ನಿಮ್ಮ ಮನಸಿಗೆ ಸನಿಹವಾಗುವ ‘ನಿನ್ನ ಸನಿಹಕೆ’
ಬೆಂಗಳೂರಿನಂತಹ ಮಹಾನಗರದಲ್ಲಿ ಬಂದು ವಾಸಿಸುವವರಿಗೆ ಬದುಕೇ ಒಂದು ಸಿನಿಮಾದಂತಾಗಿರುತ್ತದೆ ಬಿಡಿ. ಸಂಬಂಧಗಳನ್ನೇ ಲಾಜಿಕ್ ಇಲ್ಲದಂತೆ ಕಂಡುಬಿಡುತ್ತೇವೆ. ಸಂಬಂಧಗಳಿಗೆ ಸುಳ್ಳುಗಳನ್ನು ಪೋಣಿಸಿ, ಸಂಬಂಧ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸೋತುಬಿಡುತ್ತೇವೆ.ಅಂತಹ ವಿಚಿತ್ರ ಲಿವಿಂಗ್ ಟುಗೆದರ್ ಸಂಬಂಧದ ಮೆಲೆ ಕಥೆ ಹೆಣೆದು ನಿಮಗೊಪ್ಪಿಸಿದ್ದಾರೆ ನಿನ್ನ ಸನಿಹಕೆ ನಟ-ನಿರ್ದೇಶಕರಾದ ಸೂರಜ್ ಗೌಡ.
‘ನಿನ್ನ ಸನಿಹಕೆ’ ನಿಮ್ಮ ಮನಸಿಗೆ ಸನಿಹವಾಗುವ ‘ನಿನ್ನ ಸನಿಹಕೆ’
ಚಿತ್ರದ ಹಿನ್ನೆಲೆಯೇನು?
ಇಲ್ಲಿ ಕಥಾನಾಯಕ ಹಾಗೂ ಕಥಾನಾಯಕಿ ಇಬ್ಬರೂ ವೃತ್ತಿಪರರಾಗಿರುತ್ತಾರೆ. ದಂತವೈದ್ಯೆಯಾಗಿ ನಾಯಕಿ ಡಿಂಪಿ(ಧನ್ಯಾ ರಾಮ್ ಕುಮಾರ್) ಬೆಂಗಳೂರಿಗೆ ಬಂದರೆ, ನಾಯಕ ಆದಿತ್ಯ(ಸೂರಜ್ ಗೌಡ) ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕಾಗಿ ಬೆಂಗಳೂರು ತಲುಪಿರುತ್ತಾನೆ. ಯಾವುದೋ ಒಂದು ಸನ್ನಿವೇಶದಲ್ಲಿ ಆದಿತ್ಯನೊಂದಿಗೆ ತಗಲು ಹಾಕಿಕೊಳ್ಳುವ ಡಿಂಪಿ, ಆದಿತ್ಯನಿಗೆ ಹತ್ತಿರವಾಗುವ ಕಥೆಯನ್ನು ಚಿತ್ರದಲ್ಲಿ ಸುಂದರವಾಗಿ ಹೆಣೆಯಲಾಗಿದೆ.
ಆದಿ ಹಾಗೂ ಡಿಂಪಿ ನಡುವಿನ ಪ್ರೇಮಕಥೆಗಳು ಹೇಗೆ ಆರಂಭವಾಗುತ್ತವೆ? ಅವರಿಬ್ಬರ ಪ್ರೇಮಕಥೆಗಳು ಎಲ್ಲಿಯತನಕ ತಲುಪುತ್ತವೆ ಎನ್ನುವುದನ್ನು ಸ್ಪಷ್ಟವಾಗಿ ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಹೆಣೆದಿದ್ದಾರೆ ಸೂರಜ್. ಬರೇ ಪ್ರೇಮಕಥೆಗೆ ಮಾತ್ರ ಸೀಮಿತವಾಗಿರದೆ, ಕೆಲವೊಂದು ಸಾಮಾಜಿಕ ಸಂದೇಶಗಳನ್ನು ಅಲ್ಲಲ್ಲಿ ಪೋಣಿಸುವ ಮೂಲಕ ಚಿತ್ರದ ಸಾರವನ್ನು ವೃದ್ಧಿಸಲಾಗಿದೆ.
ಲಿವಿಂಗ್ ಟುಗೆದರ್ ಸಂಬಂಧದ ಬಗೆಗಿನ ಸಂಪೂರ್ಣ ನಿಲುವುಗಳನ್ನು ಚಿತ್ರದಲ್ಲಿ ವ್ಯಕ್ತಪಡಿಸಿದ್ದಾರೆ ನಿರ್ದೇಶಕರು. ನಿರ್ದೇಶಕರೇ ಸ್ವಯಂ ನಟಿಸಿರುವುದರಿಂದ ಕಥೆಯ ಸಂಪೂರ್ಣ ಚಿತ್ರಣ ನಾಯಕನ ಪಾತ್ರದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
ಕ್ಲಾಸ್, ಮಾಸ್,ಫೀಲ್ ಎಲ್ಲವೂ ಲಭ್ಯ
ಅವಶ್ಯವಿರುವಲ್ಲಿ ಹಾಸ್ಯದ ಟಚ್ ಮೂಲಕ, ನಾಯಕನಿಗೆ ಸ್ವಲ್ಪ ಮಾಸ್, ಸ್ವಲ್ಪ ಕ್ಲಾಸ್ ಮಿಶ್ರಗುಣದ ಪಾತ್ರ ನೀಡಿ, ಎಲ್ಲ ರಸಗಳನ್ನೂ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ನಾಯಕನ ಪಾತ್ರದಲ್ಲಿ ಸ್ವತಃ ತಾನೇ ಅಭಿನಯಿಸಿ, ನಟನಾಗಿಯೂ ನಿರ್ದೇಶಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಬಲ್ಲೆ ಎನ್ನುವ ಭರವಸೆ ಮೂಡಿಸಿದ್ದಾರೆ ಸೂರಜ್ ಗೌಡ. ಹಾಗೆಯೇ ರಾಜ್ ಕುಮಾರ್ ಕುಟುಂಬದ ಕುಡಿ ಧನ್ಯಾ ರಾಮ್ ಕುಮಾರ್ ಅವರ ನಟನೆಯಂತೂ ಅವರ ಪೀಳಿಗೆಯಿಂದಲೇ ಬಂದಿರುವ ಬಳುವಳಿಯೋ ಎನ್ನುವಷ್ಟು ಅಚ್ಚುಕಟ್ಟಾಗಿದೆ. ಮಿಶ್ರ ಭಾವನೆಗಳ ಚಿತ್ರವಾಗಿರುವುದರಿಂದ ಭಾವನೆಗಳಿಗೆ ಸ್ವಿಚ್ ಆಗುವ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಧನ್ಯಾ,.
ಬೋಲ್ಡ್ ವಿಚಾರ ಹೊಂದಿರುವ ಚಿತ್ರವಾಗಿರುವುದರಿಂದ ಪ್ರೇಕ್ಷಕರಿಗೆ ಅಲ್ಲಲ್ಲಿ ಅಭಾಸ ಅನ್ನಿಸಿದರೂ, ನೆಗೆಟಿವ್ ದೃಶ್ಯಗಳ ಮೂಲಕ ಅದರ ಹಿಂದಿನ ಪಾಸಿಟಿವ್ ಅನ್ನು ತೋರಿಸಲು ಯತ್ನಿಸಿರುವುದು ಬಹಳ ಸೃಜನಶೀಲ ಎನ್ನಿಸುತ್ತದೆ.
ಉತ್ತಮ ಸಂಗೀತ, ಉತ್ತಮ ಅನುಭವ
ಚಿತ್ರದ ಗುಣಮಟ್ಟದ ಬಹುಪಾಲು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರಿಗೆ ಸಲ್ಲಬೇಕಾಗುತ್ತದೆ. ಲವ್ ಮಾಕ್ಟೇಲ್ ಯಶಸ್ಸಿನ ನಂತರ ಈ ಚಿತ್ರದ ಸಂಗೀತ ನಿರ್ದೇಶನ ಮಾಡಿರುವ ರಘು ದೀಕ್ಷಿತ್, ಇಲ್ಲೂ ಸಹ ತನ್ನ ಮೋಡಿಯನ್ನು ಮಾಡಿದ್ದಾರೆ. ಅಭಿಲಾಷ್ ಕಳ್ಳತ್ತಿ ಅವರ ಛಾಯಾಗ್ರಹಣ ಹಾಗೂ ಸುರೇಶ್ ಆರುಮುಗಮ್ ಅವರ ಸಂಕಲನ ಈ ಚಿತ್ರದ ಸನ್ನಿವೇಶಗಳನ್ನು ಪ್ರೇಕ್ಷಕರಿಗೆ ಅರ್ಥೈಸುವಲ್ಲಿ ಬಹಳ ಉತ್ತಮವಾಗಿವೆ ಎನ್ನಿಸುತ್ತದೆ.
ಅದಲ್ಲದೆ, ಚಿತ್ರದಲ್ಲಿ ಸೈಬರ್ ಕ್ರೈಮ್ ಅಪರಾಧಗಳ ಬಗ್ಗೆಯೂ ಸನ್ನಿವೇಶಗಳನ್ನು ಸೃಷ್ಟಿಸಿ ಹೆಣೆದಿರುವಂಥದ್ದು, ಸಮಾಜಕ್ಕೆ ನಾಲ್ಕಾರು ಸಂದೇಶಗಳನ್ನು ನೀಡಿ, ಜನರಲ್ಲಿ ಜಾಗೃತಿ ಮೂಡಿಸಬಹುದು ಎನ್ನಲಾಗುತ್ತಿದೆ. ವೈಟ್ & ಗ್ರೇ ಪಿಕ್ಚರ್ಸ್ ಅಡಿಯಲ್ಲಿ,
ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕೂಡ್ಲಿ ಅವರ ಚಿತ್ರ ನಿರ್ಮಾಣ ಸಿನಿಪ್ರಿಯರಿಗೆ ಯಾವುದೇ ಮೋಸವಿಲ್ಲದ ಅನುಭವವನ್ನು ನೀಡಿದೆ ಎನ್ನಬಹುದಾಗಿದೆ.
ಚಿತ್ರವನ್ನು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಂದೇ ಥಿಯೇಟರ್ ನಲ್ಲಿ ವೀಕ್ಷಿಸಿ.