ಹಿಮಾಲಯದ ಸುಂದರ ಪರಿಸರದಲ್ಲಿ `ದಿ ಗ್ರೇಟ್ ಹಿಮಾಲಯನ್ ಟ್ರಿಪ್` ಚಿತ್ರದ ಹಾಡಿನ ಚಿತ್ರೀಕರಣ
ಹಿಮಾಲಯದ ಸುಂದರ ಪರಿಸರದಲ್ಲಿ `ದಿ ಗ್ರೇಟ್ ಹಿಮಾಲಯನ್ ಟ್ರಿಪ್` ಚಿತ್ರದ ಹಾಡಿನ ಚಿತ್ರೀಕರಣ
ಶಾಲೆಯೊಂದರ 40 ಮಕ್ಕಳ ಸಾಹಸದ ಕಥಾಹಂದರ ಹೊಂದಿರುವ ದಿ ಗ್ರೇಟ್ ಹಿಮಾಲಯನ್ ಟ್ರಿಪ್ ಎಂಬ ಚಿತ್ರದ ಹಾಡೊಂದರ ಚಿತ್ರೀಕರಣ ಹಿಮಾಲಯದ ಸುಂದರ ಪರಿಸರದಲ್ಲಿ ನಡೆದಿದೆ. ಈ ಹಾಡಿನ ಚಿತ್ರೀಕರಣಕ್ಕಾಗಿ 25 ಮಕ್ಕಳು ಸೇರಿದಂತೆ ಸುಮಾರು 40ಜನರ ತಂಡ ಬೆಂಗಳುರಿನಿಂದ ಮನಾಲಿಗೆ ತೆರಳಿದೆ. ಮನಾಲಿಯಲ್ಲಿ ಬೀಡುಬಿಟ್ಟಿದ ತಂಡ ಸುತ್ತಲ್ಲಿನ ರಮಣೀಯ ಸ್ಥಳಗಳಲ್ಲಿ ಹತ್ತು ದಿನಗಳ ಚಿತ್ರೀಕರಣ ನಡೆಸಿದೆ. ಮೆ.ಹೇಮಾ ಎಂಟರ್ ಪ್ರೈಸಸ್ ಮೂಲಕ ಈ ಚಿತ್ರವನ್ನು ಸಿ.ನಾಗೇಶ್(ಸಿಂಗಸಂದ್ರ)ಮತ್ತು ಕೆ. ಈಶ್ವರ್ ಸೇರಿ ನಿರ್ಮಾಣ ಮಾಡುತ್ತಿದ್ದಾರೆ.
ಕೆ.ಈಶ್ವರ್ ಎಲೆಕೊಪ್ಪ ಅವರೇ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. 25 ಜನ ಮಕ್ಕಳು ಶೈಕ್ಷಣಿಕ ಪ್ರವಾಸದ ಮೂಲಕ ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹೊರಡುತ್ತಾರೆ. ಒಂದು ಬಸ್ ಮೂಲಕ ಪ್ರವಾಸ ಹೊರಡುವ ಮಕ್ಕಳು ಕೊನೆಗೆ ಹಿಮಾಲಯದ ತಪ್ಪಲನ್ನು ತಲುಪುತ್ತಾರೆ. ಅಲ್ಲಿಂದ ಬರುವಾಗ ಮಕ್ಕಳಿದ್ದ ಬಸ್ ಅಪಾಯಕ್ಕೆ ಸಿಲುಕಿಹಾಕಿಕೊಳ್ಳುತ್ತದೆ. ಅವರಲ್ಲಿದ್ದ 6 ಮಕ್ಕಳು ತಮ್ಮ ಬುದ್ದಿ ಸಾಮಥ್ರ್ಯದಿಂದ ಆ ಬಸ್‍ನಲ್ಲಿದ್ದ ಎಲ್ಲರನ್ನು ಹೇಗೆ ಕಾಪಾಡಿದರು ಎನ್ನುವುದೇ ಈ ಚಿತ್ರದ ಕಥಾನಕ. ಸಂತೋಷ್ ಈ ಚಿತ್ರದ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.