ಎದುರಾಳಿಗಳಾದ ವಸಿಷ್ಠ ಸಿಂಹ ಹಾಗೂ ಕಿಶೋರ್…!!
ಟಗರು ಚಿಟ್ಟೆ ವಸಿಷ್ಠ ಸಿಂಹ ಹಾಗೂ ಡಿಫರೆಂಟ್ ಪಾತ್ರದ ಮೂಲಕ ಖ್ಯಾತಿ ಗಳಿಸಿದ ಕಿಶೋರ್ ಇಬ್ಬರು ಎದುರಾಳಿಗಳಾಗಿದ್ದಾರೆ. ಇಲ್ಲಿ ಇಬ್ಬರು ಖಡಕ್ ಪೋಲಿಸ್ ಅಧಿಕಾರಿಗಳು. ಈ ಇಬ್ಬರು ಅಧಿಕಾರಿಗಳ ನಡುವೆ ಶೀತಲ ಸಮರ ನಡೆಯುತ್ತದೆ. ನೈಜ ಘಟನೆಯನ್ನು ಒಳಗೊಂಡ ಈ ಚಿತ್ರದಲ್ಲಿ ಎರಡು ಪಾತ್ರಗಳಿಗೂ ತೂಕವಿರಲಿದೆ.
ಇನ್ನು ಹೆಸರಿಡದ ಈ ಚಿತ್ರಕ್ಕೆ ಹಲವು ಸಿನಿಮಾಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ವಚನ್ ಈ ಚಿತ್ರದ ಮೂಲಕ ಸ್ವಾತಂತ್ರ್ಯ ನಿರ್ದೇಶಕರಾಗುತ್ತಿದ್ದಾರೆ. ಸಿನಿಮಾ ಮುಹೂರ್ತದ ಸಮಯದಲ್ಲಿ ಮಾತನಾಡಿದ ನಿರ್ದೇಶಕ ವಚನ್ ” ಪವನ್ ಕುಮಾರ್ ಅವರೊಂದಿಗೆ ಲೂಸಿಯಾ ಸಿನಿಮಾದಲ್ಲಿ ಕೆಲಸ ಮಾಡುವಾಗ ಛಾಯಾಗ್ರಾಹಕ ನವೀನ್ ಕುಮಾರ್ ಜೊತೆ ಕಥೆಯ ಬಗ್ಗೆ ಚರ್ಚೆ ಮಾಡಿದ್ದೆ. ಅವರಿಂದ ವಸಿಷ್ಠ ರವರನ್ನು ಭೇಟಿಯಾದೆ. ವಸಿಷ್ಠರವರು ಒಪ್ಪಿದ ಮೇಲೆ ಸಿನಿಮಾಕ್ಕೆ ಹಣ ಹೂಡಲು ನಿರ್ಮಾಪಕ ಜನಾರ್ಧನ್ ಸಿಕ್ಕಿದರು. ಇದೀಗ ಸಿನಿಮಾ ಸೆಟ್ಟೇರಿದೆ” ಎಂದರು. ನಂತರ ಮಾತನಾಡಿದ ವಸಿಷ್ಠ “ಇಬ್ಬರು ಪೋಲಿಸ್ ಅಧಿಕಾರಿಗಳ ನಡುವಿನ ಶೀತಲ ಯುದ್ಧ ಕುತೂಹಲ ಮೂಡಿಸುತ್ತದೆ.
ಕಥೆ ಕೇಳಿದಾಗಲೇ ನನಗೆ ತುಂಬಾ ಇಷ್ಟವಾಯಿತು ಅದಕ್ಕೆ ಒಪ್ಪಿಕೊಂಡೆ. ಅನೂಪ್ ಸೀಳಿನ್ ರವರ ಸಂಗೀತದಲ್ಲಿ ಈ ಮೊದಲು ‘ದಯವಿಟ್ಟು ಗಮನಿಸಿ’ ಸಿನಿಮಾ ಮಾಡಿದ್ದೆ. ಈಗ ಅವರ ಜೊತೆ ಮತ್ತೊಂದು ಅವಕಾಶ ಸಿಕ್ಕಿದೆ” ಎಂದರು. ಈ ಸಿನಿಮಾಕ್ಕಾಗಿ ಒಂದಷ್ಟು ಪೋಲಿಸ್ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿರುವ ನಿರ್ದೇಶಕ ವಚನ್ ಸದ್ಯ ನಾಯಕಿಯ ಹುಡುಕಾಟದಲ್ಲಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬೆಂಗಳೂರು, ತುಮಕೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಹಾಗೂ ವಿದೇಶದಲ್ಲಿ ನಡೆಯಲಿದೆಯಂತೆ. ಚಿತ್ರದಲ್ಲಿ ಧರ್ಮಣ್ಣ ಕಡೂರು, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿ ಖ್ಯಾತಿಯ ಸೂರ್ಯ ಮತ್ತು ಮುತ್ತುರಾಜ್ ತಾರಾಗಣದಲ್ಲಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.