ನಡೆದಾಡುವ ಸಂಗೀತ ವಿಶ್ವವಿದ್ಯಾಲಯದ ಮುಂದೆ ಕುಳಿತು…
ಪವಡಿಸು ಪರಮಾತ್ಮ
ಶ್ರೀ ಬಾಲಸುಬ್ರಹ್ಮಣ್ಯ…
ಆಕಾಶದ ವಿಸ್ತಾರವನ್ನು ವಿವರಿಸಲಾಗುವುದಿಲ್ಲ ; ಕಡಲಿನ ಆಳವನ್ನು ಅಳೆಯಲಾಗುವುದಿಲ್ಲ ಹಾಗೆಯೇ ಸಂಗೀತದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಮ್.
ಇವತ್ತಿಗೆ ಸರಿಯಾಗಿ ಹದಿನಾರು ವರ್ಷಗಳ ಹಿಂದೆ ಈ ಟಿವಿಯ
‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಶೂಟಿಂಗ್ ಸೆಟ್ ನಲ್ಲಿ ಈ ಸಂಗೀತದ ದೇವರೊಂದಿಗೆ ಸಂವಾದಿಸುವ ಒಂದು ಅವಕಾಶದಲ್ಲಿ ನಮ್ಮ ಎದೆ ತುಂಬಾ ಆವರಿಸಿಕೊಂಡು ಕುಳಿತಿದ್ದರು.
ಬೆಳದಿಂಗಳ ಕವಿ ಕೆ ಕಲ್ಯಾಣ್ ಅವರೊಂದಿಗೆ ಹೋದಾಗ ತುಂಬು ತೋಳಿನ ಬನಿಯನ್ ತೊಟ್ಟು ಊಟಕ್ಕೆ ಕುಳಿತಲ್ಲಿಂದಲೇ ಸ್ವಾಗತಿಸಿದ ಗಾನ ಗಂಧರ್ವ ನಮ್ಮ ಪ್ರೆಸ್ ಕ್ಲಬ್ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲು ತುಂಬು ಮನಸಿನಿಂದ ಒಪ್ಪಿಗೆ ನೀಡಿದರು.
ಅವರ ಕಾರ್ಯಕ್ರಮದ ಮೂಲಕ ಪತ್ರಕರ್ತರ ಆರೋಗ್ಯ ನಿಧಿಯನ್ನು ಸ್ಥಾಪಿಸುತ್ತಿರುವ ವಿಷಯ ತಿಳಿದ ನಂತರ ತಮ್ಮ ಸಂಭಾವನೆಯನ್ನು ಆ ಫಂಡ್ ಗೆ ಬಿಟ್ಟುಕೊಟ್ಟು ದೊಡ್ಡತನ ಮೆರೆದರು.
ಅಲ್ಲದೇ ಆವತ್ತಿನ ಎದೆ ತುಂಬಿ ಹಾಡುವ ಶೂಟಿಂಗ್ ನಲ್ಲಿ ಪ್ರೆಸ್ ಕ್ಲಬ್ ಪದಾಧಿಕಾರಿಗಳನ್ನು ಪರಿಚಯಿಸಿ ಕರ್ನಾಟಕದ ಪತ್ರಕರ್ತರನ್ನು ಶ್ಲಾಘಿಸಿ ಮಾತನಾಡಿದ್ದು ಪ್ರಸಾರವೂ ಆಯಿತು. ಆ ಕಾರ್ಯಕ್ರಮದ ಮುಖ್ಯ ಛಾಯಾಗ್ರಾಹಕ ನಮ್ಮ ಸದಸ್ಯ ಬಾಲು, ನಮ್ಮ ಮೇಲೆ( ನಾನು,ಶೆಣೈ,ಜೆಸುನಾ,
ಕಲ್ಯಾಣ್ ) ಬೆಳಕು ಚೆಲ್ಲಿ, ಕ್ಯಾಮೆರಾ ತಿರುಗಿಸಿ ಶೂಟ್ ಮಾಡಿದ್ದು ಮರೆಯಲಾಗದ ಕ್ಷಣ.
2004 ಅಕ್ಟೋಬರ್ 18 ಬೆಳಗ್ಗೆ ಪ್ರೆಸ್ ಕ್ಲಬ್ ನಲ್ಲಿ ಎಸ್ ಪಿ ಬಿ ಪತ್ರಿಕಾ ಸಂವಾದ , ಮಧ್ಯಾಹ್ನ ಭೋಜನ, ಸಂಜೆ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಸಂಗೀತರಾಧನೆ ಜತೆಗೇ ಅಂಬರೀಷ್ ಅವರು 200 ಚಿತ್ರಗಳನ್ನು ಪೂರೈಸಿದ ಸಂಭ್ರಮದ ಪುರಸ್ಕಾರ ಸನ್ಮಾನ.
ಅವತ್ತು ಮುಖ್ಯಮಂತ್ರಿ ಧರ್ಮಸಿಂಗ್ ದಿಡೀರ್ ದೆಹಲಿ ಬುಲಾವ್ ನಿಂದಾಗಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ,ಮಲ್ಲಿಕಾರ್ಜುನ ಖರ್ಗೆ ಅವರಿಂದ ಎಸ್ ಪಿ ಬಿಗೆ ಪ್ರೆಸ್ ಕ್ಲಬ್ ಗೌರವ ಸಮರ್ಪಣೆ.
“ಪ್ರೆಸ್, ಪೊಲಿಟಿಷಿಯನ್ಸ್
ಮತ್ತು ಫಿಲಂ ಇಂಡಸ್ಟ್ರಿ
ಸೇರಿದ ಒಂದೇ ವೇದಿಕೆಯಲ್ಲಿ ನಡೆದ ಈ ಪುರಸ್ಕಾರ ತಮ್ಮ ಸಂಗೀತ ಪಯಣದಲ್ಲಿ ಯಾವತ್ತೂ ನೆನಪಿನಲ್ಲಿರುತ್ತದೆ” ಎಂದು ಮನಸು ತುಂಬಿ ಹೇಳಿದ್ದಲ್ಲದೆ ಅಂದು ಎದೆ ತುಂಬಿ ಹಾಡಿ ಸ್ಟೇಡಿಯಂನಲ್ಲಿ ತುಂಬಿದ ಅಸಂಖ್ಯಾತ ಸಂಗೀತ ರಸಿಕರ ಮೆಚ್ಚಿನ ಕನ್ನಡ ಗೀತೆಗಳನ್ನು ಸಾಕ್ಷಾತ್ಕಾರಗೊಳಿಸಿದರು.
ಈ ಟಿವಿ ಆ ರಸಸಂಜೆಯನ್ನು ಮುದ್ರಿಸಿ ಮರು ಪ್ರಸಾರವನ್ನು ಮಾಡಿತು…
ಅಂದು ಎಸ್ ಪಿ ಯವರ ಗಾಯನದಿಂದ ಶುರುವಾದ ಆರೋಗ್ಯ ನಿಧಿಯ ಯೋಜನಾರಂಭ ಮುಂದುವರೆದು ಸರ್ಕಾರ ಒಂದು ಕೋಟಿ ನಿಧಿಯನ್ನು ವಾರ್ತಾ ಇಲಾಖೆಯಲ್ಲಿಟ್ಟಿದೆ.
ಇನ್ನು ಒಂದೆರಡು ಅನುಭವಗಳನ್ನು ಹಾಗೆ ಉಳಿಸಿಕೊಂಡು…
– ವೈ ಜಿ ಅಶೋಕ್ ಕುಮಾರ್.