ಹಿರಿಯ ನಟಿ ಕೃಷ್ಣ ಕುಮಾರಿ ನಿಧನ.
ಹಿರಿಯ ನಟಿ ಕೃಷ್ಣಕುಮಾರಿ(83) ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಟಿ ಸಾಹುಕಾರ್ ಜಾನಕಿ ಅವರ ಸಹೋದರಿಯಾಗಿದ್ದ ಕೃಷ್ಣಕುಮಾರಿ ಅವರು, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸುಮಾರು 230 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಡಾ. ರಾಜ್ ಕುಮಾರ್, ಎನ್.ಟಿ.ಆರ್., ನಾಗೇಶ್ವರರಾವ್ ಮೊದಲಾದ ನಟರೊಂದಿಗೆ ಅವರು ನಟಿಸಿದ್ದರು. 60 -70 ರ ದಶಕದಲ್ಲಿ ಜನಪ್ರಿಯ ತಾರೆಯಾಗಿದ್ದರು. ‘ಭಕ್ತ ಕನಕದಾಸ’, ‘ಆಶಾ ಸುಂದರಿ’, ‘ಶ್ರೀಶೈಲ ಮಹಾತ್ಮೆ’ ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ಮೂಳೆ ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಚೇತರಿಕೆ ಕಂಡಿದ್ದರು. ಆದರೆ, ವಯೋ ಸಹಜ ಅನಾರೋಗ್ಯದಿಂದ ನಿಸ್ತೇಜರಾಗಿ ಬುಧವಾರ ಬೆಳಗ್ಗೆ ತಮ್ಮ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. 1933 ರ ಮಾರ್ಚ್ 6 ರಂದು ಪಶ್ಚಿಮ ಬಂಗಾಳದ ನೈಹಾತಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಟಿ ಕೃಷ್ಣ ಕುಮಾರ್ ಅವರ ತಂದೆ ವೆಂಕೋಜಿ ರಾವ್, ತಾಯಿ ಸಚಿ ದೇವಿ. ಆಂಧ್ರಪ್ರದೇಶದ ರಾಜಮಂಡ್ರಿ ಮೂಲದ ಈ ತೆಲುಗು ಕುಟುಂಬದಿಂದ ಕೃಷ್ಣಕುಮಾರಿ ಅಲ್ಲದೆ ಅವರ ಸೋದರಿ ಸಾಹುಕಾರ್ ಜಾನಕಿ ಕೂಡಾ ಬಹುಭಾಷಾ ನಟಿಯಾಗಿ ಮಿಂಚಿದರು. ಇಂಡಿಯನ್ ಎಕ್ಸ್ ಪ್ರೆಸ್ ನ ಮಾಜಿ ಸಂಪಾದಕ ಮತ್ತು ಪತ್ರಿಕೋದ್ಯಮಿ ಅಜಯ್ ಮೋಹನ್ ಖೈತಾನ್ ರನ್ನು ಕೃಷ್ಣ ಕುಮಾರಿ ಮದುವೆಯಾಗಿದ್ದರು. ಪುತ್ರಿ ದೀಪಿಕಾ, ಅಳಿಯ ವಿಕ್ರಮ್, ಮೊಮ್ಮಗ ಪವನ್ ಜತೆ ಬೆಂಗಳೂರಿನಲ್ಲಿ ಕೃಷ್ಣಕುಮಾರಿ ಅವರು ಬಹುಕಾಲದಿಂದ ನೆಲೆಸಿದ್ದರು.
ಕೃಷ್ಣ ಕುಮಾರಿ ಅವರು ತಮ್ಮ ಕಾಲ ಪ್ರಮುಖ ನಾಯಕ ನಟರಾದ ಎನ್.ಟಿ. ರಾಮ ರಾವ್, ಅಕ್ಕಿನೀನಿ ನಾಗೇಶ್ವರ ರಾವ್, ಕೃಷ್ಣಮ್ ರಾಜು, ಡಾ ರಾಜ್ ಕುಮಾರ್, ಶಿವಾಜಿ ಗಣೇಶನ್, ಜಗ್ಗಯ್ಯ ಜತೆ ನಟಿಸಿದ್ದರು. ಕನ್ನಡದಲ್ಲಿ ಭಕ್ತ ಕನಕದಾಸ, ಆಶಾಸುಂದರಿ, ದಶಾವಾತಾರ, ಶ್ರೀಶೈಲ ಮಹಾತ್ಮೆ, ಭಕ್ತ ಕಬೀರ,ಸ್ವರ್ಣ ಗೌರಿ, ಚಂದ್ರ ಕುಮಾರ, ಸತಿ ಸಾವಿತ್ರಿ ಅವರು ನಟಿಸಿದ ಪ್ರಮುಖ ಚಿತ್ರಗಳು.