ಮಾಯಾಬಜಾರ್ ಮುಹೂರ್ತ
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಪಿ.ಆರ್.ಕೆ ಸಂಸ್ಥೆಯಲ್ಲಿ ಹೊಸ ಪ್ರತಿಭೆಗಳಿಗೆ ನಿರಂತರವಾಗಿ ಅವಕಾಶ ಸಿಗಲಿದೆಯಂತೆ. ಹಾಗಂತ ಎಲ್ಲರಿಗೂ ಅವಕಾಶ ಸಿಗುವುದಿಲ್ಲ ಯಾರಲ್ಲಿ ಸಾಮರ್ಥ್ಯ, ಪ್ರತಿಭೆ ಇರುತ್ತೋ ಅಂಥವರನ್ನು ಹುಡುಕಿ ಒಂದು ಸುವರ್ಣ ಅವಕಾಶವನ್ನು ಈ ಸಂಸ್ಥೆ ನೀಡಲಿದೆ. ಈ ಮೂಲಕ ಸದಭಿರುಚಿಯ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಪುನೀತ್ ರಾಜ್ ಕುಮಾರ್. ಈಗಾಗಲೇ ಕವಲುದಾರಿ ಎಂಬ ಚಿತ್ರವನ್ನು ನಿರ್ಮಿಸಿ ಎಂಬತ್ತು ರಷ್ಟು ಚಿತ್ರೀಕರಣವನ್ನು ಮುಗಿಸಿದ್ದಾರೆ. ಹಾಗೆಯೇ ಮಾಯಾ ಬಜಾರ್ ಚಿತ್ರವನ್ನು ಈಗ ಆರಂಭಿಸಿದ್ದು ಉತ್ತಮ ಕಥೆ ಹಾಗೂ ಬಜೆಟ್ ಪ್ಲಾನ್ ನೊಂದಿಗೆ ಬಂದರೆ ಖಂಡಿತ ಈ ಸಂಸ್ಥೆಯಿಂದ ನಿರಂತರವಾಗಿ ಚಿತ್ರಗಳನ್ನು ನಿರ್ಮಿಸಲಿದ್ದಾರಂತೆ.
ಮಾಯಾಬಜಾರ್ ಈ ಪದ ಕೇಳಿದೊಡನೆ ಟಾಲಿವುಡ್ನಲ್ಲಿ ದಾಖಲೆ ನಿರ್ಮಿಸಿದ್ದ ಮಾಯಾಬಜಾರ್ ಚಿತ್ರದತ್ತ ಚಿತ್ತ ಹರಿಯುತ್ತದೆ. ಅದೂ ಅಲ್ಲದೆ ಈಗ ಸ್ಯಾಂಡಲ್ವುಡ್ನಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ಚಿತ್ರ ಬರುತ್ತಿರುವ ಬೆನ್ನಲ್ಲೇ ಮಾಯಾಬಜಾರ್ ಎಂಬ ಚಿತ್ರವು ಸೆಟ್ಟೇರುತ್ತದೆ ಎಂಬ ಕುತೂಹಲ ಮೂಡುವುದು ಸಹಜ.
ಆದರೆ ಇದು ಪೌರಾಣಿಕ ಚಿತ್ರವಲ್ಲ , ಬದಲಿಗೆ ಈಗಿನ ಟ್ರೆಂಡ್ಗೆ ಇಷ್ಟವಾಗುವ ಸಬ್ಜೆಕ್ಟ್ ಅನ್ನು ಒಳಗೊಂಡಿರುವ ಸಿನಿಮಾ. ಪವರ್ಸ್ಟಾರ್ ಪುನೀತ್ ತಮ್ಮ ಪಿಆರ್ಕೆ ಪಿಕ್ಚರ್ಸ್ ಮೂಲಕ ತೆರೆಗರ್ಪಿಸಿ , ಅಶ್ವಿನಿ ಪುನೀತ್ರಾಜ್ಕುಮಾರ್ ಹಾಗೂ ಎಂ.ಗೋವಿಂದು ಅವರು ನಿರ್ಮಿಸುತ್ತಿರುವ ಸಿನಿಮಾ.
ರಾಧಾಕೃಷ್ಣ ನಿರ್ದೇಶಿಸುತ್ತಿರುವ ಈ ಮಾಯಾಬಜಾರ್ ಚಿತ್ರದಲ್ಲಿ ಮನರಂಜನೆಯ ಜೊತೆಗೆ ಪ್ರೇಕ್ಷಕರನ್ನು ನಕ್ಕು ನಲಿಸಲು ಹಾಸ್ಯವನ್ನು ಕೇಂದ್ರಿಕೃತವಾಗಿಸಿಕೊಂಡಿದೆಯಂತೆ. ಸಿವಿಎಲ್ ಎಂಜಿನಿಯರ್ ಆಗಿರುವ ರಾಧಾಕೃಷ್ಣ ಈ ಹಿಂದೆ ಕಿರುಚಿತ್ರವನ್ನು ನಿರ್ದೇಶನಿಸಿರುವ ಅನುಭವ ಇದ್ದು , ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದಾರೆ.
ರಾಧಾಕೃಷ್ಣ ಅವರು ಮಾಯಾಬಜಾರ್ನ ಕಥೆಯ ಎಳೆಯನ್ನು ಹೇಳಿದ ಕೂಡಿ ಮೆಚ್ಚಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರಂತೆ. ಚಿತ್ರಕ್ಕೆ ಮಾಯಾಬಜಾರ್-2016 ಎಂದಿಟ್ಟಿದ್ದು ಆ ವರ್ಷ ನಡೆದ ಕೆಲವು ಘಟನೆಗಳನ್ನೇ ಕೇಂದ್ರೀಕರಿಸಲಾಗಿದ್ದು ಚಿತ್ರಕ್ಕೆ ಇದೇ 29 ರಂದು ಬೆಂಗಳೂರಿನಲ್ಲಿ ಚಿತ್ರೀಕರಿಸುವುದರ ಜೊತೆಗೆ ವಿದೇಶದಲ್ಲೂ ಚಿತ್ರೀಕರಣ ನಡೆಸಲಿದ್ದಾರಂತೆ. ಮೊನ್ನೆ ಕಂಠೀರವಾ ಸ್ಟುಡಿಯೋದಲ್ಲಿ ಮುಹೂರ್ತ ನಡೆದಿದ್ದು , ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮೊದಲ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ಕಥೆಯೇ ಪ್ರಮುಖವಾಗಿರುವ ಈ ಚಿತ್ರದಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಾಯಕ ವಸಿಷ್ಠ, ಒಂದು ಮೊಟ್ಟೆಯ ಕಥೆಯ ನಾಯಕ ರಾಜ್ ಬಿ.ಶೆಟ್ಟಿ ಹಾಗೂ ಜೋಡಿಹಕ್ಕಿ ಧಾರಾವಾಹಿಯ ಚೈತ್ರ ಅಭಿನಯಿಸುತ್ತಿದ್ದು, ಪ್ರಕಾಶ್ ರೈ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಉಳಿದಂತೆ ಅಚ್ಯುತ್ಕುಮಾರ್, ಸಾಧುಕೋಕಿಲ, ಸುಧಾರಾಣಿ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಹೊಂದಿದೆ. ಈ ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ, ಪವನ್ ಸಂಭಾಷಣೆ ಬರೆಯುತ್ತಿದ್ದು, ಈ ಚಿತ್ರ ಸಣ್ಣ ಸಣ್ಣ ವಿಚಾರಗಳನ್ನು ಕೂಡ ಸೂಕ್ಷ್ಮವಾಗಿ ತೆರೆ ಮೇಲೆ ತರುವ ಪ್ರಯತ್ನವನ್ನು ತಂಡ ಮಾಡುತ್ತಿದೆ. ಪಿಆರ್ಕೆ ಪ್ರೊಡಕ್ಷನ್ಸ್ ಮೂಲಕ ಮತ್ತಷ್ಟು ಉತ್ತಮ ಚಿತ್ರಗಳು ಹೊಮ್ಮಿಬರುವಂತಾಗಲಿ.