ಓ ಮೈ ಲವ್‌ಗೆ ಉಪೇಂದ್ರ ಸಾಥ್
ಜಿಸಿಬಿ ಪ್ರೊಡಕ್ಷನ್ ಲಾಂಛನದಲ್ಲಿ ಸಿದ್ದಗೊಂಡಿರುವ ಹೊಸ ಥರದ ನಿರೂಪಣೆ ಒಳಗೊಂಡ ’ಓ ಮೈ ಲವ್’ ಚಿತ್ರದ ’ಏನಾಯ್ತೋ ನಾ ಕಾಣೆ’ ಲಿರಿಕಲ್ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಸ್ಮೈಲ್‌ಶ್ರೀನು ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿ ಸಂಗೀತ ನಿರ್ದೇಶಕರು ಹಾಡಿನ ಟ್ಯೂನ್ ಕಳುಹಿಸಿಕೊಟ್ಟರು. ಅದನ್ನು ಕೇಳುತ್ತಿದ್ದ ಹಾಗೆ ರೋಮಾಂಚನವಾಯಿತು. ಪಲ್ಲವಿ ಚೆನ್ನಾಗಿದೆ. ಚರಣ ಬದಲಾವಣೆ ಮಾಡೋಣವೆಂದು ಹೇಳಲಾಯಿತು.
ನಂತರ ಎರಡು ದಿವಸದಲ್ಲೆ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಚರಣ ಕೊಟ್ಟರು. ಅನುರಾಧಭಟ್-ನಿಚರಾಜನ್ ಧ್ವನಿಯಾಗಿದ್ದಾರೆ. ಗೀತೆಗೆ ಎಲ್ಲಾ ಕಡೆಯಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಹಾಡಿನ ಪ್ರೋಮೋ ನೋಡಿ ಎಲ್ಲರು ಖುಷಿಯಾಗಿದ್ದಾರೆ. ಪೂರ್ತಿ ಹಾಡನ್ನು ಬಿಡುಗಡೆ ಮಾಡಿಲ್ಲ. ಈಗ ನೋಡಿದ್ದು ಶೇಕಡ ಐದರಷ್ಟು ಮಾತ್ರ. ಬಾಕಿ ಶೇಕಡ 95ರಷ್ಟು ಚಿತ್ರಮಂದಿರದಲ್ಲಿ ನೋಡಿದರೆ ಅದರ ಮಜಾನೇ ಬೇರೆ ಇರುತ್ತದೆ. ಹಾಡನ್ನು ಬೂಸ್ಟ್ ಮಾಡಿಲ್ಲ. ನಿಜವಾಗಿ ನೋಡಲೆಂದು ಬಿಡಲಾಗಿದೆ. ಗೀತೆಯನ್ನು ಅನಾವರಣಗೊಳಿಸಿದ್ದಕ್ಕೆ ವಿಶೇಷವಾಗಿ ಉಪ್ಪಿ ಸರ್‌ಗೆ ಥ್ಯಾಂಕ್ಸ್ ಹೇಳಬೇಕು ಎಂದರು.
ಚಿಕ್ಕಂದಿನಿಂದಲೂ ಚಿತ್ರ ಮಾಡಬೇಕೆಂಬ ಬಯಕೆ ಇತ್ತು. ಅದು ಈಗ ಈಡೇರಿದೆ ಎಂದು ಕಥೆ ಬರೆದು ಬಂಡವಾಳ ಹೂಡಿರುವ ಜಿ.ರಾಮಾಂಜಿನಿ ಹೇಳಿದರು. ಉಪ್ಪಿ ಸರ್ ಅಭಿಮಾನಿಯಾಗಿ ಅವರಿಂದಲೇ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ನಾವು ಕೇಳಿದ ತಕ್ಷಣ ’ಕಬ್ಜಾ’ ಶೂಟಿಂಗ್‌ದಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ಹಾಡನ್ನು ವೀಕ್ಷಿಸಿ ಶುಭ ಹಾರೈಸಿದರು ಎಂದು ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿಕೊಂಡರು.
ನಾಯಕಿ ಕೀರ್ತಿಕಲ್ಕರೆ, ಮತ್ತೋಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರುವ ಕಿರುತೆರೆ ನಟ ಪೃಥ್ವಿರಾಜ್, ನಿರ್ಮಾಪಕರ ಗೆಳಯರುಗಳಾದ ರಾಘವೇಂದ್ರ, ರಾಮಕೃಷ್ಣ ಉಪಸ್ತಿತರಿದ್ದು ಕಡಿಮೆ ಸಮಯ ತೆಗೆದುಕೊಂಡರು. ತಾರಗಣದಲ್ಲಿ ದೇವಗಿಲ್,ಎಸ್.ನಾರಾಯಣ್, ಸಾಧುಕೋಕಿಲ, ಪವಿತ್ರಲೋಕೇಶ್, ಪೃಥ್ವಿ, ಲಿಂಗರಾಜ್, ಸುವೇದ, ಅಕ್ಷತ, ಟೆನ್ನಿಸ್‌ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಚರಣ್‌ಅರ್ಜುನ್, ಛಾಯಾಗ್ರಹಣ ಹಾಲೇಶ್.ಎಸ್, ಸಂಕಲನ ಡಿ.ಮಲ್ಲಿ, ನೃತ್ಯ ಮುರಳಿ ಅವರದಾಗಿದೆ. ಬೆಂಗಳೂರು, ಓರ್ಚ, ಭೂಪಾಲ್, ಕಜರಾಬ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.