‘ರಂಗ್ ಬಿರಂಗಿ’ ಫೆಬ್ರುವರಿ 23 ರಾಜ್ಯದಾದ್ಯಂತ ಬಿಡುಗಡೆ
ಹುಚ್ಚು ಕುದುರೆ ಬೆನ್ನೇರಿ ಹೋಗಬೇಡಿ ಎಂಬ ಸಂದೇಶ ನೀಡಲು ಬರುತ್ತಿದೆ ರಂಗ್ಬಿರಂಗಿ ಚಿತ್ರತಂಡ. ನಾಲ್ವರು ಹುಡುಗರು ಮತ್ತು ಒಬ್ಬ ಹುಡುಗಿಯ ನಡುವೆ ನಡೆಯುವ ರೋಮಾಂಚನ ಕಥೆಗೆ ಚಿತ್ರಕಥೆಯ ರೂಪ ಕೊಟ್ಟು ನಿರ್ದೇಶಕ ಮಲ್ಲಿಕಾರ್ಜುನ್ ಹೆಣೆದಿರುವ ಈ ಚಿತ್ರಕ್ಕೆ ಮಲ್ಲಿಕಾರ್ಜುನ ಮುತ್ತಲಗೇರಿ ಅವರು ಬಂಡವಾಳ ಹೂಡಿದ್ದಾರೆ.
ಹಿಂದೆ ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವಾಗ ಗೆಳೆಯರ ಬದುಕಿನಲ್ಲಿ ನಡೆದಂಥ ನೈಜ ಘಟನೆಗಳನ್ನು ಇಟ್ಟುಕೊಂಡು ಕಥೆ ಮಾಡಿರುವ ರಂಗ್ಬಿರಂಗಿ ಚಿತ್ರವು ಕಿರಿಕ್ಪಾರ್ಟಿಯಂತೆ ಈ ಚಿತ್ರವು ಕೂಡ ಗೆಲ್ಲುವ ಎಲ್ಲ ಲಕ್ಷಣಗಳಿವೆ ಎಂಬ ನಂಬಿಕೆ ಕೂಡ ಚಿತ್ರತಂಡಕ್ಕಿದೆಯಂತೆ. ಮದರಂಗಿ ಎಂಬ ಚಿತ್ರದಿಂದ ಸ್ಯಾಂಡಲ್ವುಡ್ಗೆ ಚಿರಪರಿಚಿತರಾಗಿರುವ ನಿರ್ದೇಶಕ ಮಲ್ಲಿಕಾರ್ಜುನ್ ಈ ಚಿತ್ರಕ್ಕಾಗಿ ಮೂರು ವರ್ಷಗಳ ಕಾಲ ಶ್ರಮಪಟ್ಟು ಚಿತ್ರಕಥೆಯನ್ನು ಹೆಣೆದಿದ್ದು, ನಿರ್ಮಾಪಕರ ಹುಡುಕಾಟಕ್ಕಾಗಿಯೇ ಒಂದು ವರ್ಷ ಹಾಗೂ ಚಿತ್ರೀಕರಣಕ್ಕೆ ಒಂದು ವರ್ಷ ತೆಗೆದುಕೊಂಡು ಈಗ ರಂಗ್ ರಂಗಾಗಿ ಪ್ರೇಕ್ಷಕರ ಮುಂದೆ ಫೆಬ್ರುವರಿ 23 ರಂದು ಬರುತ್ತಿದ್ದಾರೆ. ಒಂದೇ ಕಾಲೇಜಿನಲ್ಲಿ ಓದುವ ನಾಲ್ವರು ಹುಡುಗರು ಅದೇ ಕಾಲೇಜಿನ ಹುಡುಗಿಯ ಬಗ್ಗೆ ನಾನಾ ರೀತಿಯ ಕನಸುಗಳನ್ನು ಹೊತ್ತು ಹುಚ್ಚು ಕುದುರೆಯ ಬೆನ್ನೇರಿ ಹೊರಡುತ್ತಾರೆ.
ಆ ನಾಲ್ವರಲ್ಲಿ ನಾಯಕಿ ಯಾರಿಗೆ ದೊರೆಯುತ್ತಾಳೇ ಎಂಬುದೇ ಚಿತ್ರದ ಸ್ವಾರಸ್ಯವಂತೆ. ಜೊತೆಗೆ ಹದಿಹರೆಯದ ವಯಸಿನ ಹುಡುಗ-ಹುಡುಗಿಯರ ಜೀವನದಲ್ಲಿ ನಡೆಯುವ ಸಾಮಾನ್ಯ ಘಟನೆಗಳನ್ನೇ ಆಧರಿಸಿದ ಒಂದು ಸರಳವಾದ ಕಥೆಯನ್ನು ರಂಗ್ಬಿರಂಗಿ ಚಿತ್ರದಲ್ಲಿ ಹೇಳಿದ್ದೇವೆ ಎನ್ನುತ್ತಾರೆ ನಿರ್ದೇಶಕ ಮಲ್ಲಿಕಾರ್ಜುನ್. ಮಂಡ್ಯದ ಹುಡುಗನಾಗಿ ಶ್ರೀಜಿತ್, ನಿರುದ್ಯೋಗಿಯಾಗಿ ಪಂಚಾಕ್ಷರಿ, ಕಾಲೇಜ್ ವಿದ್ಯಾರ್ಥಿಯಾಗಿ ಚರಣ್, ಮೆಕ್ಯಾನಿಕ್ ಆಗಿ ಶ್ರೇಯಸ್ ಆಭಿನಯಿಸಿದ್ದಾರೆ. ತನ್ವಿರಾವ್ ನಾಯಕಿ. ಜಯಂತ್ಕಾಯ್ಕಿಣಿ ಮತ್ತು ಮನೋಜ್ ಬರೆದಿರುವ ಹಾಡುಗಳಿಗೆ ಮಣಿಕಾಂತ್ಕದ್ರಿ ಸಂಗೀತ ನೀಡಿದ್ದಾರೆ. ಬೆಂಗಳೂರು, ಮಂಗಳೂರು, ಗೋವಾದಲ್ಲಿ ಚಿತ್ರೀಕರಣ ಆಗಿದೆ. ಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಛಾಯಾಗ್ರಹಣ ನಂದಕಿಶೋರ್ ಅವರದು. ಪ್ರಶಾಂತ್ಸಿದ್ಧಿ, ರಾಕ್ಲೈನ್ ಸುಧಾಕರ್, ಬಾಬುಹಿರಣ್ಣಯ್ಯ, ಸವಿತಾಕೃಷ್ಣಮೂರ್ತಿ ಈ ಚಿತ್ರದ ಇತರ ಪಾತ್ರಧಾರಿಗಳು.
ಹೊಸ ನಿರ್ಮಾಪಕರಾಗಿರುವ ಶಾಂತಕುಮಾರ ರಾಮನಗರ ಅವರಿಗೆ ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿ ಹೇಳಿದ ಕಥೆ ಮತ್ತು ಹೊಸತನದ ನಿರೂಪಣೆ ಇಷ್ಟವಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿ ಬಂಡವಾಳ ಹೂಡಿದ್ದಾರೆ. ಮದರಂಗಿಯಲ್ಲೇ ಬಣ್ಣಗಳ ಚಿತ್ತಾರ ಮೂಡಿಸಿದ್ದ ಮಲ್ಲಿಕಾರ್ಜುನ್ ಅವರ ರಂಗ್ಬಿರಂಗಿ ಚಿತ್ರವು ಯುವ ಸಮೂಹಕ್ಕೆ ಒಂದು ಸಂದೇಶ ನೀಡುವಂತಾಗಲಿ. ಈ ಚಿತ್ರವನ್ನು ಆರ್ಯಾ-ಮೌರ್ಯ ಗೌಡ್ರು ಮೂಲಕ ರಾಜ್ಯದಾದ್ಯಂತ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.