ಸಿನಿಪ್ರಿಯರ ಹೃದಯವನ್ನೇ ಕದ್ದ ರತ್ನನ್ ಪರ್ಪಂಚ
ಒಂದೊಳ್ಳೆ ಮನಮುಟ್ಟುವ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ ನಿರ್ದೇಶಕ ರೋಹಿತ್ ಪದಕಿ. ರಗಡ್ ಪಾತ್ರಗಳಲ್ಲೇ ಜನಮೆಚ್ಚುಗೆ ಗಳಿಸಿದ್ದ ಡಾಲಿ ಧನಂಜಯ್ ಅವರಿಗೆ ಸವಾಲೆನಿಸುವ ಮೃದು ಸ್ವಭಾವದ ಪಾತ್ರ ನೀಡುವ ಮೂಲಕ ಧನಂಜಯ್ ಅವರಿಂದ ನಟನಾ ಶಕ್ತಿಯನ್ನು ಹೊರಹೊಮ್ಮಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ರೋಹಿತ್.
ಹೇಳಿ ಕೇಳಿ ಉಮಾಶ್ರೀ ಅವರು ಯಾವ ಪಾತ್ರಕ್ಕೂ ಸೈ ಎನ್ನುವ ಅದ್ಭುತ ಕಲಾವಿದೆ. ಇದೀ ಕಥೆಯ ಉದ್ದಕ್ಕೂ ಉಮಾಶ್ರೀ ಅವರ ಪಾತ್ರವೇ ಹೈಲೈಟ್ ಆಗುತ್ತದದರೂ, ಅಲ್ಲಲ್ಲಿ ಅವರ ಬಂದು ಹೋಗುವ ದೃಶ್ಯಗಳನ್ನು ಸುಂದರವಾಗಿ ಪೋಣಿಸಿದ್ದಾರೆ ನಿರ್ದೇಶಕರು.
ತನ್ನ ತಾಯಿಯ ಅತಿಯಾದ ಪ್ರೀತಿಯಿಂದಲೋ ಅಥವಾ ತನ್ನ ಮಗನ ಮೇಲೇ ಆಕೆ ಇಟ್ಟಿರುವ ವಾತ್ಸಲ್ಯವೋ , ರತ್ನಾಕರ ಎನ್ನುವ ನಮ್ಮ ಕಥಾನಾಯಕನಿಗೆ ಸಹ್ಯವಾಗದೆ, ಆತ ಅ ಪ್ರೀತಿಯಿಂದ ದೂರ ಉಳಿಯಲು ಪ್ರಯತ್ನಿಸುವಾಗ ತನ್ನ ತಾಯಿ ನಿಜವಾದ ತಾಯಿ ಅಲ್ಲ ಎಂದು ತಿಳಿಯುತ್ತದೆ, ಆನಂತರ ತನ್ನ ನಿಜವಾದ ತಾಯಿಯ ಹುಡುಕಾಟದಲ್ಲಿ ಆತನ ಒದ್ದಾಟ, ನೋವು, ಎದುರಾಗುವ ಸನ್ನಿವೇಶಗಳು, ಆತನಿಗೆ ಎದುರಾಗುವ ದ್ವಂದ್ವಗಳು ಇವೆಲ್ಲವನ್ನೂ ನೀವು ಚಿತ್ರದಲ್ಲಿ ಕಾಣಬಹುದಾಗಿದೆ.
ಕಮರ್ಷಿಯಲ್ ಸಿನೇಮಾಗಳನ್ನೇ ನೋಡಿ ನೋಡಿ ಬೇಸತ್ತವರಿಗೆ ಇದೊಂದು ಪೈನ್ ಕಿಲ್ಲರ್ ಚಿತ್ರವಾಗಿ ಕಾಣಲಿದ್ದು, ಯಾವುದೇ ಫೈಟ್ ಗಳನ್ನು ಹೊಂದಿರದ, ಎಲ್ಲಾ ಭಾವನೆಗಳು ತುಂಬಿದ ಸುಂದರ ಚಿತ್ರ ರತ್ನನ್ ಪರ್ಪಂಚ, ಈಗಾಗಲೇ ಸಿನಿಪ್ರಿಯರ ಮನಸ್ಸಲ್ಲಿ ಅಚ್ಚಾಗಿ ಉಳಿಯಲಿದೆ ಎನ್ನುತ್ತಿದ್ದಾರೆ ಸ್ಯಾಂಡಲ್ ವುಡ್ ಪ್ರೇಕ್ಷಕರು.
ಕಮರ್ಷಿಯಲ್ ಸಿನಿಮಾಗಳಂತೆ ಸಿನಿಮಾದಲ್ಲಿ ನಾಯಕ ನಟನಿಗೆ ಉದ್ದುದ್ದ ಮಾಸ್ ಡೈಲಾಗ್ ಗಳು, ನಾಲ್ಕಾರು ಸಾಂಗ್ ಗಳು, ಪ್ರೇಮಕಥೆಗಳು, ಐಷಾರಾಮಿ ಸ್ಪಾಟ್ ಗಳು ಇರಬೇಕು ಎನ್ನುವ ಎಲ್ಲಾ ಆಲೋಚನೆಗೂ ಉಲ್ಟಾ ಹೊಡೆದಿದ್ದಾರೆ ನಿರ್ದೇಶಕರು. ಇಲ್ಲಿ ಅವ್ಯಾವುದೂ ಅಷ್ಟಾಗಿ ಕಾಣಸಿಗುವುದಿಲ್ಲ. ಭಾವನೆಗಳನ್ನ್ನೇ ಕೇಂದ್ರೀಕರಿಸಿದ ಚಿತ್ರವಾಗಿರುವುದರಿಂದ ನಾಯಕ ನಟನಿಂದ ಉತ್ತಮ ಭಾವನೆಗಳನ್ನು ಹೊರಗೆಢಹುವಲ್ಲಿ ಪ್ರಯತ್ನಿಸಲಾಗಿದೆ.
ಉಮಾಶ್ರೀಯವರ ಪಾತ್ರವಂತೂ ಈ ಚಿತ್ರದ ಮುಖ್ಯ ಹೈಲೈಟ್. ಆರಂಭದಲ್ಲಿ ಅವರ ಪಾತ್ರ ವಿಚಿತ್ರ ಅನಿಸುವಂತಹ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿರುವ ಉಮಾಶ್ರೀ, ಸನ್ನಿವೇಶಗಳು ಕಳೆದಂತೆ ಭಾವನಾತ್ಮಕವಾಗಿ ಬದಲಾಗುತ್ತ ಪ್ರೇಕ್ಷಕರ ಮನಸ್ಸಿನೊಳಕ್ಕೆ ಹೊಕ್ಕು ಭಾವನೆಗಳನ್ನೆಲ್ಲಾ ಜಾಲಾಡುತ್ತಾರೆ. ವಿಪರೀತದ ಭಾವಗಳಿಗಳಿಗೂ, ಅತಿ ನಗು ತರಿಸುವ ಹಾಸ್ಯ ಪಾತ್ರಕ್ಕೂ ಸೈ ಅನ್ನಿಸುವ ಉಮಾಶ್ರೀಯವರನ್ನು ಇತ್ತೀಚಿನ ದಿನಗಳಲ್ಲಿ ಚಿತ್ರದಲ್ಲಿ ನೋಡುವುದು ಅಪರೂಪವಾಗಿದ್ದರೂ, ರತ್ನನ್ ಪರ್ಪಂಚ ಚಿತ್ರ ಮೂಲಕ ಅವರ ಕಮ್ ಬ್ಯಾಕ್ ಬಹಳ ಕಳೆಗಟ್ಟಿದೆ ಎನ್ನಬಹುದಾಗಿದೆ.
ಇವರಲ್ಲದೆ, ಇಡೀ ಚಿತ್ರದಲ್ಲಿ ಕಲಾವಿದರ ಒಂದು ದಂಡೇ ಕಾಣಸಿಗುತ್ತದೆ. ಶ್ರುತಿ, ರವಿಶಂಕರ್,ಅಚ್ಯುತ್ ಕುಮಾರ್, ಅನು ಪ್ರಭಾಕರ್, ಪ್ರಮೋದ್, ರಾಜೇಶ್ ನಟರಂಗ ಹಾಗೂ ಅತಿಥಿ ಪಾತ್ರದಲ್ಲಿ ಬರುವ ಅಕ್ಕಯ್ ಪದ್ಮಶಾಲಿ ಇವರುಗಳ ನಟನೆಯಂತೂ ಅಮೋಘ. ಅಲ್ಲಲ್ಲಿ ಬಂದು ಹೋಗುವ ಪಾತ್ರಗಳಾದರೂ ತೂಕದ ವಿಚಾರಗಳನ್ನೇ ಪಾತ್ರಕ್ಕೆ ತುಂಬಿದ್ದಾರೆ ನಿರ್ದೇಶಕರು. ಪ್ರಮೋದ್ ಅವರ ಮೂಲಕ ಹಾಸ್ಯದ ಟಚ್ ನೀಡಿರುವ ನಿರ್ದೇಶಕರು, ಎರಡನೆಯ ಭಾಗವನ್ನು ಪ್ರಮೋದ್ ಮೂಲಕವೇ ಎತ್ತರಿಸುತ್ತಾರೆ.
ರತ್ನಾಕರನಿಗೆ ನಾಯಕಿಯಾಗಿ ರೆಬಾ ಮೊನಿಕಾ ಜಾನ್ ಅದ್ಭುತ್ ಪಾತ್ರ ನಿರ್ವಹಣೆ ಮಾಡಿದ್ದು, ನಾಯಕಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರ ಈ ಚಿತ್ರದ ನಟನೆಯಿಂದ ಕನ್ನಡದಲ್ಲಿ ಇನ್ನಷ್ಟು ಕಥಾಪ್ರಾಧಾನ್ಯ ಚಿತ್ರಗಳಿಗೆ ಆಯ್ಕೆಯಾಗಬಹುದು ಎನ್ನುವ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಪ್ರೇಕ್ಷಕರು.
ಕನ್ನಡಕ್ಕೆ ಉತ್ತಮ ಸಂಗೀತಗಳನ್ನು ಒದಗಿಸಿದ ಅಜನೀಶ್ ಲೋಕನಾಥ್ ಅವರ ಅತ್ಯುತ್ತಮ ಸಂಗೀತ ನಿರ್ದೇಶನ ಈ ಚಿತ್ರದ ಇನ್ನೊಂದು ಹೈಲೈಟ್. ಹೆಚ್ಚು ಹಾಡುಗಳಿಲ್ಲದ ಚಿತ್ರವಾದರೂ ಬ್ಯಾಕ್ ಗ್ರೌಂಡ್ ಸ್ಕೋರ್ ,ಮೂಲಕ ಚಿತ್ರದ ಭಾವನಾತ್ಮಕ ಸನ್ನಿವೇಶಗಳನ್ನು ಇನ್ನಷ್ಟು ಉತ್ತಮಗೊಳಿಸಿದ್ದಾರೆ ಅಜನೀಶ್. ಇದಲ್ಲದೆ ಸರಳ ಹಾಗೂ ಅತ್ಯುತ್ತಮ ಸಿನೇಮಾಟೋಗ್ರಫಿಯನ್ನೂ ಕಾಣಬಹುದಾಗಿದ್ದು, ಸಂಕಲನವೂ ಬಹಳ ಅಚ್ಚುಕಟ್ಟಾಗಿದೆ.
ಒಟ್ಟಾರೆ ಫ್ಯಾಮಿಲಿ ಒರಿಯೆಂಟೆಡ್, ಹಾಗೂ ವಿಷಯ ಪ್ರಧಾನ ಚಿತ್ರವಾಗಿಯೂ, ಯಾವುದೇ ಕಮರ್ಷಿಯಲ್ ಚಿತ್ರಗಳಿಗೆ ಸೆಡ್ಡು ಹೊಡೆದು, ಪ್ರೇಕ್ಷಕರ ಮನಸ್ಸನ್ನು ಗೆದ್ದು ಬೀಗುತ್ತಿರುವ ರತ್ನನ್ ಪರ್ಪಂಚವನ್ನು ನೀವು ಅಮೆಜಾನ್ ಪ್ರೈಮ್ ನಲ್ಲಿ ಆನಂದಿಸಬಹುದಾಗಿದೆ. ಥಿಯೇಟರ್ ನಲ್ಲಿ ಬಿಡುಗಡೆ ಮಾಡಿ ಎನ್ನುವ ಕೂಗು ಕೇಳಿಬರುತ್ತಿದ್ದು, ನಿರ್ದೇಶಕರ ಅಂಬೋಣ ಏನು ಎನ್ನುವುದನ್ನು ಕಾದುನೋಡಬೇಕಿದೆ.