ಗೋವಾದಲ್ಲಿ ಇಂದಿನಿಂದ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು,
ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಈ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನವೆಂಬರ್ ನಲ್ಲಿ ನಡೆಸಲಾಗುತ್ತಿದ್ದ ಚಿತ್ರೋತ್ಸವ ಈ ಬಾರಿ ಕೋವಿಡ್ ನಿಂದಾಗಿ ಮುಂದೂಡಿಕೆಯಾಗಿದ್ದು ಈಗ ಜನವರಿ 16 ರಿಂದ 24 ರವರೆಗೆ ಚಿತ್ರೋತ್ಸವ ನಡೆಯಲಿದೆ. ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವನ್ನು ಉದ್ಘಾಟಿಸುವ ಗೌರವ ಇದೇ ಮೊದಲು ಕನ್ನಡದ ನಟನಿಗೆ ಸಿಕ್ಕಿದೆ.
1980 ರಲ್ಲಿ ಬೆಂಗಳೂರಿನಲ್ಲಿ ನಡೆದ ಚಿತ್ರೋತ್ಸವವನ್ನು ಬೆಂಗಳೂರಿನಲ್ಲಿ ನೆಲೆಸಿದ್ದ ಬಾಲಿವುಡ್ ನಟಿ ದೇವಿಕಾರಾಣಿ ಉದ್ಘಾಟಿಸಿದರು. 1992 ರಲ್ಲಿ ಡಾ.ರಾಜ್ ಕುಮಾರ್ ರವರು ಉದ್ಘಾಟನೆ ಮಾಡ್ಬೇಕಿತ್ತು ಅದರೆ ಆ ಸಮಯದಲ್ಲಿ ಕಾವೇರಿ ವಿವಾದ ಭುಗಿಲೆದ್ದ ಕಾರಣ ಚಿತ್ರೋತ್ಸವದಲ್ಲಿ ಭಾಗವಹಿಸಿರಲಿಲ್ಲ. ಇಂದು ಪಣಜಿಯ ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಿಚ್ಚ ಸುದೀಪ್ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶ್ವದ 60 ದೇಶಗಳು ಈ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದು, ಪಣಜಿಯ ನಾಲ್ಕು ಆಡಿಟೋರಿಯಂ ನಲ್ಲಿ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.