‘ಕೆಜಿಎಫ್ 2’ ಟೀಸರ್ ಲೀಕ್ ಮಾಡಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದ ಯಶ್
ಯಶ್ ಅಭಿನಯದ ‘ಕೆಜಿಎಫ್ 2’ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಭರ್ಜರಿ ಸೌಂಡ್ ಮಾಡುತ್ತಿದೆ. ಮೆಷಿನ್ ಗನ್ ನಲ್ಲಿ ಬುಲೆಟ್ ಹಾರಿಸಿ, ಆ ಕಾದ ಗನ್ನಿನ ನಳಿಕೆ ಮೂಲಕ ರಾಕಿಂಗ್ ಸ್ಟಾರ್ ಯಶ್ ಸಿಗರೇಟ್ ಹಚ್ಚಿಕೊಳ್ಳುವ ದೃಶ್ಯ ಅಭಿಮಾನಿಗಳನ್ನು ಫಿದಾ ಪಡಿಸಿದೆ. ರವೀನಾ ಟಂಡನ್ ರಾಜಕಾರಣಿ ಲುಕ್ ನಲ್ಲಿ ಮಿಂಚಿದ್ದು, ಸಂಜಯ್ ದತ್ ಹಾಗೂ ಯಶ್ ಸಖತ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಕೆಜಿಎಫ್ 1’ ಚಿತ್ರದಲ್ಲಿ “ಪವರ್ ಫುಲ್ ಪೀಪಲ್ ಕೇಮ್ ಫ್ರಮ್ ಪವರ್ ಫುಲ್ ಪ್ಲೇಸಸ್” ಎನ್ನುವ ಡೈಲಾಗ್ ಇತ್ತು. ಈಗ ‘ಕೆಜಿಎಫ್ 2’ ನಲ್ಲಿ “ಪವರ್ ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ ಫುಲ್” ಎನ್ನುವ ಡೈಲಾಗ್ ಬಳಸಲಾಗಿದ್ದು, ಸಖತ್ ಥ್ರಿಲ್ ನೀಡಿದೆ. ‘ಕೆಜಿಎಫ್ 2’ ಚಿತ್ರದ ಟೀಸರ್ ಇಂದು(ಜ.8) ಯಶ್ ಹುಟ್ಟುಹಬ್ಬದ ದಿನ ಬೆಳಿಗ್ಗೆ 10.18ಕ್ಕೆ ಬಿಡುಗಡೆಯಾಗಬೇಕಿತ್ತು. ಅದರೆ ನಿನ್ನೆ ರಾತ್ರಿಯೇ ಟೀಸರ್ ರಿಲೀಸ್ ಮಾಡಲಾಗಿದೆ. ಚಿತ್ರದ ಟೀಸರ್ ಲೀಕ್ ಆಗಿದ್ದು, ಈ ಬಗ್ಗೆ ಮಾತನಾಡಿದ ಯಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವ ಮೂಲಕ ಹೇಳಿಕೆ ನೀಡಿದ್ದಾರೆ. “ಯಾರೋ ಪುಣ್ಯಾತ್ಮರು, ಮಹಾನುಭವರು ಟೀಸರ್ ಲೀಕ್ ಮಾಡಿದ್ದಾರೆ. ಅವರಿಗೆ ಇದರಿಂದ ಏನು ಖುಷಿ ಸಿಗುತೋ ಗೊತ್ತಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಅಭಿಮಾನಿಗಳು ನಿರಾಶರಾಗುವುದು ಬೇಡ. ಇದು ಟೀಸರ್, ಮುಂದಿದೆ ಸಿನಿಮಾ” ಎಂದಿದ್ದಾರೆ.