ನಮ್ಮನ್ನಗಲಿದ ಕನ್ನಡದ ಪರಿಪೂರ್ಣ ಕಲಾವಿದೆ-ಭಾರ್ಗವಿ ನಾರಾಯಣ್
83 ವರ್ಷದ ಭಾರ್ಗವಿ ನಾರಾಯಣ್ ಎನ್ನುವ ಕನ್ನಡ ಚಿತ್ರರಂಗದ ಕಲಾವಿದೆ, ತನ್ನ 80ರ ಹರೆಯದಲ್ಲೂ ಕನ್ನಡದ ಬಹುನಿರೀಕ್ಷಿತ ಚಿತ್ರ ಚಾರ್ಲಿ 777 ನಲ್ಲಿ ನಟಿಸುತ್ತಾರೆ ಎಂದರೆ ಆ ಮಹಾತಾಯಿಯ ನಟನಾ ಕೌಶಲ್ಯ ಎಂಥದ್ದು ಎನ್ನುವುದು ನಮಗೆ ಅರ್ಥವಾಗುತ್ತದೆ.
ನಿನ್ನೆತಾನೆ ಇಹಲೋಕ ತ್ಯಜಿಸಿದ ಈ ರಂಗನಾಯಕಿ, ಕನ್ನಡ ಚಿತ್ರರಂಗದ ಅಜ್ಜಿ ಬುಜ್ಜಿ ಎಂದೇ ಪ್ರಸಿದ್ಧರು. ಅವರು ಚಿತ್ರತಂಡದಲ್ಲಿದ್ದಾರೆ ಎಂದರೆ ತಂಡಕ್ಕೇ ಒಂದು ಹೆಮ್ಮೆಯ ಮನೋಭಾವ. ಅಷ್ಟು ಗೌರವ ಹೊಂದಿರುವ ಸರಳ ನಡೆಯ ನಟಿ ಭಾರ್ಗವಿ ಅಮ್ಮನವರು.
ಕನ್ನಡ ಚಿತ್ರರಂಗದಲ್ಲಿ ಭಾರ್ಗವಿ ನಾರಾಯಣ್ ಅವರು ಅದೆಷ್ಟೋ ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಎರಡು ಕನಸು, ಹಂತಕನ ಸಂಚು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ ಮುಂತಾದ ಹಿಟ್ ಚಿತ್ರಗಳಲ್ಲದೆ, ಇನ್ನೇನು ತೆರೆಕಾಣಲಿರುವ, ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಚಿತ್ರದಲ್ಲಿ ಕೂಡ ನಟಿಸಿದ್ದಾರೆ.
ಭಾರ್ಗವಿಯವರು, ಕನ್ನಡದ ಪ್ರಸಾದನ ಕಲಾವಿದರಾದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರ ಧರ್ಮಪತ್ನಿ. ಭಾರ್ಗವಿಯವರಿಗೆ ನಾಲ್ವರು ಮಕ್ಕಳು. ಎಲ್ಲರೂ ಪ್ರತಿಭಾವಂತರಾಗಿದ್ದು, ಮಕ್ಕಳಾದ ಪ್ರಕಾಶ್ ಬೆಳವಾಡಿ ಹಾಗೂ ಸುಧಾ ಬೆಳವಾಡಿ ಕನ್ನಡ ಚಿತ್ರರಂಗದಲ್ಲೇ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ಅದರಲ್ಲೂ ಪ್ರಕಾಶ್ ಬೆಳವಾಡಿಯವರ ನಟನಾ ಕೌಶಲ್ಯಕ್ಕೆ, ಬರಹ, ನಡೆ ನುಡಿಗೆ ಸಾಟಿಯೇ ಇಲ್ಲ. ಇನ್ನು ಮೊಮ್ಮಗಳಾದ ಸಂಯುಕ್ತಾ ಹೊರ್ನಾಡು ಕೂಡ ಕನ್ನಡದ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.
Kyaabre Kannada Web Series By Tharle Box
ತಾನೂ ಜೀವನವನ್ನು ಚಿತ್ರರಂಗಕ್ಕಾಗಿಯೇ ಸವೆಸಿ, ತನ್ನ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಚಿತ್ರರಂಗಕ್ಕೇ ಕೊಡುಗೆಯಾಗಿ ನೀಡಿ, ತನ್ನ ಕೊನೆಯ ದಿನಗಳಲ್ಲೂ ಬಣ್ಣವನ್ನೇ ಹಚ್ಚಿ, ಅಸೌಖ್ಯದಿಂದ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಈ ಮಹಾನ್ ಕಲಾವಿದೆ-ತಾಯಿಗೆ ಭಾವಪೂರ್ಣ ನಮನಗಳು. ನಿಮ್ಮ ನಟನೆ, ರಂಗಕ್ಕೆ ನೀಡಿದ ಕೊಡುಗೆಗಳು ಅವಿಸ್ಮರಣೀಯ.