ಶುಗರ್‍ಲೆಸ್ ಚಿತ್ರೀಕರಣ ಮುಕ್ತಾಯ…
ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ. ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಶುಗರ್‍ಲೆಸ್. ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಸಹ ಶಶಿಧರ್ ಕೆ.ಎಂ. ಅವರೇ ಮಾಡಿದ್ದು, ಲಾಕ್‍ಡೌನ್ ಕಾರಣದಿಂದ ತಡವಾದರೂ ಈಗ ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ. ಅವರ ಜೊತೆ ಸಹಾಯಕ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾತ್ ನೀಡಿದ್ದಾರೆ. ಅಲ್ಲದೆ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ರಘುಸಿಂಗಂ ಹಾಗೂ ದಿವ್ಯ ಶಶಿಧರ್ ಕಾರ್ಯನಿರ್ವಹಿಸಿದ್ದಾರೆ.
ದಿಶಾ ಎಂಟರ್‍ಟೈನ್‍ಮೆಂಟ್ ಹಾಗೂ ಜಾಜಿ ಪ್ರೊಡಕ್ಷನ್ಸ್ ಸಹಕಾರದೊಂದಿಗೆ ನಿರ್ಮಾಣವಾಗಿರುವ ಶುಗರ್‍ಲೆಸ್ ಚಿತ್ರದ ಛಾಯಾಗ್ರಾಹಕರಾಗಿ ಲವಿತ್, ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್ ಕೆಲಸ ಮಾಡಿದ್ದು, ಡಾ|| ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಗುರು ಕಶ್ಯಪ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ ಮಾಸ್ಟರ್, ಕಲೆ ವಿನ್ಯಾಸ ರೂಪೇಂದ್ರ ಆಚಾರ್ ಅವರದಾಗಿದೆ.
ಈ ಚಿತ್ರಕ್ಕೆ ಕರ್ನಾಟಕದಾದ್ಯಂತ ನಲವತೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದೆ. ಇದು ತುಂಬಾ ಹ್ಯೂಮರಸ್ ಆದ ನಿರೂಪಣೆ ಇರುವಂಥ ಚಿತ್ರ. ಈ ಕಥೆಯಲ್ಲಿ ಹಾಸ್ಯವೇ ಪ್ರಧಾನವಾಗಿರುತ್ತದೆ. ನಾನು ಸ್ಕ್ರಿಪ್ಟ್ ಮಾಡುವಾಗ ನನ್ನ ಸಿನಿಮಾದ ಹೀರೋ ಪಾತ್ರ ಹೇಗೆಲ್ಲ ಇರಬೇಕು ಎಂದುಕೊಂಡಿದ್ದೆ, ಅದೇ ರೀತಿಯ ಹುಡುಗನಾಗಿ ನಟ ಪೃಥ್ವಿ ಅಂಬರ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಮ್ಮ ಚಿತ್ರದ ಟೀಸರ್, ಟ್ರೈಲರ್ ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಹಾಗೂ ನಿರ್ದೇಶಕ ಶಶಿಧರ ಕೆ.ಎಂ. ಅವರು ತಿಳಿಸಿದ್ದಾರೆ.