ಎಸ್.ಪಿ.ಬಿ. ಎಂಬ ಶುದ್ಧ ರಾಮರಸ – ಮಂಡ್ಯ ರಮೇಶ್

Published on

330 Views

*”ರಮೇಶ್ ನೀವು ಎಸ್‌ .ಪಿ.ಬಿ ಅವರ ಕಾರ್ ಡ್ರೈವರ್ ಆಗಿ ಆ್ಯಕ್ಟ್ ಮಾಡ್ಬೇಕು” ಅ೦ತ ಕರೆ ಮಾಡಿದ್ರು.* *ಸುಬ್ಬಿ! ಸುಬ್ರಹ್ಮಣ್ಯ!! ಕಿವಿ ನಿಮಿರಿತು. ಮಾಂಗಲ್ಯಂ ತಂತು ನಾನೇನಾ… ಬಣ್ಣ ಹಚ್ಚಿ ಅವರ ಮುಂದೆ ನಿಂತಾಗ ಕಣ್ಣು ತೆರೆದೇ ನಿದ್ರಿಸುವ ದೃಶ್ಯ*. *ಅವರಿಗೆ ನಮಸ್ಕರಿಸಿ ನಿಂತೆ. ಪ್ರೀತಿಯಿಂದ ಮೈದಡವಿದರು.*

*ವಿಶ್ವಾಸವೇ ಮೈದುಂಬಿ ಬಂದಂತೆ ಮಾತನಾಡಿಸುವುದು ಒಂದು ಸಹಜ ಕಲೆ.* *ನಂಬಿಕೊಂಡರೆ ಮಾತ್ರ ಸಾಧ್ಯ. ಕನ್ನಡ ಜನಮಾನಸದಲ್ಲಿ ಕುವೆಂಪು, ರಾಜ್ ಕುಮಾರ್ ನಂತರ ಅತಿ ಹೆಚ್ಚು ಹತ್ತಿರವಾದ ಕನ್ನಡಾಪ್ತ ವ್ಯಕ್ತಿತ್ವಗಳಲ್ಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರದ್ದು ಪ್ರಮುಖ ಸಾಲಿನ ಹೆಸರು*. *ಆ ಹೆಸರಿಗೆ ಒಂದು ಶಕ್ತಿ ಇದ್ದದ್ದು ಜಗತ್ತಿಗೇ ಗೊತ್ತು*.

*ಹಿರಿಯ ವಿದ್ವಾಂಸ, ನಿರ್ದೇಶಕ ಶ್ರೀ ಕೆ.ಎಸ್.ಎಲ್ ಸ್ವಾಮಿ ರಮೇಶ್ ಮಹಾ ಎಡಬಿಡಂಗಿ ಅಂತ ಎಸ್ಪಿ ಹಾಕ್ಕೊಂಡು ಪಿಕ್ಚರ್ ಮಾಡ್ತಿದ್ದೀನಿ ಪುಟ್ಟ ಪಾತ್ರ ಮಾಡ್ತೀರೇನ್ರಿ ಅಂದರು*. *ತಪ್ಪಿಸಿಕೊಳ್ಳಲು ನೋಡಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೇ ಹಾಡಿರುವ “ಪಿಬರೇ ರಾಮರಸಂ” ಹಾಡುತ್ತಾರೆ. ನೀವು ಅವರ ಜೊತೆ ಇರ್ತೀರಿ. ಕುಡಿವ ಗೆಳೆಯರು ಅಂದರು*. *ನಕ್ಕೆ ಒಪ್ಪಿಕೊಂಡೆ. ಮೂರು ರಾತ್ರಿ ಚಿತ್ರೀಕರಣ. ಬೆಂಗಳೂರಿನ ಹತ್ತಿರದ ಕೃಷ್ಣ ರಥದ ಬಿಲ್ಡಿಂಗ್ ಎತ್ತರದ ಮೂರ್ತಿ ಇರುವ ದೇಗುಲದ ಬಳಿ*.

*ಅವರ ಜೊತೆ ಮಾತನಾಡುವುದೊ೦ದು ಅನುಭಾವದ ಲೋಕ. ರಾಗ, ಸಂದರ್ಭ, ತಮಾಷೆ, ಆತ್ಮವಿಮರ್ಶೆ, ಚುಡಾಯಿಸುವುದು ಮನುಷ್ಯ ಸ್ವಭಾವಗಳ ಚಿಂತನೆ – ಚರ್ಚೆಗಳ ಮಹಾಮೇಳೈಕೆ*.

*ಅವರ ಬದುಕಿನ ಅತಿ ದೊಡ್ಡ ಮೈಲಿಗಲ್ಲು ಲಕ್ಷಾಂತರ ಮಕ್ಕಳನ್ನು ಹಾಡಿನ ಭಾವಗಳಲ್ಲಿ, ರಾಗಗಳಲ್ಲಿ “ಎದೆ ತುಂಬಿಸಿ” ರಿಯಾಲಿಟಿ ಶೋಗೆ ಘನತೆ ತುಂಬಿದಾತ*!

*ದೌರ್ಬಲ್ಯಗಳಿಲ್ಲದ ಮನುಷ್ಯನಿಲ್ಲ! ಆದರೆ ಅದನ್ನೂ ಮೀರಿ, ಕನ್ನಡದ ಅಸ್ಮಿತೆಗೆ, ಭಾವಕ್ಕೆ, ಕನ್ನಡದ ತೊದಲುನುಡಿಗಳಲ್ಲಿ ಮಾತನಾಡುತ್ತಾ ಭಾಷೆಗೆ ಮೀರಿದ ಅಂತಃಕರಣ ತುಂಬಿ, ಹಾಡುವಾಗ ಮಾಂತ್ರಿಕನಂತೆ ಕನ್ನಡವನ್ನು ನಿಜದ ಅರ್ಥದಲ್ಲಿ ನುಡಿಸುತ್ತಿದ್ದಾತ*!

*ಹಾಡಿದ ಪ್ರತೀ ಹಾಡು ಕ್ರಿಯಾಶೀಲವಾಗಿ, ಥಿಯೇಟ್ರಿಕಲ್ ಗುಣಗಳಿಂದ ಕೇಳುಗರ ಮೈ ರೋಮಾಂಚನಗೊಳಿಸಿದ ಎಸ್.ಪಿ. ಸರ್ ತಣ್ಣಗೆ ಮಲಗಿದ್ದಾರೆ*.

*ನಿಜದ ಅರ್ಥದಲ್ಲಿ ನಾಡು, ಕನ್ನಡದ ರಾಯಭಾರಿ ಯೊಬ್ಬರನ್ನು ಕಳೆದುಕೊಂಡಿದೆ*.

*ನನ್ನಂತಹ ಮಹಾ ಎಡಬಿಡಂಗಿಯ ಮನದಲ್ಲಿ ಮೂಡಿದ ಅವರ ತುಳುಕುತ್ತಿದ್ದ ನಗು ಮಾತ್ರ ಕನ್ನಡದ ಹಾಡು ಕೇಳುವವರೆಗೂ ಮರು ದನಿಸುತ್ತಲೇ ಇರುತ್ತದೆ. ಗುರುಗಳೇ ನಿಮ್ಮ ಸಾರ್ಥಕ ಬದುಕೇ ಮಾದರಿಯಾಗಲಿ!*

*- ಮಂಡ್ಯ ರಮೇಶ್*

Copyright ©2024 . All Rights Reserved. privacy | terms Whatsapp: 9538193653 Email: hello@flixoye.com