“ವಿನಯ್ ಗೌಡ” ನಂದಿನಿಯಲ್ಲಿ ವಿರಾಟ್ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ
ಈಗಾಗಲೇ 600 ಕ್ಕೂ ಹೆಚ್ಚು ಕಂತುಗಳನ್ನ ಮುಗಿಸಿ ಮುನ್ನುಗ್ಗುತ್ತಿರುವ ನಂದಿನಿ ಧಾರಾವಾಹಿಯಲ್ಲಿ ಚಿತ್ರನಟಿ ಖುಷ್ಬೂ, ನಿತ್ಯಾ ರಾಮ್, ಪಂಚ ಭಾಷಾ ನಟ ರಿಯಾಜ್ ಖಾನ್ ಹೀಗೆ, ದೊಡ್ಡ ದೊಡ್ಡ ನಟರುಗಳು ಬಂದು ಪಾತ್ರ ವಹಿಸುತ್ತಿದ್ದಾರೆ. ಈಗ ಈ ಸಾಲಿಗೆ ಕನ್ನಡದ ಹೆಸರಾಂತ ನಟ ವಿನಯ್ ಗೌಡ ಕೂಡ ಸೇರಿಕೊಂಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಅದ್ಭುತ ಹೆಸರು ಮಾಡಿರೋ ನಂದಿನಿ ಧಾರಾವಾಹಿಯಲ್ಲಿ ಇನ್ನುಮುಂದೆ ಹೀರೋ ಆಗಿ ನಟಿಸ್ತಿದ್ದಾರೆ ವಿನಯ್ ಗೌಡ ಅವ್ರು. ಈ ಹಿಂದೆ ಉದಯ ಟೀವಿಯಲ್ಲಿ ತೆರೆಕಂಡು ಅಪಾರ ಜನಮೆಚ್ಚುಗೆ ಗಳಿಸಿದ ” ಜೈ ಹನುಮಾನ್ ” ಧಾರಾವಾಹಿಯಲ್ಲಿ ರಾವಣನ ಪಾತ್ರವನ್ನ ಮಾಡಿ ಮಿಂಚಿದ್ದಾರೆ ವಿನಯ್ ಅವರು. ಕಳೆದ ಎಂಟೊಂಭತ್ತು ವರ್ಷದ ಅವಧಿಯಲ್ಲಿ, ಸಾಕಷ್ಟು ಸೀರಿಯಲ್ ಗಳನ್ನ ಮಾಡಿ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದೆ ನಿಂತಿದ್ದಾರೆ ವಿನಯ್ ಅವರು. ಅಷ್ಟೇ ಅಲ್ಲದೆ, ಸಾಕಷ್ಟು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಇವರು, ಕಲಾಭಿಮಾನಿಗಳು ತೋರಿಸಿರುವ ಈ ಪ್ರೀತಿ ಮುಂದೆ ತಾನು ಬಹಳ ಚಿಕ್ಕವನೆಂದು ಹೆಸರಿಗೆ ತಕ್ಕಂತೆ ವಿನಯರಾಗೇ ಹೇಳುತ್ತಾರೆ. ಇಂತಹ ವಿನಯ್ ಗೌಡ ಈಗ ಖ್ಯಾತ ಹೆಸರಾದ ನಂದಿನಿ ಧಾರಾವಾಹಿಗೆ ಹೀರೋ ಆಗಿ ಬರುತ್ತಿರುವುದು ಕನ್ನಡ ಕಿರುತೆರೆಯ ಕಲಾಭಿಮಾನಿಗಳಲ್ಲಿ ಹೊಸ ಹುರುಪು ತಂದಿದೆ.
ಈ ಪಾತ್ರಕ್ಕೆ ಇವರು ಸಾಕಷ್ಟು ಹೊಸ ತಯಾರಿ ಮಾಡಿಕೊಳ್ಳಬೇಕಾಯಿತು. ” ಜೈ ಹನುಮಾನ್” ನಲ್ಲಿ ರಾವಣನ ಪಾತ್ರಕ್ಕೆ ಮೈ ಬೆಳೆಸಿಕೊಂಡು 120 ಕೆ.ಜಿ ತೂಕವಿದ್ದ ಇವರು, ಈಗ ಈ ಪಾತ್ರಕ್ಕೆ ಸರಿಯಾಗಿ 20 ಕೆ.ಜಿ. ಇಳಿಸಿಕೊಂಡಿದ್ದಾರೆ. ರೊಮಾಂಟಿಕ್ ಹೀರೋ ಆಗಿಯೂ, ವಿಲನ್ ಗಳನ್ನು ಸದೆಬಡಿಯುವ ಆಕ್ಷನ್ ಹೀರೋ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ ವಿನಯ್ ಅವರು. ಪ್ರೀತಿ ಇಂದ ಬಂದರೆ ಪ್ರಾಣ ಬೇಕಾದರೂ ಕೊಡುವ, ಕೆಣಕಿದರೆ ಕೆಂಡಾಮಂಡಲ ಆಗಿಬಿಡುವ ಪಾತ್ರ ಈ ವಿರಾಟ್ ದು. ಮನುಷ್ಯಳಾಗಿದ್ದರೂ ಅರ್ಧ ಶಿವನಾಗಿಣಿಯಾಗಿರುವ ಕಥಾನಾಯಕಿ ಜನನಿಯನ್ನ ಮಾಯಾವಿ ಅಷ್ಟಾವಕ್ರನ ಜಾಲದಿಂದ ಕಾಪಾಡಿ ರಕ್ಷಿಸಿದ ವಿರಾಟ್ ಅವಳ ಮುಗ್ಧ ಮನಸ್ಸಿಗೆ ಸೋಲುತ್ತಾನೆ. ಪ್ರೀತಿಸುತ್ತಾನೆ. ಆದರೆ ಕಾರಣಾಂತರಗಳಿಂದ ಜನನಿ ವಿರಾಟನ ಪ್ರೀತಿ ತಿರಸ್ಕರಿಸುತ್ತಿದ್ದಾಳೆ. ಆದರೆ ಮುಂದೆ, ಪರಿಸ್ಥಿತಿಯೇ ಇವರಿಬ್ಬರನ್ನ ಒಂದು ಮಾಡುವ ಸನ್ನಿವೇಶ ತರಲಿದೆ. ನಂದಿನಿ ಧಾರಾವಾಹಿಯು ಈ ರೋಚಕ ತಿರುವಿನಲ್ಲಿದೆ.
ತೆರೆಯ ಮೇಲೆ ವಿನಯ್ ಗೌಡ ಮತ್ತು ಚೆಲುವೆ ನಿತ್ಯಾ ರಾಮ್ ಇಬ್ಬರೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಂತೂ ಅತ್ಯಂತ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೆ, ಪ್ರೇಕ್ಷಕರು ಹಿಂದೆಂದೂ ನೋಡಿರದ ಗ್ರಾಫಿಕ್ಸ್ ದೃಶ್ಯಗಳನ್ನ ಹೊತ್ತಿರುವ “ನಂದಿನಿ” ಧಾರಾವಾಹಿಯಲ್ಲಿ ಮಿಂಚಲಿದ್ದಾರೆ ವಿನಯ್ ಅವರು. ಇನ್ನು ಮುಂದೆ ನಿಮ್ಮ ನೆಚ್ಚಿನ ವಿನಯ್ ವಿರಾಟ್ ಆಗಿ, ನಂದಿನಿ ಧಾರಾವಾಹಿಗೆ ಹೊಸ ಮೆರುಗು ಕೊಡುವುದಂತೂ ನಿಶ್ಚಿತ.
ನಂದಿನಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.