ಕಾಮಿಡಿ ಕಮಾಲ್ ಮಾಡಲು ಬರುತ್ತಿದ್ದಾರೆ ರಣ್ವೀರ್ ಸಿಂಗ್, ರೋಹಿತ್ ಶೆಟ್ಟಿ…
ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಹಾಗೂ ನಟ ರಣ್ವೀರ್ ಸಿಂಗ್ ‘ಸಿಂಬ’ ಚಿತ್ರದ ನಂತರ ಈ ಜೋಡಿ ಮತ್ತೆ ಪುನಃ ಒಂದಾಗಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಕಾಮಿಡಿ ಸಿನಿಮಾ ಮೂಡಿ ಬರಲಿದ್ದು, ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಲು ಸಿದ್ಧವಾಗಿದೆ. ಈ ಸಿನಿಮಾಕ್ಕೆ ನಟ ವರುಣ್ ಶರ್ಮಾ ಕೂಡ ಎಂಟ್ರಿ ಕೊಟ್ಟಿದ್ದಾರೆ.
ರಣ್ವೀರ್ ಮತ್ತು ರೋಹಿತ್ ಕಾಂಬಿನೇಷನ್ ನ ಕಾಮಿಡಿ ಚಿತ್ರಕ್ಕೆ ‘ಸರ್ಕಸ್’ ಎಂದು ಟೈಟಲ್ ಇಡಲಾಗಿದ್ದು, ವಿಶೇಷ ಅಂದರೆ ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಣ್ವೀರ್ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣ್ವೀರ್ ಸಿಂಗ್ ಮಾತ್ರವಲ್ಲದೇ ವರುಣ್ ಶರ್ಮಾ ಸಹ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾಗೆ ನಾಯಕಿಯಾಗಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡೀಸ್ ಆಯ್ಕೆ ಆಗಿದ್ದಾರೆ. ಚಿತ್ರಕ್ಕೆ ಇನ್ನೊಬ್ಬ ನಾಯಕಿಯಾಗಿ ಕರ್ನಾಟಕದ ಕರಾವಳಿ ಸುಂದರಿ ಪೂಜಾ ಹೆಗ್ಡೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಕೇಳಿ ಬರುತ್ತಿದೆ. ಈಗಾಗಲೇ ಪೂಜಾ ಹೆಗ್ಡೆ ಹೌಸ್ ಫುಲ್-4 ಕಾಮಿಡಿ ಸಿನಿಮಾದಲ್ಲಿ ನಟಿಸಿರುವುದರಿಂದ ಇನ್ನೊಂದು ಕಾಮಿಡಿ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಣ್ವೀರ್ ಸಿಂಗ್ ಜೊತೆ ನಟಿಸುತ್ತಿರುವ ಪೂಜಾ ಹೆಗ್ಡೆ ಇಲ್ಲಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ನೋಡಬೇಕಷ್ಟೇ.
ಇನ್ನೂ ‘ಸರ್ಕಸ್’ ಬಾಲಿವುಡ್ ನಲ್ಲಿ ಈ ಹಿಂದೆ ರಿಲೀಸ್ ಆಗಿದ್ದ ‘ಅಂಗೂರ್’ ಸಿನಿಮಾದ ರಿಮೇಕ್ ಆಗಿದೆ. 1982ರಲ್ಲಿ ಬಂದ ‘ಅಂಗೂರ್’ ಸಿನಿಮಾದಲ್ಲಿ ಸಂಜೀವ್ ಕುಮಾರ್, ದೇವನ್ ಶರ್ಮಾ, ಮೌಶ್ಮಿ ಚಟರ್ಜಿ ಅರುಣಾ ಇರಾನಿ ನಟಿಸಿದ್ದರು. ಈಗ ಅದೇ ಸಿನಿಮಾವನ್ನು ‘ಸರ್ಕಸ್’ ಹೆಸರಿನಲ್ಲಿ ರಿಮೇಕ್ ಮಾಡುತ್ತಿದ್ದಾರೆ ರೋಹಿತ್ ಶೆಟ್ಟಿ.