ಮುಂಬಯಿ ಮತ್ತು ಕೋಲಾರ ಭೂಗತ ಲೋಕದ ಹುಡುಗನ ಕಥೆ
ಬಡತನಕ್ಕಾಗಿ ತಾಯಿ ಮಾತಿಗಾಗಿ ಹಣ ಮಾಡಲು ಹೊರಟು ನಿಂತಾಗ, ಮುಂಬಯಿ ಭೂಗತ ಲೋಕಕ್ಕೆ ಸೇರುವ ಹುಡುಗನ ಕಥೆ ‘ಕೆಜಿಎಫ್’.
ಭಾರೀ ಸುದ್ದಿ ಮಾಡುತ್ತಿರುವ ಅತೀ ಹೆಚ್ಚು ಮೊತ್ತದ ‘ಕೆಜಿಎಫ್’ ಚಿತ್ರದ ಇನ್ನೊಂದು ಟ್ರೇಲರ್ ಹೊರಬಂದಿದೆ. ಮೊದಲ ಟ್ರೇಲರ್ ಎಲ್ಲರಿಂದ ಮೆಚ್ಚುಗೆಯನ್ನು ಪಡೆದು ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದೆ.
ಯಶ್ ನಟನೆಯ 5 ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್’ ಚಿತ್ರದ ಮೊದಲ ಹಾಡು ಕೂಡಾ ಉತ್ತಮವಾಗಿ ಮೂಡಿಬಂದಿದೆ. ಕುಂದಾಪುರ ಮೂಲದ ರವಿ ಬಸ್ರೂರು ಸಂಗೀತ ನಿರ್ದೇಶಕರಾಗಿ ಈ ಚಿತ್ರಕ್ಕೆ ತುಂಬಾ ಉತ್ತಮ ಸಂಗೀತ ನೀಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಈಗಾಗಲೇ ಟ್ರೇಲರ್ ನಲ್ಲಿ ಉತ್ತಮವಾಗಿ ಎದ್ದು ಕಾಣುತ್ತಿದೆ. ವಿಜಯ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರತಂಡ ಈಗ ಚಿತ್ರದ ಇನ್ನೊಂದು ಟ್ರೇಲರ್ ನ್ನು ಬಿಡುಗಡೆ ಮಾಡಿದೆ. ಮೊದಲಿನಿಂದಲೂ ಖಡಕ್ ಡೈಲಾಗ್ ಮೂಲಕವೇ ‘ಕೆಜಿಎಫ್’ ಸದ್ದು ಮಾಡುತ್ತಿದೆ. ಸತತ ಎರಡೂವರೆ ವರ್ಷಗಳಿಂದ ಸಿದ್ಧಗೊಂಡಿರುವ ‘ಕೆಜಿಎಫ್’ ಒಟ್ಟು ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಮೊದಲ ಭಾಗ ಇದೇ ಡಿಸೆಂಬರ್ 21ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಒಂದು ರೀತಿಯ ವಿಭಿನ್ನ ಕುತೂಹಲವನ್ನು ಚಿತ್ರ ಸೃಷ್ಟಿಸಿದೆ. ತೆಲುಗಿನ ‘ಬಾಹುಬಲಿ’ ಸಿನಿಮಾದ ಬಳಿಕ ಇಷ್ಟೊಂದು ಕ್ರೇಜ್ ಹುಟ್ಟುಹಾಕಿರುವ ಸಿನಿಮಾ ಕನ್ನಡದ ‘ಕೆಜಿಎಫ್’. ಮಂಗಳವಾರ ಸಂಜೆ ಬಿಡುಗಡೆಯಾಗಿದ್ದ, ‘ಸಲಾಮ್ ರಾಕಿ ಭಾಯ್’ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಒಬ್ಬ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿಯಾದ ಕಥೆಯನ್ನು ಹೇಳಿತ್ತು. 70ರ ದಶಕದಲ್ಲಿ ಮುಂಬೈ ಅಧಿಪತಿಯಾಗುವ ರಾಕಿಯ ತಾಕತ್ತನ್ನು ‘ಸಲಾಮ್ ರಾಕಿ ಭಾಯ್’ ಹಾಡಿನ ಪದಗಳು ವರ್ಣನೆ ಮಾಡಿದ್ದವು. ಇದೀಗ ಹಿಂದಿಯ ಮತ್ತೊಂದು ಟ್ರೇಲರ್ ರಿವೀಲ್ ಆಗಿದ್ದು, ಚಿತ್ರದ ಮತ್ತೊಂದು ಶೇಡ್ ಇದರಲ್ಲಿ ತೋರಿಸಲಾಗಿದೆ.
ಕೋಲಾರದ ‘ಕೆಜಿಎಫ್’ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.