ವ್ಯೋಮಕಾಯ ಸಿದ್ದ ಶ್ರೀ “ಅಲ್ಲಮಪ್ರಭು” ಚಿತ್ರದ ಟ್ರೇಲರ್ ಬಿಡುಗಡೆ.
ಹನ್ನೆರಡನೆಯ ಶತಮಾನದ ಮಹಾಶರಣ ಶ್ರೀ ಅಲ್ಲಮಪ್ರಭು ಅವರ ಜೀವನಾಧಾರಿತ ವ್ಯೋಮಕಾಯ ಸಿದ್ದ
“ಶ್ರೀ ಅಲ್ಲಮಪ್ರಭು” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್, ನಟ ನೆನಪರಲಿ ಪ್ರೇಮ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನನಗೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನ ಕ್ಷೇತ್ರವೇ ಬೇರೆ. ಆದರೂ ನನ್ನನ್ನು ಏಕೆ ಕರೆದರೂ ಎಂದು ಯೋಚಿಸುತ್ತಿದೆ? ಅವರು ನನ್ನ ಮೇಲಿಟ್ಟಿರುವ ಪ್ರೀತಿ ಅಪಾರ. ಹಾಗಾಗಿ ಬಂದಿದ್ದೀನಿ. ಕಮರ್ಷಿಯಲ್ ಚಿತ್ರಗಳ ಪೈಪೋಟಿ ಇರುವ ಈ ಸಮಯದಲ್ಲಿ ಇಂತಹ ಕಥೆ ಆಯ್ದುಕೊಂಡಿರುವ ನಿರ್ಮಾಪಕರಿಗೆ ಮೊದಲು ಧನ್ಯವಾದ ತಿಳಿಸಬೇಕು. ವೀರಭೂಮಿ, ಧರ್ಮಭೂಮಿ, ಪುಣ್ಯಭೂಮಿ ಅಂತ ಬೇರೆ ಯಾವ ದೇಶಕ್ಕೂ ಹೆಸರಿಲ್ಲ. ಆ ಎಲ್ಲಾ ಹೆಸರುಗಳಿರುವುದು ನಮ್ಮ ಭಾರತಕ್ಕೆ ಮಾತ್ರ. ಭಾರತಕ್ಕೆ ಈ ರೀತಿಯ ಹೆಸರು ಬರಲು ಸಾಕಷ್ಟು ಜನ ಸಾಧು-ಸಂತರು ಇಲ್ಲಿ ಅವತರಿಸುವುದೇ ಕಾರಣ. ಅಂತಹ ಮಹಾಪುರುಷರಾದ ಶ್ರೀಅಲ್ಲಮಪ್ರಭುಗಳ ಕುರಿತಾದ ಈ ಚಿತ್ರಕ್ಕೆ ಶುಭವಾಗಲಿ ಎಂದು ಪ್ರಮೋದ್ ಮುತಾಲಿಕ್ ಹಾರೈಸಿದರು.
ನಮ್ಮದು ಪುಣ್ಯಭೂಮಿ. ಹಿಂದೆ ಎಷ್ಟೋ ಜನ ನಮ್ಮ ದೇಶದ ಸಂಪತ್ತು ಲೂಟಿ ಹೊಡೆದರೂ, ಇನ್ನೂ ನಮ್ಮಲ್ಲಿ ಸಂಪತ್ತು ಇದೆ ಅಂದರೆ ಅದಕ್ಕೆ ಈ ಸಾಧು-ಸಂತರ ಆಶೀರ್ವಾದವೇ ಕಾರಣ. ಮಹಾಶರಣ ಅಲ್ಲಮಪ್ರಭುಗಳ ಕುರಿತಾದ ಈ ಚಿತ್ರಕ್ಕೆ ಒಳಿತಾಗಲಿ ಎಂದರು ನಟ ನೆನಪಿರಲಿ ಪ್ರೇಮ್.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಅವರು ಚಿತ್ರಕ್ಕೆ ಶುಭ ಕೋರಿದರು.
ಅಲ್ಲಮಪ್ರಭುಗಳು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಬಳಿಗಾವಿಯಲ್ಲಿ. ಆದರೆ ಅವರ ಕಾರ್ಯಕ್ಷೇತ್ರ ಬಾಗಲಕೋಟೆ ಬಳಿಯ ತೇರಾದಾಳ. ಚಾಮರಸ ಕವಿ ಬರೆದಿರುವ ಪ್ರಭುಲಿಂಗ ಲೀಲೆ ಆದರಿಸಿ ಈ ಚಿತ್ರ ಮಾಡಿದ್ದೀವಿ.
ಹನ್ನೆರಡನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಮಾಡಿದ ಸಾಧನೆಗಳು ಅನಂತ. ಅನುಭವ ಮಂಟಪದ ಮೊದಲ ಆಧ್ಯಕ್ಷರು ಅವರು. ಅಂತಹ ಮಹಾಶರಣರ ಬಗ್ಗೆ ಸಿನಿಮಾ ಮಾಡಿರುವುದು ನಮ್ಮ ಪುಣ್ಯ ಎಂದು ತಿಳಿಸಿದ ನಿರ್ಮಾಪಕ ಮಾಧವಾನಂದ ಅವರು, ಮಹಾವೀರ ಪ್ರಭು ಅವರು ನಿರ್ಮಾಣಕ್ಕೆ ನನಗೆ ಜೊತೆಯಾಗಿದ್ದಾರೆ ಎಂದರು.
ನಾನು ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಹನ್ನೆರಡನೆಯ ಶತಮಾನದ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ತೆರೆಗೆ ತರುವುದು ಅಷ್ಟು ಸುಲಭವಲ್ಲ. ಆ ಪ್ರಯತ್ನ ಮಾಡಿದ್ದೇವೆ. ತೇರದಾಳ, ಬನವಾಸಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶರಣ್ ಗದ್ವಾಲ್.
ಸಂಕಲನಕಾರ ಕೆಂಪರಾಜ್, ಛಾಯಾಗ್ರಾಹಕ ಗಿರಿ ಅವರು ಈ ಚಿತ್ರದ ಕುರಿತು ಮಾತನಾಡಿದರು.
ಸಚಿನ್ ಸುವರ್ಣ, ನೀನಾಸಂ ಅಶ್ವಥ್, ರಮೇಶ್ ಪಂಡಿತ್, ಶೃಂಗೇರಿ ರಾಮಣ್ಣ, ಗಣೇಶ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.