ಪ್ರಾರ್ಥನಾ ಸಿನಿಮಾ ಆದರೆ ಕಿರುಚಿತ್ರ!
ಕತೆಯಲ್ಲಿ ನಾಯಕ, ನಾಯಕಿ, ಪೋಷಕಪಾತ್ರಗಳು, ಹಾಡು, ಹಾಸ್ಯ, ಸಾಹಸ, ಸುಂದರ ತಾಣಗಳು ಇವೆಲ್ಲವು ಸೇರಿಕೊಂಡರೆ ಒಂದು ಸಿನಿಮಾ ಆಗುತ್ತದೆ ಎಂದು ಹೇಳುವುದುಂಟು. ಇದೆಲ್ಲಾವನ್ನು ಕೇವಲ ಹದಿನೈದು ನಿಮಿಷದಲ್ಲಿ ಹೇಳಬಹುದೆಂದು ‘ಪ್ರಾರ್ಥನ’ ಎನ್ನುವ ಕಿರುಚಿತ್ರದಲ್ಲಿ ತೋರಿಸುವ ಪ್ರಯುತ್ನ ಮಾಡಿದ್ದಾರೆ. ಶೀರ್ಷಿಕೆ ಹೆಸರಿನ ಮುಖ್ಯ ಪಾತ್ರಧಾರಿಗೆ ಪುಕ್ಕಲ ಪ್ರೇಮಿ ಇರುತ್ತಾನೆ. ಪ್ರೀತಿಸುವ ವಿಷಯವನ್ನು ಮನೆಯಲ್ಲಿ ಹೇಳಲು ಹೆದರುತ್ತಾನೆ. ಆಕೆ ಧೈರ್ಯ ಮಾಡಿ ಯಾರಿಗೂ ಹೇಳದೆ ದೂರದ ಊರಿಗೆ ಪ್ರಯಾಣ ಬೆಳಸಿ, ಆತನ ಅಪ್ಪನ ಬಳಿ ಎಲ್ಲವನ್ನು ತಿಳಿಸಿ ಮದುವೆ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಾಳೆ. ಈಕೆಯ ಮನೆಯಲ್ಲಿ ತಂಗಿಯು ಬೇರೆ ಜಾತಿಯವನನ್ನು ಮದುವೆ ಆದರೆ ಆಸ್ತಿ ಹೋಗುತ್ತದೆಂಬ ಅಣ್ಣನಿಗೆ ಚಿಂತೆ. ಮನೆಗೆ ಬಾರದಿರುವುದನ್ನು ನೋಡಿ ದೂರು ಕೊಡುತ್ತಾನೆ. ಮತ್ತೋಂದು ಕಡೆ ಅಪ್ಪನ ಬಳಿ ಹೋಗದಂತೆ ತಡೆಯಲು ಗೆಳತಿಯ ಜೊತೆ ಸೇರಿಕೊಂಡು ಉಪಾಯ ಮಾಡುತ್ತಾನೆ. ಇಷ್ಟರಲ್ಲೆ ಆಕೆ ನಿಗೂಡವಾಗಿ ಕೊಲೆಯಾಗುತ್ತಾಳೆ. ಪೋಲೀಸ್ ಅಧಿಕಾರಿ ತನಿಖೆ ನಡೆಸಿ ಹುಡುಗನ ಅಪ್ಪನ ಮೇಲೆ ಅನುಮಾನ ಪಡುತ್ತಾನೆ. ಪೇದೆಗಳು ಆಸ್ತಿ ಸಲುವಾಗಿ ಆಕೆಯ ಅಣ್ಣ ಕೊಲೆ ಮಾಡಿರಬಹುದೆಂದು ಹೇಳುತ್ತಾರೆ. ಅಧಿಕಾರಿಯು ಚರ್ಚ್‍ನಲ್ಲಿ ಪಾಪವನ್ನು ನಿವೇದನೆ ಮಾಡಿಕೊಳ್ಳುತ್ತಾನೆ. ಆದರೆ ಕೊಲೆ ಮಾಡಿದ್ದು ಯಾರು, ಕಾರಣವಾದರೂ ಏನು? ಎಂಬುದರ ಸೆಸ್ಪನ್ಸ್, ಥ್ರಿಲ್ಲರ್ ಚಿತ್ರವನ್ನು ಯು ಟ್ಯೂಬ್‍ನಲ್ಲಿ ನೋಡಿ ತಿಳಿಯಬಹುದು.
ಅಭಿಷೇಕ್‍ದಾಸ್ ನಾಯಕನಾಗಿ ಹೊಸ ಅನುಭವ. ಎರಡು ಚಿತ್ರಗಳಲ್ಲಿ ನಟಿಸಿರುವ ಅನುಷಾರೈ ನಾಯಕಿ. ಇವರೊಂದಿಗೆ ಗಿರೀಶ್‍ಜತ್ತಿ, ಯಮುನಾಶ್ರೀನಿಧಿ, ಸುನಿಲ್, ಅರಸಿಕೆರೆರಾಜು ತಾರಬಳಗದಲ್ಲಿ ಇದ್ದಾರೆ. ಕತೆ ಬರೆದು ನಿರ್ದೇಶನ, ನಿರ್ಮಾಣ ಮಾಡಿರುವುದು ಕೆ.ಎಲ್.ಪ್ರಭಾಕರ್. ಚಿತ್ರಕತೆ ಕಾರ್ತಿಕ್‍ಮೂನಿ, ಸಂಭಾಷಣೆ ಶ್ರೀನಿಧಿ.ಡಿ.ಎಸ್., ಸಂಕಲನ ಗಣಪತಿಭಟ್, ಛಾಯಗ್ರಹಣ ಸಂತೋಷ್‍ಖಾರ್ವಿ, ಸಂಗೀತ ಸುನಾದ್‍ಗೌತಂ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು ಕಡೆಗಳಲ್ಲಿ ಏಳು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಕಿರುಚಿತ್ರವು ಚೆನ್ನಾಗಿ ಮೂಡಿಬಂದಿರುವ ಕಾರಣ ಇದನ್ನೆ ವಿಸ್ತರಿಸಿಕೊಂಡು ಸಿನಿಮಾ ಮಾಡುವ ಬಗ್ಗೆ ನಿರ್ಮಾಪಕರು ಚಿಂತನೆ ನಡೆಸಿದ್ದಾರೆ. ಇತ್ತೀಚೆಗಷ್ಟೆ ಮಾದ್ಯಮದವರಿಗೆಂದು ವಿಶೇಷ ಪ್ರದರ್ಶನವನ್ನು ಏರ್ಪಾಟು ಮಾಡಲಾಗಿತ್ತು.