‘’ಮನಸೇ ನಿನ್ನ ದಾರಿಯು ಎಲ್ಲಿಗೆ’’ ವಿಡಿಯೋ ಆಲ್ಬಂ ಲೋಕಾರ್ಪಣೆ
ಚಿತ್ರರಂಗದಲ್ಲಿ ಇತ್ತೀಚೆಗೆ ಆಲ್ಬಂ ಮ್ಯೂಜಿಕ್ ಟ್ರೆಂಡ್ ಆಗುತ್ತಿದೆ. ಈ ಹಿಂದೆ ಹಾಲಿವುಡ್, ಬಾಲಿವುಡ್ ನಲ್ಲಿ ಮಾತ್ರ ಕೇಳಿಬರುತ್ತಿದ್ದ ಮ್ಯೂಜಿಲ್ ಆಲ್ಬಂ ಕನ್ನಡದಲ್ಲಿಯೂ ಹೆಚ್ಚು ಜನಪ್ರಿಯವಾಗುತ್ತಿದೆ. ಶರಣ್ ಮ್ಯೂಜಿಕ್ ಅಕಾಡೆಮಿ ಸಂಸ್ಥೆಯು ಕನ್ನಡ ಹಾಗೂ ಹಿಂದಿ ಭಾಷೆಯ ಎರಡು ವಿಡಿಯೋ ಆಲ್ಬಂಗಳನ್ನು ಹೊರತಂದಿದೆ. ಹಿಂದೂಸ್ಥಾನಿ ಗಾಯಕ ಶರಣ್ ಚೌದರಿ ಅವರ ಸಂಗೀತ ಸಂಯೋಜನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ‘’ಮನಸೇ ನಿನ್ನ ದಾರಿಯು ಎಲ್ಲಿಗೆ’’ ಎಂಬ ಕನ್ನಡದ ವಿಡಿಯೋ ಆಲ್ಬಂ ಹಾಗೂ ಏ ಮನ್ ಕಹಾನ್ ಚಲಾ ಎಂಬ ಹಿಂದಿ ವಿಡಿಯೋ ಆಲ್ಬಂಗಳ ಲೋಕಾರ್ಪಣೆ ಸಮಾರಂಭ ಮಲ್ಲೇಶ್ವರಂನ ಎಸ್.ಆರ್.ವಿ. ಥಿಯೇಟರ್ ನಲ್ಲಿ ನೆರವೇರಿತು. ಯುವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಈ ಎರಡು ಆಲ್ಬಂಗಳನ್ನು ಲೋಕಾರ್ಪಣೆ ಮಾಡಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿರ್ಮಾಪಕ ವಿಶ್ವ ಕಾರಿಯಪ್ಪ, ನವೀನ್ ಚಂದ್ರ, ಬಿಗ್ ಎಫ್ ಎಂ ನ ಆರ್.ಜೆ. ಶ್ರುತಿ ಸೇರಿದಂತೆ, ಹಲವರು ಆಗಮಿಸಿ ಶರಣ್ ಚೌದರಿ ಅವರ ಈ ಹೊಸ ಪ್ರಯತ್ನಕ್ಕೆ ಶುಭ ಕೋರಿದರು. ಈ ವಿಡಿಯೋ ಆಲ್ಬಂನಲ್ಲಿ ಅನುರಾಧ ಭಟ್ ಹಾಗೂ ರುಮಿತ್ ಕೆ. ಅವರ ಗಾಯನವಿದ್ದು, ಧನುಶ್ರೀ ಹಾಗೂ ರುಮಿತ್ ಅವರ ಅಭಿನಯವಿದೆ. ವಿಜಯ್ ಅವರ ಸಾಹಿತ್ಯ ಹಾಗೂ ಟಗರು ಖ್ಯಾತಿಯ ರಾಜು ಈ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ.
ಸಮಾರಂಭಕ್ಕೂ ಮುನ್ನ ಈ ಎರಡು ವಿಡಿಯೋ ಸಾಂಗ್ ಗಳನ್ನು ತೆರೆಯ ಮೇಲೆ ಪ್ರದರ್ಶಿಸಲಾಯಿತು. ನಂತರ ಈ ಆಲ್ಬಂಗಳ ಕುರಿತಂತೆ ಮಾತನಾಡಿದ ಶರಣ್ ಚೌದರಿ ನಾನು ಈ ಹಿಂದೆ ಗೆಳೆತನ ಎಂಬ ಮ್ಯೂಜಿಕ್ ಆಲ್ಬಂ ಮಾಡಿದ್ದೆ. ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಸಂಗೀತ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ನಾನು ಏನಾದರೂ ಹೊಸತನ್ನು ನೀಡಬೇಕು ಹಾಗೂ ಹೊಸ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ನಿಟ್ಟಿನಲ್ಲಿ ಈ ಎರಡು ಸಂಗೀತ ಗುಚ್ಚಗಳನ್ನು ಹೊರತಂದಿದ್ದೇನೆ. ಇಂದಿನಿಂದ ಸೋಷಿಯಲ್ ಮೀಡಿಯಾಗಳಲ್ಲಿ ಈ ಹಾಡುಗಳನ್ನು ವೀಕ್ಷಿಸಬಹುದಾಗಿದೆ. ಈ ಆಲ್ಬಂಗಳ ನಿರ್ಮಾಣದಲ್ಲಿ ನನ್ನ ಹಲವಾರು ಸ್ನೇಹಿತರು ಕೈಜೋಡಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಈ ಹಾಡುಗಳನ್ನು ಚಿತ್ರೀಕರಿಸಿದ್ದೇವೆ. ಈ ರೊಮ್ಯಾಂಟಿಕ್ ಡ್ಯುಯೆಟ್ ಹಾಡುಗಳು ಸಂಗೀತ ಪ್ರಿಯರನ್ನು ತಕ್ಷಣವೇ ಸೆಳೆಯುವಂತಿದೆ. ಜನಪ್ರಿಯ ಆಲ್ಬಂಗಳ ಸಾಲಿಗೆ ನಮ್ಮ ಈ ಆಲ್ಬಂ ಕೂಡ ಸೇರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.