ಕುಸ್ತಿ ಚಿತ್ರದ ಟೀಸರ್ ಬಿಡುಗಡೆ
ಜೂನ್ 17 ಭಾನುವಾರ ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಮಕ್ಕಳು ಆಚರಿಸಿದರು. ಅಂದು ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಹುಟ್ಟಹಬ್ಬ ಕೂಡ. ಸಾಮ್ರಾಟ್ ವಿಜಯ್ ಮೊದಲಬಾರಿ ನಟನೆ ಮಾಡುತ್ತಿರುವ ‘ಕುಸ್ತಿ’ ಚಿತ್ರದ ಟೀಸರ್ ಅಂದು ಬಿಡುಗಡೆಯಾಯಿತು. ಮಗನ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಅಪರೂಪದ ಉಡುಗೊರೆ ನೀಡಿದ್ದಾರೆ ದುನಿಯಾ ವಿಜಯ್.
ಎರಡು ನಿಮಿಷದ ಟೀಸರ್‍ನಲ್ಲಿ ಸಾಮ್ರಾಟ್ ವಿಜಯ್ ಕಟ್ಟಮಸ್ತಾದ ಎದುರಾಳಿ ಹುಡುಗನನ್ನು ನೆಲಕ್ಕೆ ಉರುಳಿಸುತ್ತಾನೆ. ಮತ್ತೊಬ್ಬ ಅಲ್ಲಿಗೆ ಬಂದು ನಿನ್ನೆ ಮೊನ್ನೆ ಕುಸ್ತಿ ಕಲಿತು ಗೆದ್ದೆ ಅಂತ ಫೋಸ್ ಕೊಡಬೇಡ. ಅಖಾಡ ಏನು ನಿಮ್ಮ ಅಪ್ಪನದಲ್ಲಾ ಎದ್ದು ನಡಿ ಅಂತ ಜೋರಾಗಿ ಮಾತಾಡುತ್ತಾನೆ. ಅಪ್ಪನ ಸುದ್ದಿಗೆ ಬರಬೇಡ. ನಿನ್ನಂಥ ಸಾವಿರ ಪೈಲ್ವಾನ್‍ಗಳಿಗೆ ನಮ್ಮಪ್ಪ ಒಬ್ಬನೆ ಉಸ್ತಾದ್ ಎಂದು ಸಾಮ್ರಾಟ್ ವಿಜಯ್ ಹೇಳುವ ಸಂಭಾಷಣೆ ನೋಡಿದಾಗ ದುನಿಯಾ ವಿಜಯ್ ಅವರ ಅಭಿನಯ ನೋಡಿದ ಹಾಗೆ ಭಾಸವಾಗುತ್ತದೆ.
ವಿಜಯ್ ಉಸ್ತಾದ್ ಪಾತ್ರವನ್ನು ಮಾಡುತ್ತಿದ್ದಾರೆ. ಅಮೀರ್‍ಖಾನ್ ಅವರ ದಂಗಲ್ ಚಿತ್ರದ ಒಂದು ದೃಶ್ಯ ನೋಡಿ ಸಿನಿಮಾ ಮಾಡಲು ಸ್ಪೂರ್ತಿ ಬಂತು. ಹಾಗಂತ ಸುಲ್ತಾನ್, ದಂಗಲ್ ಚಿತ್ರದ ಕತೆಗೂ ಈ ಚಿತ್ರದ ಕತೆಗೂ ಸಂಬಂಧವಿಲ್ಲ.
ಮಗನ ಉತ್ಸಾಹ ನೋಡಿ ಖುಷಿಯಾಗಿರುವ ದುನಿಯಾ ವಿಜಯ್ `ಅವನು ಈಗ ಶ್ರಮ ಪಟ್ಟರೆ ಮುಂದೆ ಜನರು ಶಿಳ್ಳೆ ಹೊಡೆಯುತ್ತಾರೆ. ದೇಸಿ ಕುಸ್ತಿಯಲ್ಲಿ ಎಲ್ಲರಿಗೂ ಇಷ್ಟವಾಗುವಂತ ಸನ್ನಿವೇಶಗಳು ಚಿತ್ರದಲ್ಲಿ ಬರಲಿದೆ` ಎಂದು ತಿಳಿಸಿದ್ದಾರೆ.
ಕಿರುಚಿತ್ರ ಚೌಕಬಾರ, ಕಳೆದ ತಿಂಗಳು ಬಿಡುಗಡೆಯಾಗಿದ್ದ ಚೂರಿಕಟ್ಟೆ ನಿರ್ದೇಶನ ಮಾಡಿದ್ದ ರಾಘು ಶಿವಮೊಗ್ಗ ಅವರು `ಕುಸ್ತಿ` ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಟದಲ್ಲಿ ಸೋಲು-ಗೆಲುವು ಇದೆ ಇರುತ್ತದೆ. ಎರಡನ್ನು ಕ್ರೀಡೆಯಾಗಿ ತೆಗೆದುಕೊಳ್ಳಬೇಕು. ಅದನ್ನು ಪ್ರತಿಷ್ಟೆಯಾಗಿ ನೋಡಿದಾಗ ಏನೇನು ಜರಗುತ್ತದೆ ಎಂಬುದು ಕತೆಯ ತಿರುಳು. ಅಪ್ಪಾಸಿ ತೇರದಾಳ್ ಮತ್ತು ಬೀರೇಶ್ ಅವರಿಂದ ಎಂಟು ತಿಂಗಳ ತರಭೇತಿಯನ್ನು ಇಬ್ಬರು ಪಡೆದುಕೊಂಡಿದ್ದಾರೆ. ಇಬ್ಬರು ನಾಯಕಿಯರು, ಇತರೆ ಪಾತ್ರಗಳಿಗಾಗಿ ಆಯ್ಕೆ ನಡೆಯುತ್ತಿದೆ. ಸಾಂಪ್ರದಾಯಿಕ ಕ್ರೀಡೆಯನ್ನು ಕಮರ್ಷಿಯಲ್ ಚಿತ್ರದಂತೆ ಸಿದ್ದಪಡಿಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.
ಅಪ್ಪನೊಂದಿಗೆ ಕೇಕ್ ಕತ್ತರಿಸಿದ ಸಾಮ್ರಾಟ್ ವಿಜಯ್ ತರಭೇತಿ ಪಡೆಯುವಾಗ ಕೆಲವೊಮ್ಮೆ ಮಾಸ್ಟರ್ ಮೇಲೆ ಕೋಪ ಬಂದಿತ್ತು. ಇವತ್ತು ಟೀಸರ್ ನೋಡಿದಾಗ ಎಲ್ಲವು ಮರೆತುಹೋಯಿತು ಎಂಬ ಮುಗ್ದತೆ ಮಾತುಗಳು ಕೇಳಿಬಂದವು.
ಚಿತ್ರದ ಐದು ಹಾಡುಗಳಿಗೆ ರಾಗಗಳನ್ನು ಹೊಸೆಯುತ್ತಿರುವುದು ನವೀನ್‍ಸಜ್ಜು, ಛಾಯಾಗ್ರಹಣ ಶಾಂತಿಸಾಗರ್ ಅವರದಾಗಿದೆ. ದುನಿಯಾ ಟಾಕೀಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರವು ಆಗಸ್ಟ್‍ನಲ್ಲಿ ಮಹೂರ್ತ ಆಚರಿಸಿಕೊಳ್ಳಲಿದೆ.