ಅವಂತಿಕಾ ಶೆಟ್ಟಿಗೆ ‘ಹೇಳೇ ಮೇಘವೇ’ ಎಂದ ನಿರೂಪ್ ಭಂಡಾರಿ
ಅವಂತಿಕಾ ಶೆಟ್ಟಿಗೆ ‘ಹೇಳೇ ಮೇಘವೇ’ ಎಂದ ನಿರೂಪ್ ಭಂಡಾರಿ
‘ರಾಜರಾಥ’ ತಂಡವು ಇಂದು ಸಂಜೆ ಎರಡನೇ ಹಾಡನ್ನು ಅಭಯ್ ಜೋದ್ಪುರ್ಕರ್ ಅವರ ದನಿಯಲ್ಲಿ ಬಿಡುಗಡೆ ಮಾಡಿದ್ದಾರೆ. ‘ರಂಗಿತರಂಗ’ ಚಿತ್ರದಲ್ಲಿ ಈ ಸಂಜೆ ಹಾಡನ್ನು ಹಾಡಿದ ಗಾಯಕನೇ ‘ಹೇಳೇ ಮೇಘವೇ’ ಹಾಡನ್ನು ಹಾಡಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ ಹಾಡನ್ನು ಬಿಡುಗಡೆ ಮಾಡಿದರೆ, ತೆಲುಗುವಿನಲ್ಲಿ ಕಿರ್ರಕ್ ಪಾರ್ಟಿಯ ನಟ ನಿಖಿಲ್, ‘ನೀಲಿ ಮೇಘಮಾ’ ವನ್ನು ಬಿಡುಗಡೆ ಮಾಡಿದರು. ಈ ಪ್ರಣಯದ ಹಾಡನ್ನು ಮಲ್ಶೇಜ್ ಘಾಟ್ ಮತ್ತು ಮಹಾಬಲೇಶ್ವರದ ಪ್ರಕೃತಿಯ ಸೌಂದರ್ಯದಲ್ಲಿ ಹಾಗು ಇಲ್ಲಿಯವರೆಗೂ ಪರಿಚಯಿಸದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡು ಈಗಿನ ಕಾಲಕ್ಕೆ ತಕ್ಕಂತಹ ಸಂಗೀತ ಮತ್ತು ಶುದ್ಧ ಕನ್ನಡ ಸಾಹಿತ್ಯದ ಪರಿಪೂರ್ಣ ಮಿಶ್ರಣವಾಗಿದೆ. ಸಂಗೀತ ನಿರ್ದೇಶಕ ಮತ್ತು ಗೀತಾರಚನಾಕಾರರಾದ ಅನೂಪ್ ಭಂಡಾರಿ ಈ ಹಾಡನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳುವ ಹಾಗೆ ರಚಿಸಿದ್ದಾರೆ; ಭೂಮಿ, ಮೋಡ ಮತ್ತು ಸೂರ್ಯ ಅಥವಾ 3 ಪಾತ್ರಗಳಾದ – ಅಭಿ, ಮೇಘಾ ಮತ್ತು ಸೂರಜ್ ಬಗ್ಗೆ ಇರುವಂತಹ ಹಾಡಿದಾಗಿದೆ.
ಪ್ರಸಿದ್ಧ ಸಂಗೀತಗಾರರು ಈ ಹಾಡಿನಲ್ಲಿ ಕೆಲಸ ಮಾಡಿದ್ದಾರೆ, ಅದರಲ್ಲೊಂದು ತಂಡ ಚೆನ್ನೈ ಆರ್ಕೆಸ್ಟ್ರಾದವರು. ಪ್ರೇಮಲೋಕ ಚಿತ್ರದಿಂದಲೂ ಹಂಸಲೇಖರವರಿಗೆ ಸಂಗೀತ ಸಂಯೋಜನೆಯಲ್ಲಿ ಸಹಾಯ ಮಾಡುತಿದ್ದ ಹಾಗು ಸ್ಯಾಕ್ಸೋಫೋನ್ ವಾದಕರಾದ ಸ್ಯಾಕ್ಸ್ ರಾಜರವರು ಈ ಹಾಡಿನ ಸ್ಟ್ರಿಂಗ್ಸ್ ವಿಭಾಗಕ್ಕೆ ಸಂಗೀತದ ಮಾರ್ಗದರ್ಶಿಯಾದರೆ, ಬಾಸ್ಕೋ-ಸೀಸರ್ ಜೋಡಿಯ ಸರಳ ಮತ್ತು ಅಚ್ಚುಕಟ್ಟಾಗಿರುವ ನೃತ್ಯ ರಚನೆ, ರಜತ್ ಪೊದ್ದಾರ್ ರವರ ಕಲಾ ವಿನ್ಯಾಸ ಮತ್ತು ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವು ಒಂದು ದೃಶ್ಯ-ಕಾವ್ಯದಂತೆ ಈ ಹಾಡಿನಲ್ಲಿ ಮೂಡಿಬಂದಿದೆ.
ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ಆರ್ಯ, ರವಿಶಂಕರ್ ಮುಖ್ಯ ಪಾತ್ರವರ್ಗದಲ್ಲಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ‘ರಾಜರಥ’ವಾಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರೊಮ್ಯಾಂಟಿಕ್ – ಕಾಮಿಡಿ ಚಿತ್ರ ಇದಾಗಿದೆ. ಮೊದಲಬಾರಿ ನಿರ್ಮಾಪಕರಾಗಿರುವ ಜಾಲಿ ಹಿಟ್ಸ್ ನ ಅಜಯ್ ರೆಡ್ಡಿ, ಅಂಜು ವಲ್ಲಭನೆನಿ, ವಿಶು ಡಕ್ಕಪ್ಪಗಾರಿ, ಸತೀಶ್ ಶಾಸ್ತ್ರಿ ರವರು ಈ ಚಿತ್ರವನ್ನು ವಿಶ್ವದಾದ್ಯಂತ ಫೆಬ್ರುವರಿ 16 ರಂದು ಬಿಡುಗಡೆ ಮಾಡಲಿದ್ದಾರೆ.