ಕೆರೂರ್ ಟು ಹಾಯ್‍ಬೆಂಗ್ಳೂರ್!
ರಂಗಭೂಮಿಯಿಂದ ಕಿರುತೆರೆ, ಕಿರುತೆರೆಯಿಂದ ಹಿರಿತೆರೆಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಗೋಪಿ ಕೆರೂರ್ ಇಂದು ಎರಡು ಚಿತ್ರಗಳ ನಿರ್ದೇಶಕ. ತಮ್ಮ ಚೊಚ್ಚಲ ನಿರ್ದೇ ಶನದ `ರಂಕಲ್‍ರಾಟೆ’ ಚಿತ್ರದ ಮೂಲಕ ತಾನೋಬ್ಬ ಸಮರ್ಥ ನಿರ್ದೇಶಕ ಎಂದು ಪ್ರೂವ್ ಮಾಡಿಕೊಂಡಿದ್ದ ಗೋಪಿ ಕೆರೂರ್ ಅವರ ಹೊಸ ಚಿತ್ರ `ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ ಈ ಸಂದರ್ಭದಲ್ಲಿ ಈ ನವನಿರ್ದೇಶಕನ ಕಿರು ಪರಿಚಯ ಮಾಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಅಮ್ಮನ ಒತ್ತಾಸೆಗಾಗಿ ಚಿತ್ರ ನಿರ್ದೇಶನದ ಕನಸನ್ನು ಹೊತ್ತಿದ್ದ ಗೋಪಿ ಕೆರೂರ್ ಅವರ ಮೂಲ ಹೆಸರು, ವಿಠ್ಠಲ್ ನಾಗಪ್ಪ ಬೆಳಗಿ. 1986ರಲ್ಲಿ ಇವರ ಹುಟ್ಟೂರಾದ ಕೆರೂರ್‍ನಲ್ಲಿ ಗುಡಿಗೇರಿ ಬಸವರಾಜು ನಿರ್ದೇಶನದ `ಸಿಂಧೂರ ಲಕ್ಷ್ಮಣ’ ನಾಟಕ ಶುರುವಾಗಿತ್ತು. ಆ ನಾಟಕದಲ್ಲಿ ಗುಡಿಗೇರಿಯವರು ಸಿಂಧೂರ ಲಕ್ಷ್ಮಣನ ಬಾಲ್ಯದ ಪಾತ್ರಕ್ಕಾಗಿ ಬಾಲ ನಟನನ್ನು ತಲಾಶ್ ಮಾಡುತ್ತಿದ್ದರು.. ಅದೇ ಸಮಯಕ್ಕೆ ಗೋಪಿಯವರ ತಾಯಿ ತನ್ನ ಮಗನ ಪ್ರತಿಭೆಯನ್ನು ನೋಡಿ ನಾಟಕಕ್ಕೆ ಸೇರಿಸಿದರು. ಅಲ್ಲಿಂದ ಪ್ರಾಂಭವಾಯ್ತು ಇವರ ಬಣ್ಣದ ಲೋಕದ ಜರ್ನಿ. ಹೀಗೆ ಪ್ರಾರಂಭವಾದ ನಟನೆ-ನಿರ್ದೇಶನದ ಹಸಿವು ಹೆಮ್ಮರವಾಗಿ ಬೆಳೆಯಿತು. ಆದರೆ, ಹಲವಾರು ಕಾರಣಕ್ಕೆ ಸಾಕಷ್ಟು ವರ್ಷಗಳ ಕಾಲ ಇವರು ಇಷ್ಟ ಪಟ್ಟ ಕೆಲಸದ ಬದಲಾಗಿ ಹೊಟ್ಟೆಪಾಡಿಗಾಗಿ ಗೋವಾ-ಬಾಂಬೆ ಸುತ್ತುವಂತಾಯಿತು. ಎಷ್ಟೇಕಡೆ ಹೋದರು ಇವರಲ್ಲಿದ್ದ ಬಣ್ಣದ ಹಸಿವು ಕಡಿಮೆಯಾಗಲಿಲ್ಲ. ತನ್ನ ಅಮ್ಮನ ಅಣತಿಯಂತೆ ಮತ್ತೆ ಬೆಂಗಳೂರಿಗೆ ಬಂದ ಗೋಪಿ, ಸೇರಿಕೊಂಡಿದ್ದು `ಹಾಯ್ ಬೆಂಗ್ಳೂರ್’ ಸಮ್ರಾಜ್ಯವನ್ನು. ಅಲ್ಲಿ ರವಿಬೆಳೆಗೆರೆಯವರ ಸಾಂಗತ್ಯದಲ್ಲಿ ಸಾಕಷ್ಟು ವರ್ಷ ಕೆಲಸಮಾಡಿಕೊಂಡಿದ್ದರು.
ಆದರೆ, ಮಗನ ಕನಸು ನನಸಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದ ಅವರಮ್ಮ 1999ರಲ್ಲಿ ಗೋಪಿಯನ್ನು ಆದರ್ಶ ಫಿಲ್ಮ್ ಇನ್ಟಿಟ್ಯೂಟ್ ಸೇರಿಸಿದರು. ದೊರೈ ಭಗವಾನ್ ಪ್ರಿನ್ಸಿಪಾಲ್ ಆಗಿದ್ದ ಆ ಇನ್ಟಿಟ್ಯೂಟ್‍ನಲ್ಲಿ ಡಿ.ಎಫ್.ಎ (ಡಿಪ್ಲೋಮ ಇನ್ ಫಿಲ್ಮ್ ಅ್ಯಕ್ಟಿಂಗ್) ಮುಗಿಸಿ, ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಡಿ.ರಾಜೇಂದ್ರ ಬಾಬು ನಿರ್ದೇಶನದ `ಕೃಷ್ಣಲೀಲೆ’ ಅನ್ನುವ ಚಿತ್ರಕ್ಕೆ ಕ್ಲಾಪ್‍ಬಾಯ್ ಆಗಿ ದುಡಿದರು. ಇದಾದನಂತರ.. ಬಾನಲ್ಲೂ ನೀನೆ ಭುವಿಯಲ್ಲೂ ನೀನೆ.. ಗಲಾಟೆ ಅಳಿಯಂದ್ರು.. ಲಾ ಅಂಡ್ ಆರ್ಡರ್.. ಹೀಗೆ ಎಸ್.ನಾರಾಯಣ್.. ಶಿವಮಣಿಯಂತಹ ದಿಗ್ಗಜ ನಿರ್ದೇಶಕರ ಜೊತೆ ಕೆಲಸ ಮಾಡಿದರು. ಸಿನಿಮಾ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ರಂಗಭೂಮಿ ಚಟುವಟಿಕೆಯಲ್ಲಿ ಸಕ್ರೀಯರಾಗಿರುತ್ತಿದ್ದ ಗೋಪಿ, ಅಲ್ಲಿ ಎಮ್.ಎಸ್.ಸತ್ಯು, ಕೃಷ್ಣಮೂರ್ತಿ ಕವತ್ತಾರು, ಪ್ರಮೋದ್ ಶಿಗ್ಗಾಂವ್ ಮತ್ತು ಜೋಸೆಪ್ ಜಾನ್ ಅವರ ಜೊತೆಯಲ್ಲಿ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರು ನಟನೆಯ ಅವಕಾಶವನ್ನು ಕಲ್ಪಿಸಿದರೂ, ನಿರ್ದೇಶಕನಾಗಬೇಕು ಎಂಬ ಹಂಬಲದಿಂದ ನಿರಾಕರಿಸುತ್ತಿದ್ದರು. ಹೀಗೆ ಅರಂಭವಾದ ನಿರಂತರ ರಂಗ ಒಡನಾಟದಿಂದ ಹತ್ತು-ಹಲವು ನಾಟಕ ತಂಡಗಳಲ್ಲಿ ನಟನೆ, ನಿರ್ದೇಶನ, ರಂಗಸಜ್ಜಿಕೆ.. ರಂಗಭೂಮಿಯ ಹಲವು ವಿಭಾಗಗಳಲ್ಲಿ ಪರಿಣಿತಿಯನ್ನು ಪಡೆದರು ಗೋಪಿ. ದೇಶದ್ಯಾಂತ ನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡ ಇವರಿಗೆ ಆ ಅನುಭವವೇ ಮುಂದಿನ ಸಿನಿಪಯಣಕ್ಕೆ ದಾರಿದೀಪವಾಯ್ತು.
ಮುಂದೆ ಗೋಪಿಯವರು ಅಮ್ಮನ ಆಸೆಯಂತೆ ನಿರ್ದೇಶಕರಾಗಲು ಎದುರಿಸಿದ ನೋವುಗಳೇನು..? ನಿರ್ದೇಶನಕ್ಕೂ ಮುಂಚೆ ಸಿನಿಪಯಣದಲ್ಲಿ ಅವರ ಬದುಕಿನ ದಿಕ್ಕನ್ನೇ ಬೆಲಿಸಿದ ಆ ಘಟನೆ ಯಾವುದು..? ಹೀಗೆ ಸಾಕಷ್ಟನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ..
..ಮುಂದುವರೆಯುವುದು