ರೈತನ ಬದುಕು ಜೊತೆಗೆ ನವಿರಾದ ಪ್ರೇಮಕಥೆಯ ‘ರಣಹೇಡಿ’
ಈ ಹಿಂದೆ ‘ಡೇಸ್ ಆಫ್ ಬೋರಾಫುರ’ , ‘ತಾರಕಾಸುರ’ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವವಿರುವ ಮನು.ಕೆ ಶೆಟ್ಟಿಹಳ್ಳಿ ಯವರು ‘ರಣಹೇಡಿ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ, ಸಾಹಿತಿವನ್ನು ಮಾಡಿದ್ದಾರೆ. ‘ಪ್ರಯಾಣಿಕರ ಗಮನಕ್ಕೆ’ ಚಿತ್ರ ನಿರ್ಮಾಣ ಮಾಡಿದ ನಿರ್ಮಾಪಕ ಸುರೇಶ್ ರವರು ತಮ್ಮ ಸೃಷ್ಟಿ ಎಂಟರ್ ಪ್ರೈಸಸ್ ಮೂಲಕ ‘ರಣಹೇಡಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ರಣಹೇಡಿ’ ಇದು ರೈತನ ಬದುಕು-ಬವಣೆಗಳನ್ನು ಕಟ್ಟಿಕೊಂಡಿರುವ ಚಿತ್ರ. ‘ರಣಹೇಡಿ’ ಟೈಟಲ್ ಗೂ ರೈತನಿಗೂ ಏನು ಸಂಬಂಧ ಎಂದು ಯೋಚನೆಗಳು ಬರುವುದು ಸಹಜ ಅದರೆ ಚಿತ್ರದ ಕಥೆ ಹೇಳುವಂತೆ ಚಿತ್ರದ ನಾಯಕ ರೈತ ರಣಹೇಡಿಯಲ್ಲ. ಅವನು ನಿಜವಾದ ಯೋಧ ಎನ್ನುವ ಸಂದೇಶವನ್ನು ಸಾರುವಂತಹ ಚಿತ್ರ ರಣಹೇಡಿ. ‘ರಣಹೇಡಿ’ ಶೀರ್ಷಿಕೆಯ ಅಡಿಬರಹದಲ್ಲಿ ಬಲರಾಮನ ಕಡೆ ನೋಡಿ ಎನ್ನುವ ಈ ಚಿತ್ರದಲ್ಲಿ ರೈತನ ಬದುಕು ಅದರ ಜೊತೆ ರಗಡ್ ಲವ್ ಸ್ಟೋರಿ, ನವಿರಾದ ಸಂಸಾರದ ಬಾಂಧವ್ಯ ವನ್ನು ಹೊಂದಿದೆ. ರಣಹೇಡಿ ನವೆಂಬರ್ 29ರಂದು ತೆರೆಗೆ ಬರಲಿದೆ.
ಪೋಷಕ ಪಾತ್ರದ ಮೂಲಕ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಮಂಡ್ಯದ ಬಸುಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕರ್ಣಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿರುವ ಬಸುಕುಮಾರ್ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
‘ಬಡ್ಡಿ ಮಗನ್ ಲೈಫ್’, ‘ರವಿ ಹಿಸ್ಟರಿ’ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಳ್ಳಾರಿಯಿಂದ ಮಂಡ್ಯಕ್ಕೆ ಕಬ್ಬು ಕಡಿಯಲು ಬಂದ ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ವಿ.ಮನೋಹರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಕುಮಾರ್ ಗೌಡ ಛಾಯಾಗ್ರಹಣ ಮಾಡಿದ್ದು, ನಾಗೇಂದ್ರ ಅರಸ್ ಸಂಕಲನ ಮಾಡಿದ್ದಾರೆ. ಜಾನಪದ ಗಾಯಕ ಮಳವಳ್ಳಿಯ ನಾಗೇಂದ್ರ, ರಘಪಾಂಡೆ, ಸತೀಶ್, ಅಚ್ಯುತ್ಕುಮಾರ್, ಆಶಾಲತಾ, ಬೇಬಿ ಚೈತನ್ಯ ತಾರಾಗಣದಲ್ಲಿದ್ದಾರೆ.