ದಮಯಂತಿ ಪಾತ್ರದ ಮೂಲಕ ಗಮನ ಸೆಳೆದಿರುವ ರಾಧಿಕಾ

Published on

322 Views

ಬಹಳ ದಿನಗಳ ನಂತರ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಿದ್ದು, ‘ದಮಯಂತಿ’ ಚಿತ್ರದ ಮೂಲಕ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದಮಯಂತಿ’ ಚಿತ್ರದ ಟ್ರೈಲರ್​ ಲಹರಿ ಯೂಟ್ಯೂಬ್​ ಚಾನೆಲ್​ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯನ್ನು ಪಡೆದಿದ್ದ ರಾಧಿಕಾ ಕುಮಾರಸ್ವಾಮಿ ಯವರು ಮದುವೆ‌ ನಂತರ ಲಕ್ಕಿ, ಸ್ವೀಟಿ ಚಿತ್ರದಲ್ಲಿ ನಟಿಸಿದ್ದರು. ಈಗ ಬಹಳ ದಿನಗಳ ನಂತರ ದಮಯಂತಿ ಮೂಲಕ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟ್ರೈಲರ್​ ನಲ್ಲಿ ರಾಧಿಕಾ ಗ್ಲಾಮರಸ್​ ಲುಕ್​ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಶತಮಾನದ ಹಿಂದಿನ ಮಹಾರಾಣಿಯಾಗಿಯೂ ಅಬ್ಬರಿಸಿದ್ದಾರೆ. ರಾಜನ ಮಗಳಾದ ರಾಧಿಕಾ ಆತನ ನಿಧನದ ನಂತರ ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥಾನಕ ಒಳಗೊಂಡಿದೆ. ಟ್ರೈಲರ್​ ನಲ್ಲಿ ರಾಧಿಕಾ ಪ್ರಾರಂಭದಲ್ಲಿ ಮಹಾರಾಣಿಯಾಗಿ ಕಾರಿನಿಂದ ಇಳಿಯುತ್ತಾಳೆ. ನಂತರದ ದೃಶ್ಯಗಳಲ್ಲಿ ಫ್ಯಾಂಟಸಿಯ ಅಂಶಗಳಿವೆ. ಮಹಾರಾಣಿ ನಿಧನದ ನಂತರ ಆಕೆ ಆತ್ಮವಾಗುತ್ತಾಳೆ. ಆತ್ಮವಾಗಿ ರಾಧಿಕಾ ರಾಣಿಯ ಪೋಷಾಕಿನಲ್ಲಿ ಅಬ್ಬರಿಸುತ್ತಾರೆ. ಆಕೆಯನ್ನು ಬಂಧಿಸುವ ಪ್ರಯತ್ನಗಳನ್ನೂ ಟ್ರೈಲರ್​ ನಲ್ಲಿ ಕಾಣಬಹುದು. ಟ್ರೈಲರ್​ ನೋಡಿದರೆ ಚಿತ್ರ ಅರುಂಧತಿ ಕಥೆಯನ್ನು ಹೋಲುತ್ತದೆ ಎಂಬ ಅನುಮಾನ ಬರುತ್ತದೆ. ಒಟ್ಟಿನಲ್ಲಿ ರಾಧಿಕಾ ಹೊಸ ಪಾತ್ರಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

ಟ್ರೈಲರ್​ ನಲ್ಲಿ ಆಧುನಿಕ ಯುವತಿ ಮತ್ತು ರಾಣಿಯಾಗಿ ರಾಧಿಕಾ ಗಮನ ಸೆಳೆದಿದ್ದಾರೆ. ಚಿತ್ರದ ಮೂಲಕ ರಾಧಿಕಾ ಮತ್ತೊಂದು ಇನ್ನಿಂಗ್ಸ್​ ಆರಂಭಿಸಬಹುದು ಎಂದು ಹೇಳಲಾಗುತ್ತಿದೆ. ರಾಧಿಕಾರ ಈ ಪ್ರಯತ್ನವನ್ನು ಪ್ರೇಕ್ಷಕ ಎಷ್ಟರ ಮಟ್ಟಿಗೆ ಸ್ವೀಕರಿಸಲಿದ್ದಾರೆ ಎಂದು ನೋಡಬೇಕಿದೆ.
ಚಿತ್ರದ ಮಲಯಾಳಂ ಆವೃತ್ತಿಯ ಪೋಸ್ಟರ್​ ಗುರುವಾರ, ಅ.17 ರಂದು ಬಿಡುಗಡೆಯಾಗಿತ್ತು. ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ ಲಾಲ್​ ಪೋಸ್ಟರ್​ ಬಿಡುಗಡೆಗೊಳಿಸಿದ್ದರು. ಅ.7 ರಂದು ನಟಿ ರಾಧಿಕಾರ ದಮಯಂತಿ ಚಿತ್ರದ 2ನೇ ಲುಕ್​ ಬಿಡುಗಡೆಯಾಗಿತ್ತು. ದಸರಾ ಹಿನ್ನೆಲೆಯಲ್ಲಿ ಚಿತ್ರದ ಸೆಕೆಂಡ್ ಲುಕ್ ನ್ನು ರಿಲೀಸ್ ಮಾಡಲಾಗಿತ್ತು, ಚಿತ್ರದ ಟೀಸರ್​ ನ ಕನ್ನಡ ಆವೃತ್ತಿ ಸೆ.20 ರಂದು ಬಿಡುಗಡೆಯಾಗಿತ್ತು. ಅರಮನೆಯೊಂದರಲ್ಲಿ ರಾತ್ರಿಯ ವೇಳೆ ಕೆಂಪು ಸೀರೆಯನ್ನು ಧರಿಸಿದ ರಾಣಿಯ ಅವತಾರದಲ್ಲಿ ಕಾಣುವ ರಾಧಿಕಾ ಸಿಂಹಾಸನದ ಮೇಲೆ ಕುಳಿತುಕೊಂಡು ಗಂಭೀರ ನೋಟ ಬೀರುವುದನ್ನು  ಟೀಸರ್​ ನಲ್ಲಿ ತೋರಿಸಲಾಗಿತ್ತು.
ಚಿತ್ರದಲ್ಲಿ ರಾಧಿಕಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಭಜರಂಗಿ ಖ್ಯಾತಿಯ ಲೋಕಿ, ಸಾಧು ಕೋಕಿಲ, ತಬಲಾ ನಾಣಿ, ಮಿತ್ರ, ಮಜಾ ಟಾಕೀಸ್​ ನ ಪವನ್​ ಮತ್ತು ಇತರರು ನಟಿಸಿದ್ದಾರೆ.
ಚಿತ್ರವನ್ನು ನವರಸನ್​ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಅಲ್ಲದೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಶ್ರೀ ಲಕ್ಷ್ಮಿ ವೃಶಾದ್ರಿ ಪ್ರೊಡಕ್ಷನ್​ ಸಂಸ್ಥೆ ನಿರ್ಮಾಣ ಮಾಡಿದೆ. ಆರ್​.ಎಸ್.ಗಣೇಶ್​ ನಾರಾಯಣ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಿ.ಕೆ.ಎಚ್.ದಾಸ್​ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.
ದಮಯಂತಿ ಭಯಾನಕ, ಕುತೂಹಲಕಾರಿ ಮತ್ತು ಹಾಸ್ಯ ಭರಿತ ಚಿತ್ರವಾಗಿದೆ. ಇದು 80ರ ದಶಕದ ಚಿತ್ರ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ರಾಧಿಕಾ ಕುಮಾರಸ್ವಾಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದಮಯಂತಿ ಟ್ರೈಲರ್​ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ವಿಸಿದೆ.  ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com