ನಿರೀಕ್ಷೆಗಳ ಅಲೆಯನ್ನೇ ಎಬ್ಬಿಸಿದೆ ವಿಕ್ರಾಂತ್ ರೋಣಾ
ಸಾಮಾನ್ಯವಾಗಿ ಕಿಚ್ಚ ಸುದೀಪ್ ಅವರ ಚಿತ್ರಗಳೆಲ್ಲವೂ ರಿಲೀಸ್‌ಗೂ ಮೊದಲೇ ಹವಾ ಎಬ್ಬಿಸುತ್ತವೆ. ಅವರ ಮೊದಲ ಚಿತ್ರ ತಾಯವ್ವದಿಂದ ಆರಂಭಿಸಿ, ಇತ್ತೀಚೆಗಷ್ಟೇ ಥಿಯೇಟರ್‌ನಲ್ಲಿ ಧೂಳೆಬ್ಬಿಸಿದ ಕೋಟಿಗೊಬ್ಬ-3 ತನಕವೂ ಸಿನಿಪ್ರಿಯರು ಸುದೀಪ್ ಚಿತ್ರಗಳನ್ನು ಹುಡುಕಿ ಹುಡುಕಿ ನೋಡುವುದು ಸಾಮಾನ್ಯ. ಅಭಿನಯ ಚಕ್ರವರ್ತಿಯ ಚಿತ್ರಗಳ ಶಕ್ತಿಯೇ ಅಂತಹದ್ದು.
ನಿರೀಕ್ಷೆಗಳ ಅಲೆಯನ್ನೇ ಎಬ್ಬಿಸಿದೆ ವಿಕ್ರಾಂತ್ ರೋಣಾ
ಯಂಗ್ ಎಂಡ್ ಎನರ್ಜಿಟಿಕ್ ಟೀಮ್!
ಈ ಚಿತ್ರಗಳ ಸಾಲಿಗೆ ಅಥವಾ ಎಲ್ಲ ದಾಖಲೆಗಳನ್ನು ಪುಡಿಗಟ್ಟುವ ಸನಿಹದಲ್ಲಿದೆ ವಿಕ್ರಾಂತ್ ರೋಣ. ವಿಶೇಷವೆಂದರೆ ಈ ಚಿತ್ರದ ಒಟ್ಟು ತಂಡವೇ ಬಹಳ ಎನರ್ಜೆಟಿಕ್ ಅಥವಾ ಶಕ್ತಿಶಾಲಿಯಾಗಿರೋದು..
ಕನ್ನಡ ಚಿತ್ರರಂಗದಲ್ಲಿ ರಂಗಿತರಂಗ ಎಂದರೆ ತಿಳಿಯದವರು ಯಾರಿಲ್ಲ. ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಸಿನಿಪ್ರಿಯರನ್ನು ಕುತೂಹಲದ ಸರಪಳಿಯಲ್ಲಿ ಬಂಧಿಸಿದ ಅನೂಪ್ ಭಂಡಾರಿಯರು ಹಾಗೂ ನಟಿಸಿದ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿದ ಸಹೋದರ ನಿರೂಪ್ ಭಂಡಾರಿಯವರ ಕಾಂಬಿನೇಷನ್ ಈ ಚಿತ್ರಕ್ಕೂ ಸೇರಿರುವುದು ಪ್ಲಸ್ ಪಾಯಿಂಟ್.
ಚಿತ್ರದ ಹಿನ್ನೆಲೆ ಏನು?
ಇನ್ನು ಚಿತ್ರದ ಥೀಮ್‌ಗೆ ಬರೋಣ. ವಿಕ್ರಾಂತ್ ರೋಣ ಒಂದು ಅಡ್ವೆಂಚರಸ್, ಥ್ರಿಲ್ಲರ್, ಸಸ್ಪೆನ್ಸ್, ರೊಮ್ಯಾಂಟಿಕ್ ಇನ್ನೂ ಇನ್ನೂ ಚಿತ್ರಕ್ಕೆ ಬೇಕಾದ ಎಲ್ಲವೂ ಆಯಾಮಗಳನ್ನು ಹೊಂದಿರುವ ಚಿತ್ರ ಇದಾಗಿದೆ. ಚಿತ್ರದ ಸ್ಟೋರಿಲೈನ್ ಅನ್ನು ಇನ್ನೂ ಚಿತ್ರತಂಡ ಹೇಳಿಕಕೊಂಡಿಲ್ಲದಿದ್ದರೂ, ಮೇಲ್ನೋಟಕ್ಕೆ ಇದೊಂದು ಭಾರತೀಯ ಯುವಕನ ಸಾಹಸಗಾಥೆಯ ಚಿತ್ರ ಎಂದು ಕಂಡುಬರುತ್ತಿದೆ.
ಕಮಾಲ್ ಮಾಡಲಿದ್ದಾರೆ ಜಾಕ್ವೆಲಿನ್
ಈ ಚಿತ್ರದಲ್ಲಿ ವಿಶೇಷಗಳ ಮೇಲೆ ವಿಶೇಷಗಳನ್ನಿಟ್ಟಿದ್ದಾರೆ ಡೈರೆಕ್ಟರ್ ಅನೂಪ್. ಚಿತ್ರಕ್ಕೆ ನಾಯಕಿಯಾಗಿ ಹಾಗೂ ಕನ್ನಡ ಚಿತ್ರರಂಗಕ್ಕೇ ಮೊದಲ ಬಾರಿಗೆ ಕಾಲಿಡಲಿದ್ದಾರೆ ಶ್ರೀಲಂಕನ್ ಚೆಲುವೆ ಜಾಕ್ವೆಲಿನ್ ಫೆರ್ನಾಂಡಿಸ್. ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಹಾಗೂ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಜಾಕಿ ಖ್ಯಾತಿಯ ಜಾಕ್ವೆಲಿನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ, ಚಿತ್ರಕ್ಕೆ ಸ್ಟಾರ್ ಮೌಲ್ಯ ಹೆಚ್ಚಿಸುವ ಲೆಕ್ಕಾಚಾರ ಚಿತ್ರತಂಡದ್ದಿರಬಹುದು.
ಬುರ್ಜ್ ಖಲೀಫಾದಲ್ಲಿ ಟೈಟಲ್ ರಿಲೀಸ್!
ಇನ್ನು ಈ ಚಿತ್ರ ರಿಲೀಸ್‌ಗೂ ಮೊದಲೇ ಇಷ್ಟೊಂದು ದಾಖಲೆಗಳು ಹಾಗೂ ಹವಾ ಎಬ್ಬಿಸಲು ಕಾರಣಗಳು ಬಹಳಷ್ಟಿವೆ. ದುಬೈನ ಬುರ್ಜ್ ಖಲೀಫಾ ಹೇಳಿಕೇಳಿ ವಿಶ್ವದ ಅತ್ಯಂತ ಎತ್ತರದ ಗಗನಚುಂಬಿ ಕಟ್ಟಡ. ಆ ಕಟ್ಟಡದಲ್ಲಿ ಎಲ್ಇಡಿ ಜಾಹೀರಾತು ಪ್ರದರ್ಶನ ನೀಡಬೇಕೆಂದರೆ ಕೇವಲ ಹಣಬಲ ಸಾಕಾಗುವುದಿಲ್ಲ. ಆದರೆ, ಅಂತಹ ಬುರ್ಜ್ ಖಲೀಫಾದಲ್ಲಿ ತನ್ನ ಚಿತ್ರದ ಟೈಟಲ್ ಲಾಂಚ್ ಮಾಡಿದ ಕನ್ನಡದ ಮೊದಲ ಚಿತ್ರತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕೇವಲ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗವೇ ಹೆಮ್ಮೆಪಡಬೇಕಾದ ವಿಚಾರವಾಗಿದೆ. ವಾರದ ನಡುವಿನ ದಿನದಲ್ಲಿ ಟೈಟಲ್ ರಿಲೀಸ್ ಕಾರಣದಿಂದ ಬರೋಬ್ಬರಿ 70 ಲಕ್ಷ ರೂಪಾಯಿಗಳಷ್ಟು ಕೇವಲ ಟೈಟಲ್ ಲಾಂಚ್ ಗೇ ಖರ್ಚು ಮಾಡಿರುವ ಚಿತ್ರತಂಡದ ಡೆಡಿಕೇಷನ್ ಗೆ ಮೆಚ್ಚಲೇಬೇಕು.
ಬಹುಭಾಷೆಗಳಲ್ಲಿ ಹಾಗೂ 3-ಡಿ ಆಯಾಮದಲ್ಲಿ ಬಿಡುಗಡೆ!
ಇನ್ನು ಈ ಚಿತ್ರದ ಇನ್ನೊಂದು ವಿಶೇಷ ಎಂದರೆ, ಈ ಚಿತ್ರ ಕೇವಲ ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಭಾರತದ ಬಹುತೇಕ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದರೊಂದಿಗೆ, ಒಂದೇ ದಿನ ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರ ದಾಖಲೆಗಳ ಮೇಲೆ ದಾಖಲೆ ಬರೆಯುವ ನಿರೀಕ್ಷೆಯಿದೆ.
ಥಿಯೇಟರ್ ನಲ್ಲೇ ಬರಲಿದ್ದಾನೆ ವಿಕ್ರಾಂತ್
ಈಗಾಗಲೇ ಕೋವಿಡ್ ಹೆಚ್ಚಳವಾಗುತ್ತಿರುವುದರಿಂದ ಥಿಯೇಟರ್‌ಗಳಲ್ಲಿ ಚಲನಚಿತ್ರಗಳ ಸಂಪೂರ್ಣ ಪ್ರದರ್ಶನಕ್ಕೆ ಅಡಚಣೆ ಉಂಟಾಗುತ್ತಿದ್ದರೂ ಸಹ, ಚಿತ್ರತಂಡ ವಿಕ್ರಾಂತ್ ನನ್ನು ಥಿಯೇಟರ್‌ಗಳಲ್ಲೇ ತಲುಪಿಸುವ ಇರಾದೆ ಹೊಂದಿದೆ. ಈ ನಡುವೆ, ಈಗಾಗಲೇ ಚಿತ್ರವನ್ನು ಓಟಿಟಿ ಪ್ಲಾಟ್ ಫಾರಂ ನಲ್ಲಿ ಬಿಡುಗಡೆಗೊಳಿಸಿ ಎನ್ನುವ ಕೆಲವು ಸಿನಿಪ್ರಿಯರ ಕೂಗಿನಂತೆ, ಕೆಲವು ಓಟಿಟಿ ಪ್ಲಾಟ್ ಫಾರಂಗಳು 100 ಕೋಟಿ ಆಫರ್ ನೀಡಿದ್ದರೂ, ಅದನ್ನು ನಯವಾಗಿಯೇ ತಿರಸ್ಕರಿಸಿರುವ ಚಿತ್ರತಂಡಕ್ಕೆ ಶಹಬ್ಬಾಸ್ ಹೇಳಲೇಬೇಕು. ಚಿತ್ರತಂಡವೇ ಹೇಳುವಂತೆ, ಇಂತಹ ಒಂದು ಅದ್ಭುತ ಚಿತ್ರವನ್ನು ಥಿಯೇಟರ್ ನಲ್ಲಿಯೇ ಅರ್ಪಿಸುವುದು ಗುರಿ ಹಾಗೂ ಚಿತ್ರವು 3-ಡಿ ಯಲ್ಲೂ ಬಿಡುಗಡೆಯಾಗುತ್ತಿರುವುದರಿಂದ, ಥಿಯೇಟರ್‌ನಲ್ಲಿ ನೋಡುವ ಅನುಭವವೇ ಸಖತ್ ಆಗಿರುತ್ತದೆ ಎನ್ನುವುದು ನಿರ್ದೇಶಕರ ಅಂಬೋಣ.
ಸೂಪರ್ ಹಿಟ್ ತಾರಾಗಣ
ಈ ಚಿತ್ರತಂಡ ಬಹಳ ಬಲಿಷ್ಟವಾಗಿ ಕಾಣುತ್ತಿದೆ. ನಾಯಕ ವಿಕ್ರಾಂತ್ ರೋಣ ಪಾತ್ರದಲ್ಲಿ ಕಿಚ್ಚ ಸುದೀಪ ನಟಿಸಿದರೆ, ಸಹನಾಯಕರಾಗಿ ಸಂಜೀವ್ ಗಂಭೀರ ಪಾತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಬಣ್ಣ ಹಚ್ಚಲಿದ್ದಾರೆ. ನಾಯಕಿಯರಾಗಿ ಗದಂಗ್ ರಕ್ಕಮ್ಮ ಎನ್ನುವ ಪಾತ್ರದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಹಾಗೂ ಅಪರ್ಣಾ ಬಲ್ಲಾಳ್ ಎನ್ನುವ ಪಾತ್ರದಲ್ಲಿ ನೀತಾ ಅಶೋಕ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಪೋಷಕ ಪಾತ್ರದಲ್ಲಿ ರವಿಶಂಕರ ಗೌಡ ಇರಲಿದ್ದು, ಇನ್ನಿತರ ಖ್ಯಾತ ನಟರ ದಂಡೇ ಇರಲಿದೆ.
ಚಿತ್ರದ ಕಣಕಣದಲ್ಲೂ ಸ್ಪೆಷಾಲಿಟಿ!
ಇನ್ನು ಚಿತ್ರದ ನಿರ್ದೇಶನವನ್ನು ಸೂಪರ್ ಹಿಟ್ ನಿರ್ದೇಶಕರಾದ ಅನೂಪ್ ಭಂಡಾರಿಯವರು ನಿರ್ವಹಿಸಲಿದ್ದು, ಶಾಲಿನಿ ಮಂಜುನಾಥ್, ಜ್ಯಾಕ್ ಮಂಜು ಹಾಗೂ ಅಲಂಕಾರ್ ಪಾಂಡ್ಯನ್ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಝೀ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಇಂತಹ ದೊಡ್ಡ ಬಜೆಟ್ ಚಿತ್ರಕ್ಕೆ ಸೂಪರ್ ಹಿಟ್ ಮ್ಯೂಸಿಕ್ ಟಚ್ ಬೇಕಲ್ಲವೇ! ಆ ಜವಾಬ್ದಾರಿ ಹೊತ್ತಿದ್ದಾರೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್. ಚಿತ್ರದ ನೃತ್ಯ ನಿರ್ದೇಶನವನ್ನು ಜಾನಿ ಮಾಸ್ಟರ್ ನಿರ್ವಹಿಸಲಿದ್ದು, ಚಿತ್ರದಲ್ಲಿ 300 ಡ್ಯಾನ್ಸರ್ ಗಳ ತಂಡವನ್ನು ಬಳಸಿಕೊಂಡಿದ್ದಾರೆ ಅನ್ನೋದು ಹಾಗೂ ಚಿತ್ರದ ಒಂದು ಸಾಂಗ್ ಗಾಗಿ 5 ಕೋಟಿ ವ್ಯಯಿಸಿದ್ದಾರೆ ಅನ್ನೋದು ವಿಶೇಷ.
ಚಿತ್ರದ ಸಿನೇಮಾಟೋಗ್ರಫಿ ಅಥವಾ ಛಾಯಾಗ್ರಹಣವನ್ನು ವಿಲಿಯಮ್ ಡೇವಿಡ್ ನಿರ್ವಹಿಸಲಿದ್ದು, ವಿಕ್ರಾಂತ್ ರೋಣ 14 ಭಾಷೆಗಳಲ್ಲಿ, ಬರೋಬ್ಬರಿ 55 ದೇಶಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.
ಚಿತ್ರ ಯಾವಾಗ ಬಿಡುಗಡೆಗೊಳ್ಳಲಿದೆ?
ಸಿನಿಪ್ರಿಯರು ಚಿತ್ರದ ರಿಲೀಸ್ ಗೆ ಬಕಪಕ್ಷಿಯಂತೆ ಕಾಯುತ್ತಿರುವಂತೆಯೇ ಫೆಬ್ರವರಿ 24 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಈ ಕನ್ನಡದ ಹೈ ಬಜೆಟ್ ಚಿತ್ರ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಹೆಸರು ತರಲಿ ಹಾಗೂ ಚಿತ್ರ ಅಮೋಘ ಯಶಸ್ಸು ಗಳಿಸಲಿ ಎನ್ನುವುದೇ ನಮ್ಮ ಆಶಯ.