Ondu Preetiya Kathe, Drama Details
ನಾಟಕ : ಒಂದು ಪ್ರೀತಿಯ ಕಥೆ..!
ಕನ್ನಡ ನಾಟಕ | 110 ನಿಮಿಷಗಳು
ಮರಾಠಿ ಮೂಲ : ವಿಜಯ್ ತೆಂಡೂಲ್ಕರ್ ರ ‘ಮಿತ್ರಾಚಿ ಗೋಷ್ಟ್’
ನಿರ್ದೇಶನ : ವೆಂಕಟೇಶ್ ಪ್ರಸಾದ್
ಸಹ ನಿರ್ದೇಶನ : ಉಜ್ವಲ ರಾವ್
ಏಪ್ರಿಲ್ 26, ಸಂಜೆ 7:30 | ರಂಗ ಶಂಕರ | 150/- |
ಟಿಕೆಟ್‍ಗಳು ರಂಗ ಶಂಕರದಲ್ಲಿ ದೊರೆಯುತ್ತವೆ,
ಆನ್‍ಲೈನ್ ಟಿಕೆಟ್ : BookMyShow
ಒಂದು ಪ್ರೀತಿಯ ಕಥೆ, ಸಲಿಂಗ ಪ್ರೀತಿ ಮತ್ತು ಈ ಪ್ರೇಮಿಗಳ ಜೀವನದಲ್ಲಿ ಸಮಾಜ ಸೃಷ್ಟಿಸುವ ತಲ್ಲಣಗಳ ಕಥೆ.
ಬಹುಷ: ಕನ್ನಡದಲ್ಲಿ ಹೆಣ್ಣೊಬ್ಬಳ ಸಲಿಂಗಪ್ರೇಮದ ಬಗ್ಗೆ ಬಂದಿರುವ ಮೊದಲ ನಾಟಕ ಇದು.
1982ರಲ್ಲಿ ವಿಜಯ್ ತೆಂಡೂಲ್ಕರ್ ಅವರು ರಚಿಸಿದ `ಮಿತ್ರಾಚಿ ಗೋಶ್ಟ್’ ನಾಟಕವನ್ನು ವೆಂಕಟೇಶ್ ಪ್ರಸಾದ್ `ಒಂದು ಪ್ರೀತಿಯ ಕಥೆ’ ಎಂಬ ಹೆಸರಿನೊಂದಿಗೆ ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿದ್ದಾರೆ.
ನಿರ್ದೇಶಕರ ನುಡಿ: ಪ್ರೀತಿ ಎನ್ನುವುದು ದೇಶ ಕಾಲಗಳನ್ನು ಮೀರಿದ ಸಂವೇದನೆ, ಪ್ರೀತಿ ಎನ್ನುವುದು ಎಲ್ಲ ಜೀವಿಗಳಲ್ಲೂ ಇರಬಹುದಾದ, ಬಣ್ಣಿಸಲಾಗದ, ಬಿಡಿಸಲಾಗದ ಮತ್ತು ಬದುಕಿಗೆ ಅವಶ್ಯಕವಾದ ಅನುಬಂಧ. ಹಾಗಿದ್ದರೂ ನಾಗರಿಕ ಜಗತ್ತಿನಲ್ಲಿ ಪ್ರೀತಿಗಿರಬಹುದಾದ ನೈತಿಕ ಚೌಕಟ್ಟು, ಸಾಮಾಜಿಕ ಕಟ್ಟುಪಾಡುಗಳು, ರೂಪುರೇಷೆಗಳು ಬೇರಾವ ಸಂವೇದನೆಗೂ ಕಾಣಸಿಗುವುದಿಲ್ಲ. ದ್ವೇಷ, ಸಿಟ್ಟು, ಅಸೂಯೆಯನ್ನು ವ್ಯಕ್ತಪಡಿಸುವಷ್ಟು ಸುಲಭವಾಗಿ ಪ್ರೀತಿಯನ್ನು ವ್ಯಕ್ತಪಡಿಸಲಾಗದಿರುವುದು ಆಧುನಿಕ ಜಗತ್ತಿನ ಬಹು ದೊಡ್ಡ ವ್ಯಂಗ್ಯ..
ಪ್ರೀತಿಯ ಪರಿಭಾಷೆಗಳು ಕಾಲ ಕಾಲಕ್ಕೆ ಬದಲಾಗುತ್ತಿದ್ದರೂ, ಪ್ರೀತಿಗಂಟಿದ ಪೂರ್ವಾಗ್ರಹಗಳು ಇಂದು ನಿನ್ನೆಯದಲ್ಲ. ಅವುಗಳಲ್ಲಿ ಬಹಳ ಮುಖ್ಯವಾದುದು, ಗಂಡು ಹೆಣ್ಣಿನ ನಡುವಿನ ಪ್ರೀತಿಯೇ ಸಹಜ ಪ್ರೀತಿ,
ಉಳಿದಿದ್ದೆಲ್ಲ ಅಸಹಜ ಪ್ರೀತಿ ಎಂಬುದು. ಸಂತಾನೋತ್ಪತ್ತಿಯೇ ಪ್ರೀತಿಯ ಬಹುಮುಖ್ಯ ಅಗತ್ಯ ಎಂಬ ಸಾಮಾಜಿಕ, ಧಾರ್ಮಿಕ ಕಾರಣಗಳೂ ಈ ಪೂರ್ವಾಗ್ರಹವನ್ನು ಬೆಳೆಸಿವೆ, ಪೋಷಿಸಿವೆ, ನಮ್ಮೆಲ್ಲರಲ್ಲಿ ಬೇರುಬಿಟ್ಟ ಮರವಾಗಿಸಿವೆ.
ಈ ಪೂರ್ವಾಗ್ರಹಗಳ ಆಚೆ ಇರಬಹುದಾದ ಒಂದು ಸಹಜ ಪ್ರೀತಿಯ ಕಥೆಯೇ ನಮ್ಮ ಒಂದು ಪ್ರೀತಿಯ ಕಥೆ. ಮೈಸೂರಿನ ಎಂಜಿನೀಯರ್ ಕಾಲೇಜೊಂದರದಲ್ಲಿ ನಡೆದಿರಬಹುದಾದ ಈ ಕಥೆ ಗಂಡು-ಹೆಣ್ಣಿನ ಮಧ್ಯೆ ಇರುವ ಪ್ರೀತಿ ಎಷ್ಟು ಸಹಜವೋ, ಅಷ್ಟೇ ಸಹಜವಾಗಿ ಹೆಣ್ಣು ಮತ್ತೊಂದು ಹೆಣ್ಣಿನ ಮೇಲೆ ತೋರುವ ಪ್ರೀತಿಯನ್ನು ಪ್ರತಿಫಲಿಸುತ್ತದೆ. ಸಲಿಂಗ ಪ್ರೀತಿ ಪ್ರಕೃತಿಗೆ ವಿರುದ್ದವಾದುದು, ಅಸಹಜವಾದುದು ಎನ್ನುವ ಪೂರ್ವಾಗ್ರಹವನ್ನು ತೊಲಗಿಸುವ ನಿಟ್ಟಿನಲ್ಲಿ ಈ ನಾಟಕ ಪ್ರಯೋಗಿಸಲಾಗುತ್ತಿದೆ.
ಸಲಿಂಗ ಪ್ರೇಮಿಗಳನ್ನು ಮುಖ್ಯವಾಹಿನಿಯ ಕಲಾಪ್ರಕಾರಗಳಲ್ಲಿ ಹಾಸ್ಯದ ವಸ್ತುವಾಗಿ ಬಳಸಿಕೊಂಡದ್ದೇ ಹೆಚ್ಚು; ಅಥವಾ ಅವರು ವ್ಯವಸ್ಥೆಯ ಬಲಿಪಶುಗಳು ಎಂಬುದನ್ನು ವೈಭವೀಕರಿಸಿ ಬಿಂಬಿಸಲಾಗುತ್ತಿದೆ. ಆದರೆ ಈ ಎರಡೂ ಸಿದ್ಧ ಮಾದರಿಯ ಸಾಧ್ಯತೆಗಳಾಚೆ ಸಲಿಂಗ ಪ್ರೀತಿ ಆತ್ಯಂತ ಸಹಜ ಎನ್ನುವುದನ್ನು ಗಟ್ಟಿಯಾದ ನಿಲುವಿನೊಂದಿಗೆ ಪ್ರತಿಪಾದಿಸಲು ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಈ ಪ್ರಯೋಗದ ಮೂಲಕ ಪ್ರಯತ್ನ ಪಡುತ್ತಿದೆ.
ಇದು ಸಮಸ್ಯೆಯ ವೈಭವೀಕರಣವಲ್ಲ. ನವಿರಾದ ಪ್ರೀತಿಯ ಕಥೆ – ಒಂದು ಪ್ರೀತಿಯ ಕಥೆ