6 ಟು 6 ಹಾಡುಗಳನ್ನು ಹೊರತಂದ ಪವರ್‍ಸ್ಟಾರ್
ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿ ಸಂಜೆ 6 ರವರೆಗೆ ನಡೆಯೋ ಥ್ರಿಲ್ಲರ್ ಘಟನೆಗಳನ್ನಿಟ್ಟುಕೊಂಡು ಒಂದು ವಿಶೇಷ ಕಥಾ ಹಂದರವನ್ನು ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ ಅವರು ತೆರೆಮೇಲೆ ತಂದಿದ್ದಾರೆ. 6 ಟು 6 ಎಂಬ ಹೆಸರಿನ ಈ ಚಿತ್ರದ ಹಾಡುಗಳನ್ನು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮೊನ್ನೆ ಹೊರತಂದಿದ್ದಾರೆ. ದೃಶ್ಯ ಖ್ಯಾತಿಯ ಸ್ವರೂಪಿಣಿ ಹಾಗೂ ತಾರಕ್ ಪೊನ್ನಪ್ಪ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಶಂಖನಾದ ಅರವಿಂದ್ ಅವರ ಪುತ್ರ ಅಭಿಷೇಕ್ ಎಂ.ಎ. ನಿರ್ಮಾಣ ಮಾಡಿದರೆ, ಪುತ್ರಿ ಮಾನಸ ಹೊಳ್ಳ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಸುರೇಶ್ ಹೆಬ್ಳೀಕರ್, ಸದಾಶಿವ ಬ್ರಹ್ಮಾವರ್, ಮೈಸೂರು ರಮಾನಂದ್ ಸೇರಿದಂತೆ ಹಲವಾರು ಹಿರಿಯ ಕಲಾವಿದರ ಬಳಗವೇ ಈ ಚಿತ್ರದಲ್ಲಿ ಅಭಿನಯಿಸಿದ್ದು, ಕೊಪ್ಪ, ಶೃಂಗೇರಿ, ಹೊರನಾಡು ಹಾಗೂ ಜಯಪುರದ ಸುತ್ತಮುತ್ತ ಈ ಚಿತ್ರಕ್ಕೆ ಸುಮಾರು 46 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಂಸ ರಂಗಮಂದಿರದಲ್ಲಿ ನಡೆದ ಈ ಸಮಾರಂಭದಲ್ಲಿ ವಿ.ಮನೋಹರ್, ಅರ್ಜುನ್‍ಜನ್ಯ, ಕೆ.ಕಲ್ಯಾಣ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಹಾಡುಗಳ ಸಿಡಿಗಳನ್ನು ಬಿಡುಗಡೆ ಮಾಡಿದ ಪುನೀತ್ ರಾಜ್‍ಕುಮಾರ್ “25 ವರ್ಷಗಳ ಹಿಂದೆ ನಾನು ಬೆಟ್ಟದ ಹೂ ಚಿತ್ರದಲ್ಲಿ ಅರವಿಂದ್ ಅವರೊಂದಿಗೆ ನಟಿಸಿದ್ದು ಈಗಲೂ ನೆನಪಿನಲ್ಲಿದೆ. ಅವರ ಮಗಳು ಈ ಚಿತ್ರದ ಮೂಲಕ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ, ನಮ್ಮ ಹುಡುಗಿ, ಅದರಲ್ಲೂ ಮಹಿಳಾ ಸಂಗೀತ ನಿರ್ದೇಶಕಿ. ಎತ್ತರಕೆ ಬೆಳಯಲಿ ಎಂದು ಶುಭ ಹಾರೈಸಿದರು.
ಹಸೆಮಣೆ, ಆಕಾಶ ದೀಪ, ಈಶ್ವರಿ, ಸುಮತಿ ಸೇರಿದಂತೆ ಹಲವಾರು ಧಾರವಾಹಿಗಳ ನಿರ್ದೇಶನ ಮಾಡಿರುವ ಶ್ರೀನಿವಾಸ ಶಿಡ್ಲಘಟ್ಟ ಅವರು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಒಂದು ಜರ್ನಿ ಕಥೆಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.
ನಂತರ ಸಂಗೀತ ನಿರ್ದೇಶಕಿ ಹಾಗೂ ಗಾಯಕಿ ಮಾನಸ ಹೊಳ್ಳ ಮಾತನಾಡಿ ಆರಂಭದಲ್ಲಿ ಟಿ.ವಿ.ಸೀರಿಯಲ್‍ಗಳಿಗೆ ಟ್ಯೂನ್ ಹಾಕುತ್ತಿದ್ದೆ. ಮೊದಲ ಬಾರಿಗೆ ಸಿನಿಮಾ ಸಂಗೀತ ನಿರ್ದೇಶನ ಮಾಡಿದ್ದೇನೆ. ಅಲ್ಲದೇ ರೀರೆಕಾರ್ಡಿಂಗ್ ಕೂಡ ಮಾಡಿದ್ದೇನೆ. ಈವರೆಗೂ ಗಾಯಕಿಯಾಗಿ ಗುರುತಿಸಿಕೊಂಡಿದ್ದ ನಾನು ಸಂಗೀತ ಸಂಯೋಜನೆಗೆ ಎಂಟ್ರಿ ಆಗಿದ್ದೇನೆ. ಜನ ಇಷ್ಟಪಡುವರೆಂಬ ನಂಬಿಕೆ ಇದೆ ಎಂದು ಹೇಳಿದರು. ನಂತರ ಚಿತ್ರದ ನಾಯಕ ಥಾರಕ್ ಪೊನ್ನಪ್ಪ ಮಾತನಾಡಿ ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ನಡೆವ ಕುತೂಹಲಕರ ಘಟನೆಗಳ ಸುತ್ತ ಚಿತ್ರಕಥೆ ಸಾಗುತ್ತದೆ. ಎಲ್ಲಾ ತರಹದ ಪ್ರೇಕ್ಷಕರು ಇಷ್ಟ ಪಡುವಂತಹ ಕಂಟೆಂಟ್ ಈ ಚಿತ್ರದಲ್ಲಿದೆ ಎಂದು ಹೇಳಿದರು. ಗಣೇಶ್ ಹೆಗಡೆ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ ಹಾಗೂ ಕೆ.ಕಲ್ಯಾಣ್ ಹಾಡುಗಳನ್ನು ಬರೆದಿದ್ದು ಕೆ.ಎಲ್. ವೇಣುಗೋಪಾಲ್ ಚಿತ್ರದ ಸಂಭಾಷಣೆಯನ್ನು ರಚಿಸಿದ್ದಾರೆ.