಾಡ್ತಿದಾರೆ ಎಂಬ ಸುದ್ದಿ ಕೇಳಿ ಆಶ್ಚರ್ಯ ಪಟ್ಟಿದ್ದೆ. ಅದೂ ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾ ಎನ್ನುವುದು ಇನ್ನೂ ಸಖೇದಾಶ್ಚರ್ಯ!
ಯಾವುದೋ ಯೋಚನೆಯಲ್ಲಿ ಮಗ್ನರಾಗಿ ನಮ್ಮ ಪಾಡಿಗೆ ನಾವು ವಾಹನದಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಬರುವ ರಸ್ತೆಯ ಉಬ್ಬುಗಳಿಂದ ಮುಗ್ಗುರಿಸುವಂತಹ ಅನುಭವವಾಗುತ್ತದಲ್ಲ.. ಅಂತದ್ದೊಂದು ವಿಲಕ್ಷಣ ಚಿತ್ರ ಅರ್ಜುನ್ ರೆಡ್ಡಿ! ಆ ವಿಲಕ್ಷಣತೆಯೇ ಅರ್ಜುನ್ ರೆಡ್ಡಿಯೆಡೆಗೆ ಪ್ರೇಕ್ಷಕರನ್ನು ಥಟ್ಟನೆ ಸೆಳೆದದ್ದು. ಇಡೀ ಭಾರತೀಯ ಚಿತ್ರರಂಗದಲ್ಲಿಯೇ ನಾಯಕ ಪ್ರಧಾನ ಚಿತ್ರಗಳನ್ನು ಅತಿಯಾಗಿ ಬಿಂಬಿಸುವ ತೆಲುಗು ಚಿತ್ರರಂಗದಲ್ಲಿ ಮರುಭೂಮಿಯ ಓಯಸಿಸ್’ನಂತೆ ಆಗೊಮ್ಮೆ ಈಗೊಮ್ಮೆ ಬಂದುಹೋಗುವ ಪ್ರಯೋಗಾತ್ಮಕ ಚಿತ್ರಗಳಲ್ಲೊಂದು ಅರ್ಜುನ್ ರೆಡ್ಡಿ. ಈ ಚಿತ್ರದ ನಿರ್ದೇಶಕ ಸಂದೀಪ್ ವಂಗ ಅವರ ಕಲ್ಪನೆಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದು ಭಗ್ನಪ್ರೇಮಿಯಾಗಿ ಮಾದಕದ್ರವ್ಯ ವ್ಯಸನಿಯಾಗಿ ಆಧುನಿಕ ದೇವದಾಸ ನಾಯಕನ ಪಾತ್ರಕ್ಕೆ ಪರಕಾಯ ಪ್ರವೇಶಿಸಿದಂತೆ ಲೀಲಾಜಾಲವಾಗಿ ನಟಿಸಿದ್ದ ವಿಜಯ್ ದೇವರಕೊಂಡ ಎಂಬ ಸ್ಪುರದ್ರೂಪಿ ನಟ. ಮೀಸೆ ಗಡ್ಡಗಳಿಲ್ಲದ ಕಾಲೇಜು ವಿದ್ಯಾರ್ಥಿಗಿಂತ ಮೀಸೆ ಗಡ್ಡ ಬಿಟ್ಟ ಭಗ್ನಪ್ರೇಮಿಯ ಡಿಫರೆಂಟ್ ಲುಕ್ ರಾತ್ರೋರಾತ್ರಿ ಆತನಿಗೆ ಸ್ಟಾರ್ ಇಮೇಜ್ ತಂದುಕೊಟ್ಟಿತ್ತು. ಕೆ.ಜಿ.ಎಫ್ ಚಿತ್ರಕ್ಕಿಂತಲೂ ಮೊದಲು ಜನ ಮೀಸೆ ಗಡ್ಡಗಳಿಗೆ ಮಾರುಹೋಗಿದ್ದರೆ ಅದು ಅರ್ಜುನ್ ರೆಡ್ಡಿಯಾ ವಿಜಯ್ ಗೆಟಪ್’ಗೆ ಮಾತ್ರ.
ಈಗ ಇದರ ತಮಿಳು ರಿಮೇಕ್ ‘ವರ್ಮಾ’ ಚಿತ್ರಕ್ಕೆ ನಿರ್ದೇಶಕ ಬಾಲ ನಾಯಕನ ಪಾತ್ರಕ್ಕೆ ಆಯ್ಕೆಮಾಡಿಕೊಂಡದ್ದು ಖ್ಯಾತ ನಟ ವಿಕ್ರಮ್’ರ ಮಗ ಧ್ರುವ ವಿಕ್ರಮ್’ರನ್ನು. ಚಾಕ್ಲೇಟ್ ಬಾಯ್ ಲುಕ್ ಇರುವ ಧ್ರುವ ಮೀಸೆಗಡ್ಡಗಳಿಲ್ಲದ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲೆನೋ ಮುದ್ದಾಗಿ ಕಾಣುತ್ತಾರೆ. ಆದರೆ ಮೀಸೆಗಡ್ಡ ಬಿಟ್ಟ ದೇವದಾಸನ ಗೆಟಪ್’ನಲ್ಲಿ ವಿಜಯ್ ಜೊತೆಗೆ ಧ್ರುವನನ್ನು ಹೋಲಿಸಿ ನೋಡಲೂ ಸಹ ಕಷ್ಟವಾಗುತ್ತದೆ. ಪೋಸ್ಟರ್’ನಲ್ಲಿರುವ ಮೀಸೆಗಡ್ಡಗಳೆರಡೂ ಕೃತಕವಾಗಿ ಅಂಟಿಸಿದಂತೆ ಭಾಸವಾಗುತ್ತದೆ
ತ್ರೀ ಈಡಿಯಟ್ಸ್ ಆದರೂ, ಚೇತನ್ ಭಗತ್ ಕಾದಂಬರಿ ಆಧಾರಿತ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಿದ್ದ ಇಂದಿನ ಅತಂತ್ರ ಶಿಕ್ಷಣ ಪದ್ದತಿ ಕುರಿತ ಅತ್ಯುತ್ತಮ ಕತೆ ಇರುವ ಚಿತ್ರ ಎನ್ನುವ ಹೆಗ್ಗಳಿಕೆಯಾದರೂ ಇತ್ತು ಶಂಕರ್ ರಿಮೇಕ್ ಮಾಡಲು. ಆದರೆ ಅರ್ಜುನ್ ರೆಡ್ಡಿ ಬಾಲ ರಿಮೇಕ್ ಮಾಡಲೇಬೇಕಾದಂಥ ವಿಶೇಷ ಕಾರಣಗಳಿರುವ ಚಿತ್ರ ಎನ್ನುವ ಅನಿವಾರ್ಯತೆಯೇನೂ ಇರಲಿಲ್ಲ ಎಂದೆನಿಸುತ್ತದೆ ನನಗೆ. ಅದುವರೆಗೂ ಸಣ್ಣಪುಟ್ಟ ಪಾತ್ರಗಳಲ್ಲಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ತೆರೆಮರೆಯಲ್ಲಿದ್ದ ವಿಕ್ರಮ್’ರ ಪ್ರತಿಭೆಯನ್ನು ಗುರುತಿಸಿ ‘ಸೇತು’ ಚಿತ್ರದ ನಾಯಕನನ್ನಾಗಿಸಿ ಅವರ ವೃತ್ತಿಜೀವನಕ್ಕೊಂದು ಅದ್ಭುತ ಯಶಸ್ಸಿನ ತಿರುವು ಕೊಟ್ಟವರು ಬಾಲ. ಈಗ ವಿಕ್ರಮರ ಮಗನನ್ನೂ ಮೊದಲ ಬಾರಿಗೆ ತೆರೆ ಮೇಲೆ ತಾವೇ ತರುವ ಹಠಕ್ಕೆ ಬಿದ್ದು ಈ ರಿಮೇಕ್ ಚಿತ್ರ ಕೈಗೆತ್ತಿಕೊಂಡಂತೆ ಕಾಣುತ್ತದೆ.
ಆದರೆ ಇತ್ತೀಚಿನ ಸುದ್ದಿ ಪ್ರಕಾರ ನಿರ್ಮಾಪಕರೊಂದಿಗೆ ಮನಸ್ತಾಪವಾಗಿ ಈ ಚಿತ್ರದಿಂದ ಬಾಲ ಅವರು ಹೊರಬಂದಿದ್ದಾರಂತೆ. ಇದು ನಿಜವೇ ಆದಲ್ಲಿ ಬಾಲ ಅವರಿಂದ ರಿಮೇಕ್ ಚಿತ್ರಗಳನ್ನು ಬಯಸದ ಅವರ ಪ್ರೇಕ್ಷಕರಿಗೆ ಸಂತಸವಾಗಬಹುದೇನೋ..