ಸಿನಿಮಾ ಕಲಿಕೆಗೆ `ನವರಸ ನಟನ ಅಕಾಡೆಮಿ’ಜನವರಿ 7ರಂದು ಆಡಿಷನ್ ಶುರು
ಸಿನಿಮಾ ಕಲಿಕೆಗೆ `ನವರಸ ನಟನ ಅಕಾಡೆಮಿ’ಜನವರಿ 7ರಂದು ಆಡಿಷನ್ ಶುರು
ಸಾಕಷ್ಟು ಯುವಕರು ಸಿನಿಮಾದ ಅರಿವಿಲ್ಲದೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟುಬಿಡುತ್ತಾರೆ. ನಟಿಸಲು ಅವಶ್ಯಕತೆಯಿರುವ ಸಾಮಾನ್ಯ ಜ್ಞಾನ ಇಲ್ಲದೇ, ಕ್ಯಾಮೆರಾ ಎದುರು ನಿಂತಾಗ ಡೈಲಾಗ್ ಮರೆತುಬಿಡುವ ಸಾಕಷ್ಟು ಜನರಿದ್ದಾರೆ. ಇನ್ನು ತಾಂತ್ರಿಕವಾಗಿ ಏನೂ ಅರಿಯದೇ ಸೀದಾ ಕೆಲಸ ಅರಸಿ ಓಡಾಡುವವರೂ ಇದ್ದಾರೆ. ಆದರೆ ಸಿನಿಮಾರಂಗಕ್ಕೆ ಕಾಲಿಡುವ ಮುನ್ನ ಒಂದಷ್ಟು ತಯಾರಿ ಅಗತ್ಯ. ಅದಕ್ಕಾಗಿಯೇ `ನವರಸ ನಟನ ಅಕಾಡೆಮಿ’ ಅಭಿನಯ ಮತ್ತು ನಿರ್ದೇಶನದ ಕಲಿಕೆಗಾಗಿಯೇ ಆಡಿಷನ್ ನಡೆಸುತ್ತಿದೆ.
ಕಳೆದ 22 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮಾಲೂರು ಶ್ರೀನಿವಾಸ್ ಅವರು `ನವರಸ ನಟನ ಅಕಾಡೆಮಿ’ಯನ್ನು ಹುಟ್ಟುಹಾಕಿದ್ದಾರೆ. ಜಗ್ಗೇಶ್ ಅವರ ಆಶೀರ್ವಾದದಿಂದ ಶುರು ಮಾಡಿರುವುದಾಗಿ ಹೇಳಿಕೊಳ್ಳುವ ಶ್ರೀನಿವಾಸ್, ನಟನೆ ಬಗ್ಗೆ ತಿಳಿದುಕೊಳ್ಳಲು ಬರುವ ಆಸಕ್ತ ವಿದ್ಯಾರ್ಥಿಗಳಿಗಾಗಿ ಬರೀ ಪುಸ್ತಕದಲ್ಲಿರುವುದನ್ನಷ್ಟೇ ಬೋಧಿಸದೇ, ಪ್ರಾಕ್ಟಿಕಲ್ ಆಗಿಯೂ ಸಾಕಷ್ಟು ಅಂಶಗಳನ್ನು ತಿಳಸಿಕೊಡುವ ಉದ್ದೇಶದಿಂದ ಈ ಸಂಸ್ಥೆಯನ್ನು ನಿರ್ಮಿಸಿದ್ದಾರಂತೆ. ಇನ್ಸ್ಟಿಟ್ಯೂಟ್ನಲ್ಲಿ ನುರಿತ ನಿರ್ದೇಶಕರು, ತಂತ್ರಜ್ಞರಿಂದ ಆಯಾ ವಿಭಾಗದ ಬಗ್ಗೆ ಪಾಠ ಮಾಡಿಸುವುದರ ಜೊತೆಗೆ ಅವರ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಉದ್ದೇಶ ಶ್ರೀನಿವಾಸ್ ಅವರಿಗಿದೆ.
ಹಿರಿಯ ನಿರ್ದೇಶಕರಾದ ಎಸ್.ನಾರಾಯಣ್, ಎಸ್.ಮಹೇಂದರ್, ಅನಂತರಾಜು, ವಿಶಾಲ್ ರಾಜ್, ಲಕ್ಕಿ ಶಂಕರ್, ಉದಯ್ ಪ್ರಕಾಶ್ ಹಾಗೂ ನೀನಾಸಂ ಬಳಗದ ನುರಿತವರು ಸೇರಿದಂತೆ ಮುಂತಾದವರು ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಿಂದಲೇ ಕಿರುಚಿತ್ರವೊಂದನ್ನು ತಯಾರು ಮಾಡಿಸುವ ಯೋಜನೆ ಹಾಕಿಕೊಂಡಿದೆ ಈ ಸಂಸ್ಥೆ. ಹಾಗೆಯೇ ವಿದ್ಯಾರ್ಥಿಗಳಿಗೆ ಸ್ವಿಮ್ಮಿಂಗ್, ಡಾನ್ಸಿಂಗ್, ಫೈಟಿಂಗ್ ಮತ್ತು ಚಿತ್ರೀಕರಣದ ಅನುಭವವನ್ನು ಎಲ್ಲರಿಂದಲೂ ಮಾಡಿಸಲಿದೆಯಂತೆ. ರಾಷ್ಟ್ರೀಯ ಮಟ್ಟದಲ್ಲಿ ಪಠ್ಯ ಸಿದ್ಧಪಡಿಸಿದ್ದು, ಮೂರು ತಿಂಗಳ ಕೋರ್ಸ್ ಇದಾಗಿದೆ.
ಇದೇ 7 ರಂದು ಸದಾಶಿವನಗರದಲ್ಲಿರುವ `ನವರಸ ನಟನ ಅಕಾಡೆಮಿ’ಯಲ್ಲಿ ಆಡಿಷನ್ ನಡೆಯಲಿದ್ದು ತರಗತಿಗಳು ಫೆಬ್ರವರಿ 5ರಿಂದ ಶುರುವಾಗಲಿದೆ. ಹೆಚ್ಚಿನ ಮಾಹಿತಿಗಾಗಿ: ಮಾಲೂರು ಶ್ರೀನಿವಾಸ್ (99452 66271)ರನ್ನು ಸಂಪರ್ಕಿಸಬಹುದು