ಚಲನಚಿತ್ರ ಕಲಾವಿದರ ಸಂಘದ ನೂತನ ಕಟ್ಟಡ ಉದ್ಘಾಟಣೆ
ಸ್ವಂತ ಕಟ್ಟಡ ಹೊಂದುವ ಮೂಲಕ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಅಧಿಕೃತವಾಗಿ ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಎಲ್ಲರಿಗೂ ಶುಭವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ. ನಗರದ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಲಾವಿದರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರ ಪರಿಶ್ರಮದಿಂದ ಕಟ್ಟಡ ನಿರ್ಮಾಣವಾಗಿದೆ. ಉತ್ತಮ ಬೆಳವಣಿಗೆ ಹೊಂದಲಿ ಎಂದರು.
ನಂತರ ಮಾತನಾಡಿದ ನಟ ಹಾಗೂ ಅಧ್ಯಕ್ಷ ಡಾ.ಅಂಬರೀಶ್, ಕಲಾವಿದರ ಸರ್ವೋತೋಮುಖ ಅಭಿವೃದ್ಧಿಗೆ ಅನುವಾಗುವಂತಹ ಕಟ್ಟಡವನ್ನು ನಿರ್ಮಿಸಬೇಕೆಂಬುದು ವರನಟ ಡಾ.ರಾಜ್ಕುಮಾರ್ ಅವರ ಆಶಯವಾಗಿತ್ತು. ಅದಕ್ಕಾಗಿ ಜಯನಗರದಲ್ಲಿ ಭೂಮಿ ನೋಡಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅವರ ಆಸೆಯನ್ನು ಇದೀಗ ಈಡೇರಿಸಲಾಗಿದೆ ಎಂದು ತಿಳಿಸಿದರು. ಕಲಾವಿದರ ಸಂಘದ ಸ್ವಂತ ಕಟ್ಟಡ ನನ್ನ ಅಧ್ಯಕ್ಷತೆಯಲ್ಲಿ ನೆರವೇರಿರುವುದು ಸಂತಸ ತಂದಿದೆ. ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಎಚ್.ಡಿ.ರೇವಣ್ಣ ಅವರ ಕಾಲದಲ್ಲಿ ಕಟ್ಟಡದ ರೂಪುರೇಷೆ ತಯಾರಿಸಲಾಗಿತ್ತು. ನಂತರ ಸೋಮಣ್ಣ ಅವರು ವಸತಿ ಸಚಿವರಾಗಿದ್ದಾಗ ಅಕ್ಕಪಕ್ಕದಲ್ಲಿನ ನಿವೇಶನಗಳ ವ್ಯಾಜ್ಯವನ್ನ ಬಗೆಹರಿಸಿ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರು. ಇವರೆಲ್ಲರ ಸಹಕಾರದಿಂದ ಇಂದು ಕಟ್ಟಡ ನಿರ್ಮಾಣಗೊಂಡಿದೆ. ಇದಕ್ಕೆ ರಾಕ್ಲೈನ್ ವೆಂಕಟೇಶ್ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು. ಹಲವಾರು ನಿರ್ಮಾಪಕರು, ರಾಜಕೀಯ ಮುಖಂಡರು, ಕಲಾವಿದರು ಸೇರಿದಂತೆ ಸಾಕಷ್ಟು ಮಂದಿ ಕೈ ಜೋಡಿಸಿದ್ದಾರೆ. ಇಂತಹ ಹಲವರ ಸಹಕಾರದೊಂದಿಗೆ ಕಟ್ಟಡ ಇಂದು ಕಾರ್ಯ ನಿರ್ವಹಿಸಲು ಸಜ್ಜಾಗಿದೆ. ನಾಲ್ಕು ಅಂತಸ್ತು ಹೊಂದಿರುವ ಈ ಕಟ್ಟಡದಲ್ಲಿ ಸಭೆ, ಸಮಾರಂಭ ನಡೆಸಲು ಸಭಾಂಗಣಗಳು ಸೇರಿದಂತೆ ನಾಲ್ಕನೆ ಅಂತಸ್ತಿನಲ್ಲಿ ಸಿನಿಮಾ ಥಿಯೇಟರ್ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು. ಸೆನ್ಸಾರ್ ಮಂಡಳಿಯವರಿಗೆ ಸಿನಿಮಾ ಸೆನ್ಸಾರ್ಗಾಗಿ ಈ ಥಿಯೇಟರನ್ನು ನೀಡುವ ಉದ್ದೇಶವಿದೆ. ಇದರೊಂದಿಗೆ ಸಿನಿಮಾ ರಂಗದ ಚಟುವಟಿಕೆಗಳಿಗೂ ಇಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು. ನಿಮ್ಮೆಲ್ಲರ ಸಹಕಾರದಿಂದ ನಿರ್ಮಾಣಗೊಂಡಿರುವ ಈ ಕಟ್ಟಡವನ್ನು ಮುಂದಿನ ಪೀಳಿಗೆಯವರು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ಚಿತ್ರರಂಗಕ್ಕೆ ಬರುವವರಿಗೆ ಅಗತ್ಯವಾದ ಜಿಮ್, ಯೋಗ ತರಬೇತಿ ನೀಡುವ ಕೇಂದ್ರವನ್ನು ಇಲ್ಲಿ ತೆರೆಯುವ ಚಿಂತನೆ ಇದೆ ಎಂದು ಅಂಬರೀಶ್ ಮಾಹಿತಿ ನೀಡಿದರು. ಹಿರಿಯ ನಟ, ಸಂಘದ ಖಜಾಂಚಿ ದೊಡ್ಡಣ್ಣ ಮಾತನಾಡಿ, ಇದು ಕಲಾವಿದರ 40 ವರ್ಷಗಳ ಕನಸು. ಇಂದು ಕೈಗೂಡಿದೆ. ಇನ್ನು ಮುಂದೆಯೂ ಒಂದೇ ತಾಯಿಯ ಮಕ್ಕಳಂತೆ ಮುನ್ನಡಿ ಇಡೋಣ. ಎಲ್ಲಾ ಕಲಾವಿದರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಪ್ರತಿಯೊಬ್ಬರ ಶ್ರಮ ಇದರಲ್ಲಿ ಅಡಗಿದೆ. ಈ ಒಂದು ಕೆಲಸವನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶಿವರಾಜ್ಕುಮಾರ್, ರಾಕ್ಲೈನ್ ವೆಂಕಟೇಶ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ಬಾಬು, ನಾಯಕನಟರಾದ ಪುನೀತ್ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ರಮೇಶ್ ಅರವಿಂದ್, ಪ್ರಮೀಳಾ ಜೋಷಾಯಿ, ಸುಂದರ್ರಾಜ್, ದ್ವಾರಕೀಶ್, ದುನಿಯಾ ವಿಜಿ, ಹಿರಿಯನಟಿಯರಾದ ಬಿ.ಸರೋಜಾದೇವಿ, ಹೇಮಚೌದರಿ, ಲಕ್ಷ್ಮೀದೇವಿ ಮತ್ತಿತರರು ಉಪಸ್ಥಿತರಿದ್ದ