ಟಾಲಿವುಡ್ಗೆ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ ಓದೆಲ ರೈಲ್ವೆ ಸ್ಟೇಷನ್’ ಚಿತ್ರದ ಪೋಸ್ಟರ್ ರಿಲೀಸ್
ಕನ್ನಡದ ಖ್ಯಾತ ನಟ, ಕಂಚಿನ ಕಂಠದ ಕಲಾವಿದ, ಸ್ವೀಟ್ ವಿಲನ್ ವಸಿಷ್ಠ ಎನ್. ಸಿಂಹ ಕೂಡಾ ತೆಲುಗು ಚಿತ್ರರಂಗಕ್ಕೆ ಬಂದಿದ್ದಾರೆ. ‘ಓದೆಲ ರೈಲ್ವೆ ಸ್ಟೇಷನ್’ ಎಂಬ ತೆಲುಗು ಸಿನಿಮಾ ಮೂಲಕ ಕನ್ನಡದ ಸಿಂಹ ಟಾಲಿವುಡ್ನಲ್ಲಿ ಅಬ್ಬರಿಸಲು ಹೊರಟಿದೆ. ಈಗಾಗಲೇ ಈ ಸಿನಿಮಾದ ಫಸ್ಟ್ಲುಕ್ ಕೂಡಾ ಬಿಡುಗಡೆಯಾಗಿದೆ. ವಸಿಷ್ಠ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ, ತಿರುಪತಿ ಎಂಬ ಮುಗ್ಧ ಯುವಕನ ಪಾತ್ರದಲ್ಲಿ ನಟಿಸಲಿದ್ದಾರಂತೆ. ವಸಿಷ್ಠ ಸಿಂಹ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಓದೆಲ ರೈಲ್ವೆ ಸ್ಟೇಷನ್’ ಚಿತ್ರದ ಪೋಸ್ಟರ್ನಲ್ಲಿ ವಸಿಷ್ಠ ಸಿಂಹ ಬಟ್ಟೆ ಇಸ್ತ್ರಿ ಮಾಡುತ್ತಿದ್ದಾರೆ. ಇದರಲ್ಲಿ ವಸಿಷ್ಠ ಹಳ್ಳಿ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ”ಇದು ನನ್ನ ಮೊದಲ ತೆಲುಗು ಸಿನಿಮಾ. ನಾನು ಇದುವರೆಗೂ ನೋಡಿರದ, ಮಾಡಿರದ ಬಹಳ ಅದ್ಭುತವಾದ ಪಾತ್ರ” ಎಂದು ವಸಿಷ್ಠ ತಮ್ಮ ಮೊದಲ ತೆಲುಗು ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ವಸಿಷ್ಠ ಜೊತೆಯಾಗಿ ಹೆಬಾ ಪಟೇಲ್ ಹಾಗೂ ಪೂಜಿತಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರಾಧಾಮೋಹನ್ ನಿರ್ಮಿಸುತ್ತಿದ್ದು, ಅಶೋಕ್ ತೇಜ ನಿರ್ದೇಶನ ಮಾಡುತ್ತಿದ್ದಾರೆ.
ವಸಿಷ್ಠ ಸಿಂಹ ಹುಟ್ಟಿ, ಬೆಳೆದದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಚಿಕ್ಕಂದಿನಿಂದಲೇ ಸಿನಿಮಾ ಸೆಳೆತ ಇದ್ದ ವಸಿಷ್ಠ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. ಅವರಿಗೆ ಆಸಕ್ತಿ ಇದ್ದದ್ದು ಸಂಗೀತದಲ್ಲಿ. ಸಿನಿಮಾದಲ್ಲಿ ಹಿನ್ನೆಲೆ ಗಾಯಕನಾಗಬೇಕೆಂಬ ಕನಸು ಹೊತ್ತು ಹಂಸಲೇಖ ಅವರ ಬಳಿ ಕೆಲಸ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬಂದರು. ಬಸವನ ಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದ ಅವರು ಕಾಲೇಜು ಓದುವಾಗಲೇ ರಂಗಭೂಮಿಗೆ ಸೇರಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಇತ್ತೀಚೆಗೆ ನಿರಂಜನ್ ದೇಶಪಾಂಡೆ ಬಹಳ ವರ್ಷಗಳ ಹಿಂದೆ ವಸಿಷ್ಠ ಸಿಂಹ, ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಅವರೊಂದಿಗೆ ನಾಟಕವೊಂದನ್ನು ಅಭ್ಯಾಸ ಮಾಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು.