ಆನಂದ್ ಆಡಿಯೋ ಮೂಲಕ ಹೊರಬಂತು “ರೂಪಾಯಿ” ಚಿತ್ರದ ಇಂಪಾದ ಹಾಡು.
ಆನಂದ್ ಆಡಿಯೋ ಮೂಲಕ ಹೊರಬಂತು “ರೂಪಾಯಿ” ಚಿತ್ರದ ಇಂಪಾದ ಹಾಡು.
ವಿಜಯ್ ಜಗದಾಲ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ “ರೂಪಾಯಿ” ಚಿತ್ರಕ್ಕಾಗಿ ಉತ್ಸವ್ ಗೊನ್ವಾರ್ ಬರೆದಿರುವ “ಕರೆಯದೆ” ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಆನಂದ್ ರಾಜ ವಿಕ್ರಮ್ ಸಂಗೀತ ನೀಡಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಸಂಸ್ಥೆಯ ಆನಂದ್ ಅವರು ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಅನನ್ಯ ಭಟ್ ಹಾಡಿರುವ ಈ ಇಂಪಾದ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಸಂತಸವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು.
ನಾನು ಮೂಲತಃ ರಂಗಭೂಮಿಯವನು. ನಟನಾಗಬೇಕೆಂಬ ಕನಸು ಹೊತ್ತು ಬಂದವನು. ನಿರ್ಮಾಪಕರಿಗೆ ನನ್ನ ಕನಸನ್ನು ತಿಳಿಸುವ ಸಲುವಾಗಿ ಮೂರುಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಪ್ರಮೋಷನಲ್ ವಿಡಿಯೋ ಮಾಡಿ ತೋರಿಸಿದೆ. ಈ ವಿಡಿಯೋ ಇಷ್ಟಪಟ್ಟ ಮಂಜುನಾಥ್ ಹಾಗೂ ಹರೀಶ್ ಹಣಹೂಡಲು ಮುಂದಾದರು. ಆನಂತರ ಚಿತ್ರ ಆರಂಭವಾಯಿತು. ಹೆಸರೇ ಹೇಳುವಂತೆ ಹಣದ ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸಾಗುತ್ತದೆ. ನಾನು, ಕೃಷಿ ತಾಪಂಡ, ಯಶ್ವಿಕ್, ಚಂದನ ರಾಘವೇಂದ್ರ ಹಾಗೂ ರಾಮ ಚಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೇವೆ. ನಾನೇ ನಿರ್ದೇಶನ ಮಾಡಿದ್ದೀನಿ. ಇಂದು ಹಾಡು ಬಿಡುಗಡೆಯಾಗಿದೆ. ನವೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಉತ್ತಮ ಚಿತ್ರ ಮಾಡಿದ್ದೀವಿ ಎಂಬ ಭರವಸೆಯಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ನಾಯಕ – ನಿರ್ದೇಶಕ ವಿಜಯ್ ಜಗದಾಲ್.
ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ಎಂದರು ಕೃಷಿ ತಾಪಂಡ. ಪ್ರಮುಖ ಪಾತ್ರಧಾರಿಗಳಾದ ಯಶ್ವಿಕ್, ರಾಮ್ ಚಂದನ್ ಹಾಗೂ ಚಂದನ ರಾಘವೇಂದ್ರ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಿರ್ಮಾಣದ ಬಗ್ಗೆ ಮಂಜುನಾಥ್ ಅವರು ಮಾತನಾಡಿದರು. ಸಂಗೀತದ ಬಗ್ಗೆ ಆನಂದ್ ರಾಜ್ ವಿಕ್ರಮ್, ಛಾಯಾಗ್ರಹಣದ ಬಗ್ಗೆ ಆರ್ ಡಿ ನಾಗಾರ್ಜುನ ಹಾಗೂ ಸಂಕಲನದ ಕುರಿತು ಶಿವರಾಜ್ ಮೇಹು ಮಾಹಿತಿ ನೀಡಿದರು. ಸಹ ನಿರ್ಮಾಪಕರಾದ ಯಶವಂತ ಶೆಟ್ಟಿ, ಗಿರೀಶ್ ಹಾಗೂ ಕಾರ್ಯಕಾರಿ ನಿರ್ಮಾಪಕ ಸುನಿದಿನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.