ನಿರ್ಮಾಪಕಿ ವಂದನಾ ಜೈನ್ ವಿರುದ್ಧ ದೂರು ನೀಡಿದ ಸಂಜನಾ
ಬೆಂಗಳೂರು: ತಮಗೆ ನಿರ್ಮಾಪಕಿ ವಂದನಾಜೈನ್ ಅವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ.
ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿಯಾಗಿ ಡಿಸೆಂಬರ್ 24ರಂದು ರಾತ್ರಿ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಬಾರ್ ನಲ್ಲಿ ವಂದನಾ ಹಲ್ಲೆ ಮಾಡಿರುವ ಬಗ್ಗೆ ಮೆಡಿಕಲ್ ರೆಕಾರ್ಡ್ ಜೊತೆಗೆ ಬಂದು ಸಂಜನಾ ದೂರು ನೀಡಿದ್ದಾರೆ. ತಾಯಿಜೊತೆ ಪೊಲೀಸ್ ಸ್ಟೇಷನ್ ಗೆ ಆಗಮಿಸಿದ ಸಂಜನಾ, ವಂದನಾ ಅವರು ರಾತ್ರಿ ಫೋನ್ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಂದನಾ ವಿರುದ್ದ ದೂರು ಕೊಟ್ಟಿದ್ದಾರೆ.
ಈ ಪತ್ರದಲ್ಲಿ ನಾನು ವಿವರಿಸಲು ಸಹ ಸಾಧ್ಯವಾಗದಂತಹ ಕೊಳಕು ಪದಗಳಿಂದ ಅವಳು ನನ್ನ ತಾಯಿಯನ್ನು, ನನ್ನ ಕುಟುಂಬವನ್ನು ನಿಂದಿಸಿದ್ದಾಳೆ ಎಂದು ಸಂಜನಾ ದೂರಿನಲ್ಲಿ ನೋವು ತೋಡಿಕೊಂಡಿದ್ದಾರೆ.
ನನ್ನಿಂದ ಮತ್ತು ನನ್ನ ಸ್ನೇಹಿತರಿಂದ ದೂರವಿರಿ ಎಂದು ನಾನು ಅವಳಿಗೆ ಹೇಳಿದೆ. ಆಗ ನನ್ನನ್ನು ಬಂಧಿಸುವ, ನನ್ನ ವೃತ್ತಿ ಜೀವನವನ್ನು ಮುಗಿಸುವ ಮತ್ತು ನನ್ನ ಹೆಸರನ್ನು ಹಾಳು ಮಾಡಲು ಅವಳು ನನ್ನನ್ನು ಬ್ಲ್ಯಾಕ್ಮೇಲ್ ಮಾಡಿದಳು. ನನ್ನನ್ನು ಜೈಲಿಗೆ ಹಾಕಿ, ಮತ್ತು ನನ್ನ ಇಡೀ ಕುಟುಂಬವನ್ನು ಮುಗಿಸುತ್ತೇನೆ ಎಂದು
ವಂದನಾಜೈನ್ ಧಮ್ಕಿ ಹಾಕಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.
ಕಳೆದ 10 ವರ್ಷಗಳಿಂದ ನಾನು ಚಿತ್ರರಂಗದಲ್ಲಿ ತುಂಬಾ ಶ್ರಮವಹಿಸಿದ್ದೇನೆ ಮತ್ತು ನಾನು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತೇನೆ. ಮತ್ತು ಇನ್ನೇನೂ ಇಲ್ಲ. ನನ್ನನ್ನು ಈ ವಿವಾದಕ್ಕೆ ಎಳೆಯಲಾಗಿದೆ ಮತ್ತು ಗುರಿ ಮಾಡಲಾಗಿದೆ.ಅವಳು ನನ್ನ ಫೋನ್ ಕಸಿದುಕೊಳ್ಳುವ ವೀಡಿಯೊವನ್ನು ನಾನು ಬಿಡುಗಡೆ ಮಾಡಿದ್ದೇನೆ.
ವೀಡಿಯೊದಲ್ಲಿ ಅವಳ ಮುಖ ಅಥವಾ ತಲೆಗೆ ಏನಾದರೂ ಗಾಯವಾಗಿದೆಯೆ? ವಿಸ್ಕಿ ಬಾಟಲ್ ನಿಂದ ಹೊಡೆದರೆ ಕೆಲವು ರೀತಿಯ ಗುರುತು ಅಥವಾ ರಕ್ತದ ಕಲೆ
ಇರಬೇಕಿತ್ತು. ನನ್ನ ಇಡೀ ಜೀವನದಲ್ಲಿ ಬೇಜವಾಬ್ದಾರಿಯಿಂದ ನಾನು ಎಂದಿಗೂ ವರ್ತಿಸಿಲ್ಲ.ಇದು ನನ್ನ ಮೇಲೆ ಮಾಡಿರುವ ಆಧಾರ ರಹಿತ ಆರೋಪವಾಗಿದೆ ಎಂದು ಸಂಜನಾ ನೋವು ತೋಡಿಕೊಂಡಿದ್ದಾರೆ.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಂಜನಾ, “ವಿಸ್ಕಿ ಬಾಟಲ್ ನಲ್ಲಿ ಹೊಡೆದರು ಎಂದು ಹೇಳಲಾಗುತ್ತಿದೆ, ಇದಕ್ಕೆ ಏನು ಸಾಕ್ಷಿ ಇದೆ, ಯಾವ ಆಧಾರದ ಮೇಲೆ ಈ ರೀತಿಯಾ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಗರಂ ಆದರು. ನಾನು ಐದು ಭಾಷೆಯಲ್ಲಿ ಅಭಿನಯಿಸುತ್ತಿದ್ದೀನಿ. ಈ ರೀತಿಯಾಗಿ ಹೇಳಿ ನನ್ನ ಹೆಸರನ್ನು ಹಾಳು ಮಾಡಬೇಡಿ” ಎಂದರು.
ಮೊದಲುಗಲಾಟೆ ಮಾಡಿದ್ದು ವಂದನಾ, ಅವರು ಕೆಟ್ಟ ಪದಗಳಿಂದ ಬೈದರು, ಅಲ್ಲದೆ ತಾಯಿಯ ಬಗ್ಗೆ ಕೆಟ್ಟ ಪದಳಿಂದ ಬೈದರು ಹಾಗಾಗಿ ನಾನು ಕೂಡ ಬೈದೆ ಅಷ್ಟೆ, ವಿಸ್ಕಿ ಬಾಟಲ್ ನಿಂದ ಹೊಡೆದಿಲ್ಲ. ಗಲಾಟೆ ಆದ ರಾತ್ರಿ ವಂದನಾ ಪೊಲೀಸರಿಗೆ ಫೋನ್ ಮಾಡಿದ್ದರು, ನನ್ನನ್ನುಅರೆಸ್ಟ್ ಮಾಡಲು ರಾತ್ರಿ ಇಬ್ಬರು ಪೊಲೀಸರು ಬಂದಿದ್ದರು. ಆದರೆ ಆ ಸಮಯದಲ್ಲಿ ನಾನು ಇರಲಿಲ್ಲ. ಹೋಟೆಲ್ ನಿಂದ ಹೊರಟಿದ್ದೆ” ಎಂದು ಹೇಳಿದ್ದಾರೆ.
ಮುಂಬರುವ 4 ದಕ್ಷಿಣ ಭಾಷೆಗಳಲ್ಲಿ 7 ಚಲನಚಿತ್ರಗಳು ಮತ್ತು ಹಿಂದಿಯ ಪ್ರಮುಖ ಪಾತ್ರಗಳಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದೆ. ನನಗೆ ಕೊಳಕು ಪ್ರಚಾರದ ಅಗತ್ಯವಿಲ್ಲ. ಭಾರತೀಯ ಕ್ರಿಕೆಟ್‍ತಂಡದ ಸ್ಪಿನ್ನರ್ ಬೌಲರ್ ಅಮಿತ್ ಮಿಶ್ರಾ ಅವರನ್ನು ಮದುವೆಯಾಗಲು ಬ್ಲ್ಯಾಕ್ಮೇಲ್ ಮಾಡಲು ಹೇಗೆ ಗುರಿಯಾಗಿಸಿಕೊಂಡಿದ್ದಾರೋ ಹಾಗೆಯೇ ನನ್ನ ಮೇಲೆ ಪ್ರಚಾರಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ದಯವಿಟ್ಟು ನನ್ನನ್ನು ಬೆಂಬಲಿಸಿ. ಪುರಾವೆಗಳಿಲ್ಲದ ಯಾವುದೇ ವದಂತಿಯನ್ನು ಜನತೆಯೂ ನಂಬಬಾರದು ಎಂದು ಮನವಿ ಮಾಡಿದ್ದಾರೆ.
ಇನ್ನುಒಂದು ವೇಳೆ ವಂದನಾ ದೂರು ವಾಪಾಸ್ ಪಡೆದರೆ ನಾನು ದೂರನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ. ಆಕೆಯ ಸಹವಾಸವೆ ಬೇಡ ನನಗೆ. ನಾನು ಈಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದೀನಿ. ನನ್ನ ಹೆಸರು ಹಾಳಾಗುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಈ ಕೊಳಕು ಹೋರಾಟವನ್ನು ಮುಂದುವರೆಸಲು ನನಗೂ ಆಸಕ್ತಿ ಇಲ್ಲ. ಈ ಪರಿಸ್ಥಿತಿಯಲ್ಲಿ ನಾನು ಮತ್ತು ನನ್ನಇಡೀ ಕುಟುಂಬ ಪೊಲೀಸ್ ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದೇವೆ.ಈ ನಿರ್ಣಾಯಕ ಘಳಿಗೆಯಲ್ಲಿ ನನ್ನನ್ನು ಬೆಂಬಲಿಸಿದ ಬೆಂಗಳೂರು ನಗರ ಪೊಲೀಸರಿಗೆ ವಿಶೇಷ ಧನ್ಯವಾದಗಳು ಹೇಳಿದ್ದಾರೆ ನಟಿ ಸಂಜನಾ ಗಲ್ರಾನಿ.