ಚಿತ್ರೀಕರಣ ಮುಗಿಸಿದ ಎಸ್. ನಾರಾಯಣ್ ನಿರ್ದೇಶನದ “5ಡಿ”…
ಕಲಾ ಸಾಮ್ರಾಟ್ ಎಸ್.ನಾರಾಯಣ್ ರವರ ಸಾರಥ್ಯದ 5ಡಿ ಚಿತ್ರದಲ್ಲಿ ಆದಿತ್ಯ ನಾಯಕನಟನಾಗಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಅದಿತಿ ಪ್ರಭುದೇವ್ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಕೆಲವು ವರ್ಷಗಳ ನಂತರ ಎಸ್.ನಾರಾಯಣ್ 5ಡಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈ ಚಿತ್ರ ಅವರ 50 ನೇ ಚಿತ್ರವೂ ಆಗಲಿದೆ.
ಲಾಕ್ ಡೌನ್ ನ ಮೊದಲೇ ಚಿತ್ರೀಕರಣ ಪ್ರಾರಂಭಿಸಿದ ಚಿತ್ರತಂಡ ಈಗ ಬಾಕಿಯಿರುವ ಚಿತ್ರೀಕರಣವನ್ನು ಮುಗಿಸಿ, ಕುಂಬಳಕಾಯಿಯನ್ನು ಹೊಡೆದಿದ್ದಾರೆ. ಎಸ್. ನಾರಾಯಣ್ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ವನ್ನು ನೀಡಿದ್ದಾರೆ. 5ಡಿ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು, ಎಸ್.ನಾರಾಯಣ್ ರವರ ಮಗ ಪಂಕಜ್ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿ 5 ಭಾಷೆಗಳಲ್ಲಿ ತಯಾರಾಗುತ್ತಿದೆ. ಈ ಚಿತ್ರವನ್ನು 1 to 100 ಡ್ರೀಮ್ ಮೂವೀಸ್ ಮೂಲಕ ಸ್ವಾತಿ ಕುಮಾರ್ ಅವರು ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ನಾರಾಯಣ್‌ರವರು ‘ಮೊದಲು ಈ ಕಥೆ ನನ್ನ ಕೈಗೆ ಬಂದಾಗ ನಾನು ಮೊದಲು ಮಾಡಿದು ಕಾಮಿಡಿ, ಸೆಂಟಿಮೆಂಟ್ ಸಿನಿಮಾಗಳು ಇಂತಹ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾ ಮಾಡಿಲ್ಲ ಅದರಿಂದ ಯೋಚನೆ ಮಾಡ್ತಾಯಿದ್ದೆ. ನನ್ನ ಮಗ ಪಂಕಜ್ ಕಥೆ ಹೊಸತನದಿಂದ ಕೂಡಿದೆ ಪ್ರಯತ್ನ ಮಾಡಿ ಎಂದು ಹೇಳಿ ಇಡೀ ಚಿತ್ರಕ್ಕೆ ಬ್ಯಾಕ್ ಬೋನ್ ಆಗಿ ನಿಂತು ಕೆಲಸ ಮಾಡಿದ್ದಾನೆ. ಎಲ್ಲರೂ ಅವರವರ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ನಾಯಕ ಆದಿತ್ಯ ತಂದೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನನ್ನ ಗುರುಗಳು, ಬಹಳ ವರ್ಷಗಳಿಂದ ಅವರ ಕುಟುಂಬವನ್ನು ಹತ್ತಿರದಿಂದ ಬಲ್ಲವನು. ಆದಿತ್ಯ ಪ್ರತಿಭಾವಂತ ಕಲಾವಿದ ಈ ಕಥೆಗೆ ಸೂಕ್ತವಾದ ನಾಯಕ ಅದ್ಭುತವಾಗಿ ಅಭಿನಯಿಸಿದ್ದಾನೆ. ನಾಯಕಿ ಅದಿತಿ ಸ್ವಲ್ಪವೂ ಜಂಭವಿಲ್ಲದ ಸಿಂಪಲ್ ಹುಡುಗಿ. ನಿರ್ಮಾಪಕರು ಕೂಡ ಮೊದಲು ಕಡಿಮೆ ಬಜೆಟ್ ಸಿನಿಮಾ ಹೇಳಿ ಆಮೇಲೆ ಅದು ದೊಡ್ಡದಾಗುತ್ತ ಹೋಯಿತು. ಉತ್ತಮ ಚಿತ್ರಕ್ಕೆ ಕೈ ಹಾಕಿದ್ದಾರೆ ನಿರ್ಮಾಪಕರು’ ಎಂದರು.
ನಂತರ ನಾಯಕಿ ಅದಿತಿ ಪ್ರಭುದೇವ್ ಮಾತನಾಡಿ ‘ಎಸ್.ನಾರಾಯಣ್ ಸರ್ ಜೊತೆ ಕೆಲಸ ಮಾಡಿದ್ದು, ನಮಗೆ ಬಹಳ ಖುಷಿಯಿದೆ’ ಎಂದರು. ನಾಯಕ ಆದಿತ್ಯರವರು ಇದು ನನ್ನ ಇಪ್ಪತ್ತೈದನೆಯ ಸಿನಿಮಾ. ಒಂದು ಅಚ್ಚುಕಟ್ಟಾದ ಸಿನಿಮಾ ತಂಡದಲ್ಲಿ ಕೆಲಸ ಮಾಡಿದ ತೃಪ್ತಿ ಸಿಕ್ಕಿದೆ. ನನ್ನ ವೃತ್ತಿ ಜೀವನದಲ್ಲಿ 5ಡಿ ಒಂದೊಳ್ಳೆ ಚಿತ್ರವಾಗಲಿದೆ.
ಎಸ್ .ನಾರಾಯಣ್ ರವರ ಜೊತೆ ಕೆಲಸ ಮಾಡುವುದೇ ನನ್ನ ಸೌಭಾಗ್ಯ ಎಂದರು ನಟ ಆದಿತ್ಯ. ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿದ್ದು, ಚಿತ್ರವನ್ನು ತೆರೆಗೆ ತರಲು ತಯಾರಿ ನಡೆಸುತ್ತಿದೆ. ಉಳಿದಂತೆ ತಾರಾಗಣದಲ್ಲಿ ಜ್ಯೋತಿ ರೈ, ರವಿಕುಮಾರ್, ರಾಜೇಶ್ ರಾವ್, ರತನ್ ರಾಮ್, ಪ್ರಸನ್ನ, ಯೋಗೇಶ್, ಲಾಯರ್ ಶಂಕ್ರಪ್ಪ, ಆಕಾಶ್ ಹಾಗೂ ಮುಂತಾದವರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಕುಮಾರ್ ಛಾಯಾಗ್ರಹಣ ಮಾಡಿದ್ದು, ಮಾಲೂರು ಶ್ರೀನಿವಾಸ್ ಕೋರಿಯೋಗ್ರಾಫಿ ಮಾಡಿದ್ದಾರೆ. ರವಿಯವರ ಕಥೆ ಈ ಚಿತ್ರಕ್ಕೆ ಇದೆ.