ರಂಗಭೂಮಿ ಕಲಾವಿದರ ಚೂರಿಕಟ್ಟೆ
ಇತ್ತೀಚೆಗಷ್ಟೇ ಚೌಕಾಬಾರಾ ಎಂಬ ಕಿರುಚಿತ್ರವೊಂದರ ಮೂಲಕ ಸುದ್ದಿಯಾಗಿದ್ದ ರಾಘು ಶಿವಮೊಗ್ಗ ಈಗ ಕಮರ್ಷಿಯಲ್ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾರೆ. ಟಿಂಬರ್ ಮಾಫಿಯಾ ಸುತ್ತ ನಡೆಯುವಂಥ ಕುತೂಹಲಕರ ಕಥಾಹಂದರ ಹೊಂದಿರುವ ‘ಚೂರಿಕಟ್ಟೆ’ ಎಂಬ ಈ ಚಿತ್ರಕ್ಕೆ ರಾಘು ಶಿವಮೊಗ್ಗ ಆಕ್ಷನ್-ಕಟ್ ಹೇಳಿದ್ದಾರೆ. ಬಹುತೇಕ ರಂಗಭೂಮಿ ಕಲಾವಿದರು ಹಾಗೂ ತಂತ್ರಜ್ಞರೇ ಸೇರಿ ಕೆಲಸ ಮಾಡಿರುವ ವಿನೂತನ ಕಥಾನಕ ಹೊಂದಿದ ಈ ಚಿತ್ರ ಇದೇ 26ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ದವಾಗಿದೆ.
ಚಿತ್ರದ ಬಿಡುಗಡೆಯ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿಶೇಷವಾಗಿ ಈ ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರೂ ಹಾಜರಿದ್ದು ಮಾತನಾಡಿದರು. ಮೊದಲಿಗೆ ನಾಯಕನಟ ಪ್ರವೀಣ್ ತೇಜ್ ಮಾತನಾಡಿ ಪಾತ್ರಕ್ಕೆ ತಕ್ಕಂತೆ ನಾನು ಚಿತ್ರದಲ್ಲಿ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ಪಾತ್ರಕ್ಕಾಗಿ ದೇಹವನ್ನು ದಂಡಿಸಬೇಕಾದ ಕಾರಣ ವ್ಯಾಯಾಮ ಮಾಡಿ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕ್ಯಾಮಾರ ಮುಂದೆ ನಿಲ್ಲಬೇಕಾಯಿತು. ಟಿಂಬರ್ ಮಾಫಿಯಾ ಮತ್ತು ಪೋಲೀಸ್ ವ್ಯವಸ್ಥೆ ಎರಡನ್ನು ಬೆರೆಸಿ ಮಾಡಿದಂಥ ಕತೆಯಿದು ಎಂದು ಹೇಳಿದರು. ಸ್ವಾರ್ಥಕ್ಕಾಗಿ ಬದುಕುವ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ನಟ ಮಂಜುನಾಥ ಹೆಗಡೆ ಹೇಳಿದರು.
ಚಿತ್ರದಲ್ಲಿ ಟಿಂಬರ್ ಮಾಫಿಯಾ ಡಾನ್ ಆಗಿ ಕಾಣಿಸಿಕೊಂಡಿರುವ ನಟ ಶರತ್ ಲೋಹಿತಾಶ್ವ ನಿರ್ದೇಶಕ ರಾಘು ಅವರ ಕೆಲಸವನ್ನು ಮೆಚ್ಚಿ ಮಾತನಾಡುತ್ತ ರಾಘು ಒಳ್ಳೇ ನಟ, ಆದರೆ ನಿರ್ದೇಶಕನಾಗಿ ಬೆಳೆಯುತ್ತಿದ್ದಾನೆ. ಆತನಲ್ಲಿ ಒಳ್ಳೇ ಪ್ರತಿಭೆಯಿದೆ, ಉಜ್ವಲ ಭವಿಷ್ಯ ಇದೆ ಎಂದು ಹೇಳಿದರು. ಮಲೆನಾಡು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ಅವಿರತವಾಗಿ ನಡೆಯುತ್ತಿರುವ ಅರಣ್ಯ ಸಂಪತ್ತಿನ ಕಳ್ಳಸಾಗಣಿಕೆ ಈ ಚಿತ್ರದ ಕಥಾನಕವಾಗಿದೆ.
ವಿಶೇಷವಾಗಿ ಟಿಂಬರ್ ಮಾಫಿಯಾ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ. ಕಳ್ಳಸಾಗಣಿಕೆಯಿಂದ ನಮ್ಮ ರಾಜ್ಯದ ಅರಣ್ಯಗಳು ವಿನಾಶದ ಅಂಚಿನತ್ತ ಸಾಗುತ್ತಿರುವಾಗ ಇಂಥ ಚಿತ್ರಗಳ ಮೂಲಕ ಜನರನ್ನು ಜಾಗೃತಗೊಳಿಸುವ ಪ್ರಯತ್ನವನ್ನು ನಿರ್ದೇಶಕ ರಾಘು ಶಿವಮೊಗ್ಗ ಅವರು ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ರಾಮಾ ರಾಮಾ ರೇ ಖ್ಯಾತಿಯ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಈ ಚಿತ್ರದ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಾರ್ನಿಂಗ್ ಸ್ಟಾರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಸ್.ನಯಾಜ್ ಹಾಗೂ ಎಂ.ತುಳಸಿರಾಮುಡು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿರುವ ಪ್ರೇರಣಾ ಮಾತನಾಡುತ್ತ ಈ ಚಿತ್ರದಲ್ಲಿ ನನಗೆ ಗುರುತಿಸಿಕೊಳ್ಳುವಂಥ ಪಾತ್ರವಿದೆ. ಚಿತ್ರ ಬಿಡುಗಡೆಯಾದ ನಂತರ ನಾವೆಲ್ಲ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತೇವೆ ಎಂಬ ಭರವಸೆಯ ಮಾತುಗಳನ್ನಾಡಿದರು. ತಮ್ಮ ನಿರ್ದೇಶನದ ಮೊದಲ ಚಿತ್ರದ ಬಗ್ಗೆ ಮಾತನಾಡಿದ ರಾಘು ಶಿವಮೊಗ್ಗ ಚಿತ್ರ ಇದೇ 26ರಂದು ಬಿಡುಗಡೆಯಾಗುತ್ತಿದೆ. ಇಡೀ ಚಿತ್ರವನ್ನು ಕಾಡಿನಲ್ಲಿ ಅದೂ ರಾತ್ರಿಯೇ ಚಿತ್ರೀಕರಿಸಿರುವುದು ವಿಶೇಷ, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಚಿತ್ರದ ಕುರಿತು ಒಂದಷ್ಟು ಮಾಹಿತಿಗಳನ್ನು ನೀಡಿದರು. ನಿರ್ಮಾಪಕರ ಪೈಕಿ ಎಸ್.ನಯಾಜುದ್ದೀನ್ ಹಾಜರಿದ್ದರು.