ಮಾನಸ ಸರೋವರ ದಲ್ಲಿ ಅದ್ದೂರಿ ಮದುವೆ
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಯಶಸ್ವಿ ಧಾರಾವಾಹಿ, ಮಾನಸ ಸರೋವರ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಲನಚಿತ್ರದ ಮುಂದುವರೆದ ಭಾಗವಾಗಿ ಶುರುವಾದ ಕಥೆ, ಶ್ರೀನಾಥ್, ರಾಮಕೃಷ್ಣ, ಪದ್ಮಾ ವಾಸಂತಿಯರನ್ನು ಅದೇ ಪಾತ್ರಗಳಲ್ಲಿ ಮುಂದುವರೆಸಿದ ಕ್ರಿಯಾಶೀಲತೆಯ ಹೆಮ್ಮೆಯ ಧಾರಾವಾಹಿ. ತನ್ನ ವಿಶೇಷ ಕಥಾಹಂದರದಿಂದ ಈ ಧಾರಾವಾಹಿ ಆರಂಭದಿಂದ ಇಲ್ಲಿಯವರೆಗೂ ಎಲ್ಲ ವರ್ಗದ ವೀಕ್ಷಕರ ಪ್ರೀತಿಗೆ ಪಾತ್ರವಾಗಿದೆ.
ಸಂತೋಷ್-ವಾಸಂತಿ ಮಗಳು ಸುನಿಧಿ, ಮಾನಸಿಕ ವೈದ್ಯೆ, ಡಾ.ಆನಂದ್ಗೆ ಚಿಕಿತ್ಸೆ ನೀಡುತ್ತಿರುತ್ತಾಳೆ. ತನ್ನ ತಂದೆ-ತಾಯಿಯೇ ಡಾ.ಆನಂದ ಮಾನಸಿಕ ಖಿನ್ನತೆಗೆ ಕಾರಣರಾದವರು ಎಂದು ತಿಳಿದು, ತನ್ನ ತಂದೆ ತಾಯಿ ಡಾ.ಆನಂದ್ರನ್ನು ಕೊಲೆ ಮಾಡಲು ಸಹ ಮುಂದಾಗಿದ್ದರು ಎಂಬ ತಪ್ಪು ಕಲ್ಪನೆಯಲ್ಲಿ ಅವರನ್ನು ದ್ವೇಷ ಮಾಡಲು ಶುರು ಮಾಡುತ್ತಾಳೆ. ತನ್ನ ನಿಶ್ಚಿತಾರ್ಥವನ್ನೂ ರದ್ದು ಮಾಡಿಕೊಂಡ ಸುನಿಧಿಗೆ ಕೊನೆಗೆ ಡಾ. ಆನಂದರೇ ಮನವೊಲಿಸಿ, ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಎಲ್ಲರನ್ನೂ ಒಂದು ಮಾಡುತ್ತಾರೆ, ಸುನಿಧಿ-ಚಿಂತನ್ ಮದುವೆಗೆ ಅಣಿಮಾಡಿಕೊಡುತ್ತಾರೆ.
ಆದರೆ ಡಾ. ಆನಂದ್ಗೆ ಎದುರಾದ ದೊಡ್ಡ ತಡೆಯೆಂದರೆ ಸುನಿಧಿ ತಂಗಿ ಶರಧಿ, ಅವಳೂ ಕೂಡ ಚಿಂತನ್ನನ್ನು ಪ್ರೀತಿಸುತ್ತಿದ್ದಾಳೆ. ಯಾವುದೇ ಕಾರಣಕ್ಕೂ ಚಿಂತನ್ ನನ್ನಿಂದ ದೂರಾಗಲು ಬಿಡುವುದಿಲ್ಲʼ ಎಂದು ಹುಚ್ಚು ಹಠಕ್ಕೆ ಬಿದ್ದು, ಬೇರೆ ಯಾವ ಸಂಬಂಧಗಳನ್ನೂ ಲೆಕ್ಕಿಸದೇ ಎಲ್ಲರಿಗೂ ನೋಯಿಸಿ ಅವನನ್ನು ಪಡೆಯುವ ಹಠಕ್ಕೆ ಬೀಳುತ್ತಾಳೆ.
ಸುನಿಧಿ-ಚಿಂತನ್ ಮದುವೆ ತಯಾರಿಯಲ್ಲಿ ಮನೆಯವರೆಲ್ಲಾ ಸಂಭ್ರಮಿಸುತ್ತಿರಲು, ತನ್ನ ಪ್ರೀತಿ ತನಗೇ ಬೇಕೆಂದು ತಂದೆ-ತಾಯಿಯ ಮುಂದೆ ಹಠ ಮಾಡಿ ಎಲ್ಲರನ್ನೂ ಚಿಂತೆಗೀಡು ಮಾಡುತ್ತಾಳೆ. ಮನೆಯವರು ಇವಳ ಮಾತಿಗೆ ಬೆಲೆ ಕೊಡದಿದ್ದಾಗ ಅವಳು ಸುನಿಧಿಯ ಬಳಿಯೇ ಹೋಗಿ ಚಿಂತನ್ನನ್ನು ಬಿಟ್ಟುಕೊಡಲು ಹೇಳುತ್ತಾಳೆ. ಸುನಿಧಿ ಕೂಡ ಚಿಂತನ್ನನ್ನು ಬಿಟ್ಟು ಕೊಡಲಾರೆ ಎಂದು ಹೇಳಲು ಶರಧಿಗೆ ಭೂಮಿಯೇ ತಲೆಕೆಳಗಾದಂತಾಗುತ್ತದೆ.
ಇವರೆಲ್ಲರ ವಿರೋಧದ ನಡುವೆ ಶರಧಿ ಮದುವೆ ತಪ್ಪಿಸಲು ಮಾಡುವ ಹುನ್ನಾರಗಳೇನು? ಸುನಿಧಿ-ಚಿಂತನ್ ಮದುವೆ ಸರಾಗವಾಗಿ ನಡೆಯುತ್ತಾ, ಇಲ್ಲವಾ ಎಂಬ ಕುತೂಹಲಗಳಿಂದ ಮದುವೆ ಸಂಚಿಕೆಗಳು ಸಾಗುತ್ತಿದ್ದರೆ, ಡಾ.ಆನಂದ್ ಗೆ ಶರಧಿಯ ಒಳಗಡಗಿದ ಬೇರೆಯೇ ಒಂದು ಪ್ರಪಂಚ ಕಾಣಲು ಶುರುವಾಗಿ ಆತಂಕಕ್ಕೊಳಗಾಗುತ್ತಾರೆ. ಶರಧಿಯ ಆ ಮನಸ್ಥಿತಿ ಯಾವುದು, ಅದು ಇಡೀ ಸಂಸಾರಕ್ಕೆ, ಮುಖ್ಯವಾಗಿ ಸುನಿಧಿ-ಚಿಂತನ್ ಬಾಳಲ್ಲಿ ಹೇಗೆ ಪರಿಣಾಮ ಬೀಳಲಿದೆ ಎಂಬ ರಹಸ್ಯ ಮತ್ತು ಕುತೂಹಲಗಳನ್ನು ಹೊತ್ತು ತರಲಿವೆ.
ಈ ವಿಶೇಷ ಕಂತುಗಳನ್ನು ನಗರದ ಹೊರವಲಯದ ಭವ್ಯವಾದ ಕನ್ವೆನ್ಶನಲ್ ಹಾಲ್ನಲ್ಲಿ ಅದ್ದೂರಿಯಾಗಿ ಸಾಂಪ್ರದಾಯಿಕ ಸೆಟ್ನಲ್ಲಿ ಸತತ 4 ದಿನ ಶೂಟ್ ಮಾಡಲಾಯಿತು. ರಂಗುರಂಗಿನ ಉಡುಗೆಯಲ್ಲಿ ಎಲ್ಲಾ ಕಲಾವಿದರೂ ಮಿಂಚುತ್ತಾ ಆಟ, ನೃತ್ಯಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿದ್ದಾರೆ.
ಈ ಎಲ್ಲಾ ಮನೋರಂಜನೆ, ಕುತೂಹಲಗಳನ್ನು ಹೊತ್ತು ತರುತ್ತಿರುವ ವಿಜ್ರಂಭಣೆಯ ‘ಮಾನಸ ಸರೋವರ’ ಸಂಚಿಕೆಗಳನ್ನು ಸೋಮವಾರದಿಂದ ಶುಕ್ರವಾರ ರಾತ್ರಿ9.30 ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.
ಮಾನಸ ಸರೋವರ ಸೋಮ – ಶುಕ್ರ ರಾತ್ರಿ 9:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ.