ರಕ್ಷಿತ್‌ ಶೆಟ್ಟಿ ನಟನೆಯ ಚಾರ್ಲಿಗೆ UFO ಬಲ; ಹಿಂದಿಯಲ್ಲಿ ವಿತರಣೆ ಮಾಡಲಿದೆ ಈ ಸಂಸ್ಥೆ

Published on

592 Views

ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಇನ್ನೇನು ಜೂನ್‌ 10ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಅದಕ್ಕೂ ಮುನ್ನ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿರುವ ತಂಡ, ನಿತ್ಯ ಒಂದಲ್ಲ ಒಂದು ಅಪ್‌ಡೇಟ್‌ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಇದೀಗ ಹಿಂದಿಯಲ್ಲಿ ಈ ಚಿತ್ರವನ್ನು ವಿತರಣೆ ಮಾಡುವವರು ಯಾರು ಎಂಬ ವಿಚಾರವನ್ನು ಹೊರಗೆಡವಿದೆ.

ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗ ಬರುತ್ತಿರುವ ಈ ಚಿತ್ರ ಈಗಾಗಲೇ ಬೇರೆ ಬೇರೆ ಭಾಷಿಕ ಆಡಿಯನ್ಸ್‌ ಅನ್ನು ಟೀಸರ್‌ ಮೂಲಕ ಸೆಳೆದಿದೆ. ಅದರಂತೆ ಅಲ್ಲಿನ ಸ್ಟಾರ್‌ ನಟರೂ ಈ ಸಿನಿಮಾ ನೋಡಿ ಮೆಚ್ಚಿ ಅರ್ಪಿಸಲು ಮುಂದೆ ಬಂದಿದ್ದಾರೆ.

ತೆಲುಗಿನಲ್ಲಿ ನಟ ರಾಣಾ ದಗ್ಗುಬಾಟಿ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು, ಮಲಯಾಳಂನಲ್ಲಿ ನಟ, ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ವಿತರಣೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಅದೇ ರೀತಿ ಹಿಂದಿಯಲ್ಲಿ ಖ್ಯಾತ ಸಂಸ್ಥೆ ಯೂಎಫ್‌ಒ (UFO) ವಿತರಣೆ ಮಾಡಲಿದೆ.

ಶ್ವಾನದ ಹಿನ್ನೆಲೆಯಲ್ಲಿಯೇ ಸಾಗುವ ಈ ಸಿನಿಮಾದಲ್ಲಿ ನಾಯಕನಾಗಿ ರಕ್ಷಿತ್‌ ಶೆಟ್ಟಿ ನಟಿಸಿದರೆ, ರಾಜ್‌ ಬಿ ಶೆಟ್ಟಿ, ದಾನಿಶ್‌ ಸೇಠ್‌, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ಸೇರಿ ಹಲವರಿದ್ದಾರೆ. ಕಿರಣ್‌ ರಾಜ್‌ ಈ ಚಿತ್ರ ನಿರ್ದೇಶಿಸಿದರೆ, ರಕ್ಷಿತ್‌ ಶೆಟ್ಟಿ ತಮ್ಮ ಹೋಮ್‌ ಬ್ಯಾನರ್‌ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ.

ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಸಂಕಲನ, ಪ್ರಗತಿ ರಿಷಬ್‌ ಶೆಟ್ಟಿ ಅವರ ವಸ್ತ್ರ ವಿನ್ಯಾಸ, ವಿಕ್ರಮ್‌ ಮೋರ್‌ ಅವರ ಸಾಹಸ ಈ ಚಿತ್ರಕ್ಕಿದೆ.

ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್‌ ಉಪಾಧ್ಯ ಸಂಭಾಷಣೆ ಒದಗಿಸಿದ್ದಾರೆ. ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್‌, ಕಾರ್ತಿಕಾ ನೈನನ್‌ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್‌ ಡಿಸೋಜಾ, ಸಾಯೇಶ್‌ ಪೈ ಪನಂಡಿಕರ್ ಸಾಹಿತ್ಯ ಒದಗಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com