ಜನವರಿ ಹತ್ತೊಂಬತ್ತಕ್ಕೆ ರಾಜು ಕನ್ನಡ ಮೀಡಿಯಂ ಆಗಮನ!
ಗುರುನಂದನ್ ನಟಿಸಿರುವ ರಾಜು ಕನ್ನಡ ಮೀಡಿಯಂ ಚಿತ್ರ ಪರಾಕಾಷ್ಠೆಯ ನಿರೀಕ್ಷೆಗಳೊಂದಿಗೆ ಇದೇ ಜನವರಿ 19ರಂದು ಬಿಡುಗಡೆಯಾಗುತ್ತಿದೆ. ಒಂದು ಚಿತ್ರ ತನ್ನೊಳಗಿನ ಕಂಟೆಂಟ್, ಕ್ರಿಯೇಟಿವಿಟಿಗಳ ಮೂಲಕವೇ ಸದ್ದು ಮಾಡೋ ಸಕಾರಾತ್ಮಕ ಪ್ರಕ್ರಿಯೆಗೆ ಸಾಕ್ಷಿಯಂತಿರೋ ಈ ಚಿತ್ರ ಚಿತ್ರೀಕರಣದ ಹಂತದಲ್ಲೆ ನಾನಾ ದಾಖಲೆಗಳಿಗೆ ಕಾರಣವಾಗಿದೆ. ಸುದೀಪ್ ಒಂದು ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋದೂ ಸೇರಿದಂತೆ ನಾನಾ ಆಕರ್ಷಣೆಗಳನ್ನು ಹೊಂದಿರೋ ಈ ಚಿತ್ರವನ್ನು ಕರ್ನಾಟಕ ಮಾತ್ರವಲ್ಲದೇ ಪಕ್ಕದ ರಾಜ್ಯಗಳು ಹಾಗೂ ವಿದೇಶಗಳಲ್ಲೂ ತೆರೆಕಾಣಿಸಲು ನಿರ್ಮಾಪಕ ಕೆ.ಎ.ಸುರೇಶ್ ಯೋಜನೆ ಹಾಕಿಕೊಂಡಿದ್ದಾರಂತೆ!
ಸುದೀಪ್ ಈ ಚಿತ್ರದಲ್ಲಿ ನಟಿಸಿರೋ ಸುಂದರವಾದ ಸ್ಟಿಲ್ಲುಗಳು ಜಾಹೀರಾಗಿದ್ದೇ ರಾಜು ಕನ್ನಡ ಮೀಡಿಯಂ ಚಿತ್ರ ಖದರ್ರೇ ಬೇರೆಯಾಗಿ ಹೋಗಿತ್ತು. ಮಧ್ಯಂತರದ ನಂತರ ನಿರಂತರವಾಗಿ ಸಾಗೋ ಪಾತ್ರದಲ್ಲಿ ಕಾಣಿಸಿಕೊಂಡಿರೋ ಸುದೀಪ್ ಅವರೇ ಈ ಚಿತ್ರದ ಪ್ರಧಾನ ಆಕರ್ಷಣೆಯಾಗಿ ಬಿಂಬಿತರಾಗಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಇನ್ನು ಟೈಟಲ್ ಹೇಳುವಂತೆ ಕನ್ನಡದ ಬಗ್ಗೆ ಒಂದಷ್ಟು ಅಂಶಗಳು ಚಿತ್ರದಲ್ಲಿವೆ. ಅದರ ಸಣ್ಣ ಝಲಕ್ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹರಿಬಿಟ್ಟ ಟೀಸರ್‍ನಲ್ಲಿವೆ. ಇವೆರಡೂ ವಿಷಯಗಳು ರಾಜು ಕನ್ನಡ ಮೀಡಿಯಂಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ. ಹಾಗೆಯೇ ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ ಸಿನಿಮಾಗಳನ್ನು ನಿರ್ಮಿಸಿ ಸತತವಾಗಿ ಯಶಸ್ಸು ಕಂಡಿರುವ ನಿರ್ಮಾಣ ಸಂಸ್ಥೆ ಒಂದೆಡೆಯಾದರೆ, ಫಸ್ಟ್ ರ್ಯಾಂಕ್ ರಾಜು ಎಂಬ ಸಕ್ಸಸ್ ಬಳಿಕ ಅದೇ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕ ಸೇರಿದಂತೆ ಬಹುತೇಕ ಅದೇ ತಂಡ ಈ ಚಿತ್ರಕ್ಕೂ ಕೆಲಸ ಮಾಡಿರುವುದು ಪ್ರಾರಂಭದಿಂದಲೇ ಬೇಡಿಕೆ ಹೆಚ್ಚಿಸಿಕೊಂಡಿದೆ. ಗುರುನಂದನ್ ಜೋಡಿಯಾಗಿ ಅವಂತಿಕಾ ಶೆಟ್ಟಿ ಹಾಗೂ ಆಶಿಕಾ ರಂಗನಾಥ್ ಇದ್ದಾರೆ ಎಂಬುದಷ್ಟೇ ಬಹುತೇಕರಿಗೆ ಗೊತ್ತಿರುವ ವಿಷಯ. ಆದರೆ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯೂ ಇದ್ದಾರೆ. ರಷ್ಯಾ ಮೂಲದ ಮಾಡೆಲ್ ಏಂಜಲೀನಾ ಗುರು ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ. ಈಕೆಯ ಭಾಗದ ಚಿತ್ರೀಕರಣ ವಿದೇಶದಲ್ಲೇ ಆಗಿರುವುದು ವಿಶೇಷ.
ರಾಜು ಕನ್ನಡ ಮೀಡಿಯಂ ಚಿತ್ರದ ದಾಖಲೆಗಳೂ ಕೂಡಾ ಗಮನ ಸೆಳೆಯುವಂತಿವೆ. ಈಗಾಗಲೇ ಇದರಟ್ರೈಲರ್ ಐವತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಇದು ಖಂಡಿತಾ ಕನ್ನಡ ಚಿತ್ರಗಖಳ ಮಟ್ಟಿಗೆ ದೊಡ್ಡ ದಾಖಲೆ. ಟೀಸರ್, ಫಸ್ಟ್ ಲುಕ್, ಹಾಡು ಸೇರಿದಂತೆ ಚಿತ್ರ ತಂಡದ ಪ್ರತೀ ಕೆಲಸ ಕಾರ್ಯಗಳಿಗೂ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆ ಕಾರಣದಿಂದಲೇ ಪ್ರೇಕ್ಷಕರೂ ಕೂಡಾ ಈ ಚಿತ್ರಕ್ಕಾಗಿ ಕಾತರದಿಂದ ಕಾಯಲಾರಂಭಿಸಿದ್ದಾರೆ. ಕಿರಣ್ ಸಂಗೀತ ಸಂಯೋಜಿಸಿರುವ ಹಾಡುಗಳು ಹಿಟ್‍ಲಿಸ್ಟ್ ಸೇರಿಕೊಂಡಿವೆ. ಇಂಥಾ ಹಲವಾರು ಕಾರಣಗಳಿಂದ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿರೋ ರಾಜು ಕನ್ನಡ ಮೀಡಿಯಂ ವಾರದೊಪ್ಪತ್ತಿನಲ್ಲೇ ತೆರೆ ಕಾಣಲಿದೆ.