ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರಕ್ಕೆ ‘ಯು’ ಸರ್ಟಿಫಿಕೇಟ್
ಶರಣ್ ಅಭಿನಯದ ಅತೀ ನಿರೀಕ್ಷೆಯ ‘ಗುರು ಶಿಷ್ಯರು’ ಚಿತ್ರವನ್ನು ಶುಕ್ರವಾರ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ವೀಕ್ಷಿಸಿ, ಯಾವುದೇ ಕಟ್ ಅಥವಾ ಮ್ಯೂಟ್ಗಳಿಲ್ಲದೆ ‘ಯು’ ಪ್ರಮಾಣಪತ್ರ ನೀಡಿದೆ. ಚಿತ್ರವನ್ನು ಬಹಳ ಇಷ್ಟಪಟ್ಟಿರುವ ಸೆನ್ಸಾರ್ ಮಂಡಳಿಯ ಸದಸ್ಯರು, ಇದೊಂದು ಮನೆಮಂದೆಯೆಲ್ಲಾ ಒಟ್ಟಾಗಿ ಕುಳಿತು ನೋಡುವ ಮನರಂಜನಾತ್ಮಕ ಚಿತ್ರ ಎಂದು ಪ್ರಶಂಸಿಸಿದ್ದಾರೆ. ಅಷ್ಟೇ ಅಲ್ಲ, ಇಂಥದ್ದೊಂದು ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವ ಚಿತ್ರತಂಡದವರ ಬೆನ್ನು ತಟ್ಟಿದ್ದಾರೆ.
‘ಗುರು ಶಿಷ್ಯರು’ ಚಿತ್ರವನ್ನು ಲಡ್ಡು ಸಿನಿಮಾ ಹೌಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ ಸಂಸ್ಥೆಗಳಡಿ ಜಂಟಿಯಾಗಿ ನಿರ್ಮಿಸಲಾಗಿದೆ. ಮುಂದಿನ ಶುಕ್ರವಾರ (ಸೆ.23) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಎಲ್ಲ ಪ್ರದೇಶದ ಹಕ್ಕುಗಳು ಈಗಾಗಲೇ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. 2 ಗಂಟೆ 40 ನಿಮಿಷಗಳ ಅವಧಿಯ ಈ ಚಿತ್ರವು 90ರ ದಶಕದ ಕಾಲಘಟ್ಟದ ಕಥೆಯೊಂದನ್ನು ಹೊಂದಿದೆ. ಗ್ರಾಮೀಣ ಕರ್ನಾಟಕದ ಪುಟ್ಟ ಊರೊಂದರಲ್ಲಿ ನಡೆಯುವ ಈ ಕಥೆಯಲ್ಲಿ ಖೋಖೋ ಕ್ರೀಡೆಯು ಪ್ರಮುಖ ಪಾತ್ರವಹಿಸಲಿದ್ದು, ಶರಣ್ ಶಿಕ್ಷಕರಾಗಿ ಅಭಿನಯಿಸುತ್ತಿದ್ದಾರೆ. ಅವರೊಂದಿಗೆ ನಿಶ್ವಿಕಾ ನಾಯ್ಡು, ದತ್ತಣ್ಣ, ಸುರೇಶ್ ಹೆಬ್ಳೀಕರ್, ಅಪೂರ್ವ ಕಾಸರವಳ್ಳಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಶರಣ್ ಗುರುವಾಗಿ ನಟಿಸಿದರೆ, ಅವರಿಗೆ ಶಿಷ್ಯಂದಿರಾಗಿ ಅವರ ಮಗ ಹೃದಯ್, ‘ನೆನಪಿರಲಿ’ ಪ್ರೇಮ್ ಮಗ ಏಕಾಂತ್, ರವಿಶಂಕರ್ ಗೌಡ ಮಗ ಸೂರ್ಯ, ನವೀನ್ ಕೃಷ್ಣ ಮಗ ಹರ್ಷಿತ್ ಮತ್ತು ಬುಲೆಟ್ ಪ್ರಕಾಶ್ ಮಗ ರಕ್ಷತ್ ನಟಿಸಿದ್ದಾರೆ.
‘ಗುರು ಶಿಷ್ಯರು’ ಚಿತ್ರವು ಶರಣ್ ನಿರ್ಮಾಣದ ಮೂರನೆಯ ಚಿತ್ರವಾಗಿದ್ದು, ನಟ-ನಿರ್ದೇಶಕ ತರುಣ್ ಸುಧೀರ್ ನಿರ್ಮಾಣದ ಮೊದಲ ಚಿತ್ರವಾಗಿದೆ. ನಿರ್ಮಾಣದ ಜೊತೆಗೆ ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿಯೂ ತರುಣ್ ಕೆಲಸ ಮಾಡಿದ್ದಾರೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಅಭಿನಯದ ‘ಜೆಂಟಲ್ಮ್ಯಾನ್’ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್ ಹಂಪಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಾಸ್ತಿ ಮಂಜು ಅವರ ಸಂಭಾಷಣೆ, ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.
‘ಗುರು ಶಿಷ್ಯರು’ ಚಿತ್ರವು ಸೆ. 23ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.