‘ಪಿಂಗಾರ’ ಕರ್ನಾಟಕಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟ ತುಳು ಚಿತ್ರ…!!
ಬೆಂಗಳೂರು 12ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 26 ರಂದು ಉದ್ಘಾಟನೆಗೊಂಡು ನಿನ್ನೆ (ಮಾರ್ಚ್ 4) ವಿಧಾನಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪಶಸ್ತಿ ಪ್ರಧಾನ ಹಾಗೂ ಸಮಾರೋಪ ಸಮಾರಂಭ ನೆರವೇರಿತು. ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ ಅಂತರಾಷ್ಟ್ರೀಯ ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರವಾಗಿದ್ದು ತುಳು ಚಿತ್ರ ‘ಪಿಂಗಾರ’. ಕರಾವಳಿಯ ಸೊಗಡು, ಸಂಸ್ಕೃತಿ ಹಾಗೂ ಅಲ್ಲಿ ಆಚರಿಸಿಕೊಂಡು ಬರುವಂತಹ ದೈವಾರಾಧನೆ, ನಾಗಾರಾಧನೆ, ಆಚಾರ-ವಿಚಾರ, ನಂಬಿಕೆ ಇದೆಲ್ಲವನ್ನೂ ತನ್ನ ‘ಪಿಂಗಾರ’ ಚಿತ್ರದ ಮೂಲಕ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ ಪ್ರೀತಮ್ ಶೆಟ್ಟಿಯವರಿಗೆ ಇದು ಮೊದಲ ಸಿನಿಮಾ. ಕಿರುತೆರೆ ನಿರ್ದೇಶನದಲ್ಲಿ ಜನಪ್ರಿಯವಾಗಿರುವ ಪ್ರೀತಮ್ ಶೆಟ್ಟಿಯವರ ‘ಪಿಂಗಾರ’ ಚಿತ್ರಕ್ಕೆ ಪವನ್ ಕುಮಾರ್ ರವರು ಛಾಯಾಗ್ರಹಣ ಮಾಡಿದ್ದಾರೆ. ಶಶಿರಾಜ್ ಕಾವೂರು ಸಂಭಾಷಣೆ ಬರೆದಿದ್ದಾರೆ. ಜನಾರ್ಧನ್ ರವರ ಕಲಾನಿರ್ದೇಶನವಿದೆ. ಅವಿನಾಶ್ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ಗುರುಹೆಗ್ಡೆ, ಉಷಾಭಂಡಾರಿ, ನೀಮಾರೇ, ಸುನೀಲ್ ನೆಲ್ಲಿಗುಡ್ಡೆ, ಸಿಂಚನಾ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.
‘ಪಿಂಗಾರ’ ತುಳುನಾಡಿನಲ್ಲಿ ಹೆಚ್ಚಾಗಿ ನಾಗಾದೇವರಿಗೆ, ದೈವಸ್ಥಾನ, ದೇವಸ್ಥಾನಗಳಲ್ಲಿ ಬಳಸುವ ಹೂ ಪಿಂಗಾರ. ಇದು ಅಡಿಕೆ (ತೆಂಗು) ಮರದ ಹೂ. ತುಳುನಾಡಿನಲ್ಲಿ ಇದರ ವಿಶೇಷತೆಯೇ ಬೇರೆ, ದೈವ ದರ್ಶನ, ಭೂತ(ದೈವ) ಕೋಲಗಳಲ್ಲಿ ಪಾತ್ರಿಗಳು, ದೈವ ವೇಷಾಧಾರಿಗಳು ಪಿಂಗಾರ ಹೂವನ್ನು ಕೈಯಲ್ಲಿ ಹಿಡಿದುಕೊಂಡು ಕುಣಿದು ಭಕ್ತರಿಗೆ ಪ್ರಸಾದವಾಗಿ ಪಿಂಗಾರವನ್ನು ನೀಡುತ್ತಾರೆ. ಈ ದೈವ ಪ್ರಸಾದದ ಕತೆಯೇ ‘ಪಿಂಗಾರ’.