ತೋಡಿಕಾನ ದೇವರಗುಂಡಿಯಲ್ಲಿ ಮಾಡೆಲ್ಗಳ ಅರೆಬೆತ್ತಲೆ ಫೋಟೊ ಶೂಟ್: ಸಾರ್ವಜನಿಕರಿಂದ ಆಕ್ರೋಶ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದಲ್ಲಿರುವ ದೇವರಗುಂಡಿ ಫಾಲ್ಸ್ನಲ್ಲಿ ಬೆಂಗಳೂರು ಮೂಲದ ಇಬ್ಬರು ಮಾಡೆಲ್ಗಳು ಅರೆಬೆತ್ತಲೆಯಾಗಿ ಫೋಟೊ ಶೂಟ್ ನಡೆಸಿರುವ ಆರೋಪ ಕೇಳಿಬಂದಿದೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸುಳ್ಯದ ತೋಡಿಕಾನ ಸಮೀಪ ಇರುವ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನ ಬಳಿ ಇರುವ ಈ ದೇವರಗುಂಡಿ ಫಾಲ್ಸ್ನಲ್ಲಿ ಮಾಡೆಲ್ಗಳು ಫೋಟೊ ಶೂಟ್ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಐತಿಹ್ಯಗಳ ಪ್ರಕಾರ ದೇವರಗುಂಡಿಯಲ್ಲಿ ಸಾಕ್ಷಾತ್ ಶಿವನೇ ಸ್ನಾನಕ್ಕೆ ಬರುತ್ತಿದ್ದ ಎನ್ನುವ ನಂಬಿಕೆ ಇದೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಭಕ್ತರಾಗಲಿ ಅಥವಾ ಸ್ಥಳೀಯರಾಗಲಿ ಈ ಫಾಲ್ಸ್ನಲ್ಲಿ ಸ್ನಾನ ಮಾಡುವುದಿಲ್ಲ.ಇಂತಹ ಪವಿತ್ರ ಸ್ಥಳದಲ್ಲಿ ಬೆಂಗಳೂರಿನ ಇಬ್ಬರು ಮಾಡೆಲ್ ಅರೆಬೆತ್ತಲಾಗಿದ್ದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಈ ಕುರಿತಾಗಿ ಸ್ಥಳೀಯರು ದೇಗುಲದ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆದರೆ ಆ ಜಾಗ ದೇವಸ್ಥಾನದ ವ್ಯಾಪ್ತಿಗೆ ಬರುವುದಿಲ್ಲವೆಂದು ಆಡಳಿತ ಮಂಡಳಿಯವರು ಸ್ಪಷ್ಟಪಡಿಸಿದ್ದಾರೆ.