ಕನ್ನಡದಲ್ಲೂ ತೆರೆ ಕಾಣುತ್ತಿದೆ ರಾಮ್ ಗೋಪಾಲ್ ವರ್ಮರವರ ‘ಮರ್ಡರ್’
ಲಾಕ್ಡೌನ್ ಟೈಮ್ ನಲ್ಲಿ ಚಿತ್ರರಂಗವೇ ಕೆಲಸವಿಲ್ಲದೆ ಕೂತಿತ್ತು. ಆ ಸಮಯದಲ್ಲಿ ಕೆಲವು ಸಿನಿಮಾಗಳನ್ನು ಮಾಡಿ ತಮ್ಮದೇ ಓಟಿಟಿ ಪ್ಲಾಟ್ಫಾರ್ಮ್ ಮಾಡಿಕೊಂಡ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮ ಅಲ್ಲೇ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಿದ್ದರು. ಈಗ ‘ಮರ್ಡರ್’ ಅನ್ನೋ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಟ್ರೇಲರ್ ನಿಂದಲೇ ಗಮನಸೆಳೆದಿರುವ ಈ ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಆರ್ ಜಿವಿ. ಕೆಲವು ವರ್ಷಗಳ ಹಿಂದೆ ಬಾಲಿವುಡ್ ನಲ್ಲಿ ಮರ್ಡರ್ ಹೆಸರಿನಲ್ಲಿ ಬಂದ ಸಿನಿಮಾ ಸಾಕಷ್ಟು ಹೆಸರು ಮಾಡಿತ್ತು. ಇದು ಮಲ್ಲಿಕಾ ಶೆರಾವತ್ ಹಾಗೂ ಇಮ್ರಾನ್ ಹಶ್ಮಿ ಗೆ ಸ್ಟಾರ್ ಪಟ್ಟ ಕೊಡಿಸಿತ್ತು.
ಇದು ಕನ್ನಡದಲ್ಲಿ ‘ಗಂಡ-ಹೆಂಡತಿ’ ಸಿನಿಮಾವಾಗಿ ರಿಮೇಕ್ ಆಯಿತು. ಈಗ ಅದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ‘ಮರ್ಡರ್’ ಇದು ತೆಲುಗಿನಲ್ಲಿ ನಿರ್ಮಾಣವಾಗಿ ಕನ್ನಡದಲ್ಲಿ ಡಬ್ ಆಗ್ತಿರೋ ಸಿನಿಮಾ. ತೆಲುಗಿನ ಈ ಸಿನಿಮಾ ಕನ್ನಡ, ತಮಿಳು ಸೇರಿ ನಾಲ್ಕು ಭಾಷೆಗಳಲ್ಲಿ ಡಿಸೆಂಬರ್ 24 ರಂದು ತೆರೆಗೆ ಬರಲಿದೆ. ಕನ್ನಡದಲ್ಲಿ ಇದನ್ನು ಲಕ್ಷ್ಮೀವೃಷಾಧಿ ಪ್ರೊಡಕ್ಷನ್ ಮೂಲಕ ನವರಸನ್ ಬಿಡುಗಡೆ ಮಾಡುತ್ತಿದ್ದಾರೆ. ನೈಜ ಘಟನೆಯಾಧರಿಸಿದ ಸಿನಿಮಾ ‘ಮರ್ಡರ್’. ತಂದೆ ಮಾತನ್ನು ಧಿಕ್ಕರಿಸಿ ಮಗಳು ಬೇರೆ ಮದುವೆಯಾಗುತ್ತಾಳೆ. ಅನಂತರ ಮಗಳ ಗಂಡನನ್ನು ತಂದೆಯೇ ಕೊಲೆ ಮಾಡಿಸುತ್ತಾನೆ.
ಈ ಅಂಶವನ್ನೇ ಇಟ್ಟು ಸಿನಿಮಾ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮ. ಕ್ರೈಂ ಮಿಸ್ಟರಿ ಮರ್ಡರ್ ಸಿನಿಮಾಕ್ಕೆ ಡಿ.ಎಸ್.ಆರ್ ಸಂಗೀತ ನೀಡಿದ್ದಾರೆ. ಜಗದೀಶ್ ಚೀಕಟಿ ಛಾಯಾಗ್ರಹಣ ಮಾಡಿದ್ದು, ಶ್ರೀಕಾಂತ್ ಪಟ್ನಾಯಕ್ ಅವರ ಸಂಕಲನ ಚಿತ್ರಕ್ಕಿದೆ. ನಟ್ಟಿ ಕ್ರಾಂತಿ ನಟ್ಟಿ ಕರುಣ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮರ್ಡರ್ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಆರ್ ಜಿವಿ ಸಿನಿಮಾದ ಬಗ್ಗೆ ಎಲ್ಲರಲ್ಲೂ ಕುತೂಹಲ ಇದ್ದೆ ಇದೆ. ಈ ಸಿನಿಮಾದಲ್ಲಿ ಶ್ರೀಕಾಂತ್ ಐಯ್ಯಂಗಾರ್, ಸಾಹಿತಿ, ಗಾಯತ್ರಿ ಭಾರ್ಗವಿ ಮುಂತಾದವರು ನಟಿಸಿದ್ದಾರೆ.